ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ – ಇನ್ಮುಂದೆ ಎಲ್ಲಾ ವಾರದಲ್ಲೂ ಐದೇ ದಿನ ಕೆಲಸ!

ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ – ಇನ್ಮುಂದೆ ಎಲ್ಲಾ ವಾರದಲ್ಲೂ ಐದೇ ದಿನ ಕೆಲಸ!

ನವದೆಹಲಿ: ದೇಶದ ಬ್ಯಾಂಕ್ ಉದ್ಯೋಗಿಗಳಿಗೊಂದು ಖುಷಿ ಸುದ್ದಿಯಿದೆ. ಸದ್ಯದಲ್ಲೇ ದೇಶದ ಬ್ಯಾಂಕಿಂಗ್‌ ವಲಯದ ಕೆಲಸದ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಇನ್ನುಮುಂದೆ ಬ್ಯಾಂಕ್ ಗಳಲ್ಲಿ ವಾರಕ್ಕೆ ಐದು ದಿನ ಮಾತ್ರ ಉದ್ಯೋಗಿಗಳಿಗೆ ಕೆಲಸ ಇರಲಿದೆ  ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಆಕಾಶದಲ್ಲಿ ಗುರು, ಶುಕ್ರ ಜೋಡಿಯ ಚಮತ್ಕಾರ – ಬರಿಗಣ್ಣಿಗೂ ಕಾಣುತ್ತಿದೆ ಪ್ರಕೃತಿಯ ವಿಸ್ಮಯ!

ಇಷ್ಟು ದಿನ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮಾತ್ರ ಬ್ಯಾಂಕ್ ಗಳಿಗೆ ರಜೆ ಇತ್ತು. ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ಬ್ಯಾಂಕ್ ಉದ್ಯೋಗಿಗಳಿಗೆ ವಾರದ ರಜೆ ಇರಲಿದೆ. ಈಗಾಗಲೇ ಭಾರತೀಯ ಬ್ಯಾಂಕ್‌ ಅಸೋಸಿಯೇಶನ್‌ ಮತ್ತು ಯುನೈಟೆಡ್‌ ಫೋರಮ್‌ ಆಫ್ ಬ್ಯಾಂಕ್‌ ಎಂಪ್ಲಾಯೀಸ್‌ ನಡುವೆ ಮಾತುಕತೆ ಆರಂಭವಾಗಿದೆ. ಮೂಲಗಳು ಹೇಳಿರುವಂತೆ ಬ್ಯಾಂಕ್‌ ಅಸೋಸಿಯೇಶನ್‌, ವಾರದಲ್ಲಿ ಐದು ದಿನಗಳ ಕೆಲಸಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ ಎನ್ನಲಾಗಿದೆ.

ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌. ನಾಗರಾಜನ್‌ ಈ ಬಗ್ಗೆ ಮಾತನಾಡಿದ್ದು, ಕೇಂದ್ರ ಸರಕಾರವು ಎಲ್ಲ ಶನಿವಾರಗಳ ರಜೆ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಲಿದೆ. ಆರ್‌ಬಿಐ ಕೂಡ ನಮ್ಮ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡ ನಂತರ ಬ್ಯಾಂಕ್‌ ಕೆಲಸಕ್ಕೆ ತಕ್ಕನಾಗಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ನಿರ್ಧಾರ ಖಚಿತವಾದ ಬಳಿಕ ಮೊದಲಿಗೆ ಕೇಂದ್ರ ವಿತ್ತ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಅದರ ಜೊತೆಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾಗೂ ಕಳುಹಿಸಿ, ಒಪ್ಪಿಗೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನುಮುಂದೆ ಪ್ರತಿ ಶನಿವಾರ ಬ್ಯಾಂಕ್ ಉದ್ಯೋಗಿಗಳಿಗೆ ರಜೆ ನಿಗಧಿಯಾದರೆ ಕೆಲಸದ ಅವಧಿಯೂ ಬದಲಾವಣೆಯಾಗಲಿದೆ. ಶನಿವಾರದ ರಜೆ ಬದಲಿಗೆ ಇತರ ದಿನಗಳಲ್ಲಿ 40ರಿಂದ 50 ನಿಮಿಷ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana