ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಸುಮಲತಾ ರಾಜಕೀಯ ಭವಿಷ್ಯ ಅತಂತ್ರ – ಮಂಡ್ಯ ಸಂಸದೆ ಮುಂದಿನ ನಡೆ ಬಗ್ಗೆಯೇ ಕುತೂಹಲ

ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಸುಮಲತಾ ರಾಜಕೀಯ ಭವಿಷ್ಯ ಅತಂತ್ರ – ಮಂಡ್ಯ ಸಂಸದೆ ಮುಂದಿನ ನಡೆ ಬಗ್ಗೆಯೇ ಕುತೂಹಲ

ನಾನು ಮಂಡ್ಯದ ಮಗ ಅಂಬರೀಶ್ ಹೆಂಡ್ತಿ. ನಿಮ್ಮೂರಿನ ಸೊಸೆ ಎನ್ನುತ್ತಲೇ ಸುಮಲತಾ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ರು. ಸ್ವಾಭಿಮಾನದ ಹೆಸರು, ಅನುಕಂಪದ ಅಲೆ ಮುಂದೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತು ಸುಣ್ಣವಾಗಿದ್ರು. ಆದ್ರೀಗ ಬದಲಾದ ಪರಿಸ್ಥಿತಿಯಲ್ಲಿ ಸುಮಲತಾ ರಾಜಕೀಯ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಸಂಸದೆ ಸುಮಲತಾ ಅಂಬರೀಶ್ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಬಿಜೆಪಿ ನಾಯಕರು ಸುಮಲತಾರಿಂದ ಅಂತರ ಕಾಯ್ದುಕೊಳ್ಳುತ್ತಿರೋದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಇದನ್ನೂ ಓದಿ : 2024ರ ಲೋಕಸಭಾ ಚುನಾವಣೆಗೆ ದಕ್ಷಿಣದಿಂದಲೇ ರಾಹುಲ್ ಗಾಂಧಿ ಅಖಾಡಕ್ಕೆ – ಕನ್ಯಾಕುಮಾರಿ ಅಥವಾ ಕರ್ನಾಟಕದಿಂದ ಸ್ಪರ್ಧೆ..?

ಮಂಡ್ಯ ಲೋಕಸಭಾ ಕ್ಷೇತ್ರ. ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲೊಂದು. ಈ ಹಿಂದೆ ಕಾಂಗ್ರೆಸ್ ಕೋಟೆಯಾಗಿದ್ದ ಮಂಡ್ಯ ನಂತರದ ದಿನಗಳಲ್ಲಿ ಜೆಡಿಎಸ್ ಭದ್ರಕೋಟೆಯಾಗಿ ಬದಲಾಗಿತ್ತು. ವಿಧಾನಸಭಾ ಕ್ಷೇತ್ರಗಳಲ್ಲೂ ದಳಪತಿಗಳೇ ಮೇಲುಗೈ ಸಾಧಿಸುತ್ತಿದ್ದರು. ಆದ್ರೆ ಬಿಜೆಪಿ ಪಾಲಿಗೆ ಸಕ್ಕರೆ ನಾಡು ಮಾತ್ರ ಯಾವಾಗಲೂ ಕಬ್ಬಿಣದ ಕಡಲೆಯೇ ಆಗಿದೆ. ಲೋಕಸಭಾ ಕ್ಷೇತ್ರದಲ್ಲಿ ಈವರೆಗೂ ಒಮ್ಮೆಯೂ ಬಿಜೆಪಿ ಅಭ್ಯರ್ಥಿ ಗೆದ್ದಿರುವ ಇತಿಹಾಸವೇ ಇಲ್ಲ. ಇಲ್ಲೇನಿದ್ರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ ಹಣಾಹಣಿ ಇರುತ್ತೆ. ಕಳೆದ ಬಾರಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ರು. ಬಳಿಕ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಿಗೆ ಸುಮಲತಾ ಬಿಜೆಪಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದರು. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರವನ್ನೂ ನಡೆಸಿದ್ರು. ಹೀಗಾಗಿ 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದಲೇ ಸುಮಲತಾ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿತ್ತು. ಆದ್ರೆ ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಭಾರೀ ಬದಲಾವಣೆಗಳು ಆಗ್ತಿವೆ.  ಬಿಜೆಪಿ ನಾಯಕರು ಸುಮಲತಾರಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದಾರೆ.

2019ರ ಲೋಸಕಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಗೆಲುವು ದಾಖಲಿಸಿದ್ದರು. 2023ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ತಮ್ಮ ಬೆಂಬಲ ಘೋಷಿಸ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸ್ತಾರೆ. 2024ರ ಲೋಕಸಭಾ ಚುನಾವಣೆಗೆ ಸುಮಲತಾಗೆ ಬಿಜೆಪಿಯಿಂದ ಟಿಕೆಟ್ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಬಿಜೆಪಿ ಜೆಡಿಎಸ್ ಮೈತ್ರಿ ಘೋಷಣೆ ಬಳಿಕ ಸುಮಲತಾರಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆಯಾ ಅನ್ನೋ ಅನುಮಾನ ಎದ್ದಿದೆ. ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಆಂತರಿಕ ಸಭೆಗಳಿಗೆ ಸುಮಲತಾರಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ ಈಗ ಮಂಡ್ಯ ಕಾರ್ಯಚಟುವಟಿಕೆಗಳಿಗೂ ಸುಮಲತಾರನ್ನು ಬಿಜೆಪಿ ಕರೆಯುತ್ತಿಲ್ಲ.  ಕಾವೇರಿ ವಿಚಾರವಾಗಿ ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದಾಗಲೂ ಸುಮಲತಾ ಅಂತರ ಕಾಯ್ದುಕೊಂಡಿದ್ರು. ಕಾವೇರಿ ಹೋರಾಟದಲ್ಲಿಯೂ ಸುಮಲತಾ ಕಾಣಿಸಿಕೊಳ್ಳದಿರೋದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕರು ಕೆಆರ್ ಎಸ್ ಡ್ಯಾಂ ವೀಕ್ಷಣೆ ವೇಳೆಯೂ ಸುಮಲತಾ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಸುಮಲತಾರಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತಿದೆಯಾ ಅನ್ನೋ ಅನುಮಾನ ಎದ್ದಿದೆ.

ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯ ಎಲ್ಲಾ ಸಭೆಗಳಿಗೂ ಸುಮಲತಾಗೆ ಆಹ್ವಾನ ಇರುತ್ತಿತ್ತು ಹಾಗೇ ಭಾಗಿಯಾಗುತ್ತಿದ್ರು ಕೂಡ. ಆದ್ರೀಗ ಬಿಜೆಪಿ ನಾಯಕರ ಕಾರ್ಯಕ್ರಮಗಳಿಂದ ಸುಮಲತಾರನ್ನ ದೂರ ಇಡಲಾಗ್ತಿದೆ ಎಂಬ ಮಾಹಿತಿ ಇದೆ. ಹೀಗಾಗಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಸುಮಲತಾಗೆ ರಾಜಕೀಯ ಭವಿಷ್ಯದ ಬಗ್ಗೆ ಟೆನ್ಷನ್ ಶುರುವಾಗಿದೆ. 7 ವಿಧಾನಸಭಾ ಕ್ಷೇತ್ರಗಳಿರುವ ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ.  ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಂಡ್ಯ ನಂತರ ಜೆಡಿಎಸ್ ತೆಕ್ಕೆಗೆ ಜಾರಿತ್ತು. ಹೀಗಾಗಿ ಕ್ಷೇತ್ರ ಹಂಚಿಕೆ ವೇಳೆ ಮಂಡ್ಯವನ್ನು ಜೆಡಿಎಸ್ ಕೇಳೋದು ಬಹುತೇಕ ಖಚಿತವಾಗಿದೆ. ಈವರೆಗೂ ಮಂಡ್ಯ ಲೋಕಸಭೆಯಲ್ಲಿ ಒಮ್ಮೆಯೂ ಗೆಲ್ಲದ ಬಿಜೆಪಿ ಕೂಡ ಈ ಡೀಲ್​ಗೆ ಒಪ್ಪಬಹುದು. ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದಿದ್ರೆ ಸುಮಲತಾಗೆ ಬಿಜೆಪಿ ಟಿಕೆಟ್ ಕೊಡಬೇಕು.  ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಸುಮಲತಾ ಬಿಜೆಪಿಯಿಂದ ಸ್ಪರ್ಧಿಸಬೇಕು. ಬಿಜೆಪಿಯಿಂದ ಸ್ಪರ್ಧಿಸಿದರೆ ಸುಮಲತಾಗೆ ಕಳೆದ ಬಾರಿಯಂತೆ ಮತ ಸಿಗದೆ ಇರಬಹುದು. ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಬಿಜೆಪಿಗೆ ಅಂತಹ ದೊಡ್ಡ ನಷ್ಟ ಏನೂ ಆಗುವುದಿಲ್ಲ. ಹಾಗೇನಾದ್ರೂ ಬಿಜೆಪಿಗೆ ಮಂಡ್ಯ ಕ್ಷೇತ್ರವನ್ನ ಬಿಟ್ಟುಕೊಟ್ಟರೆ ಜೆಡಿಎಸ್ ಗೆ ಮತ್ತೊಮ್ಮೆ ನಷ್ಟವಾಗಬಹುದು.  ಹಸನದ ಬಳಿಕ ಮಂಡ್ಯ ಕ್ಷೇತ್ರ ದಳಪತಿಗಳ ಪಾಲಿಗೆ ಭದ್ರಕೋಟೆ ಎನಿಸಿಕೊಂಡಿದೆ. ಒಕ್ಕಲಿಗರ ಪ್ರಾಬಲ್ಯ ಇರೋದ್ರಿಂದ ಜಿಲ್ಲೆಯಲ್ಲಿ ಜೆಡಿಎಸ್ ಕಡೆ ಹೆಚ್ಚಿನ ಒಲವು ಇದೆ. ಕಳೆದ ಬಾರಿ ಅನುಕಂಪದ ಆಧಾರದಲ್ಲಿ ಸುಮಲತಾ ಅಂಬರೀಶ್ ಗೆ ಹೆಚ್ಚಿನ ಮತ ಸಿಕ್ಕಿತ್ತು. ಚುನಾವಣೆ ಬಳಿಕ ಹಲವು ವಿಚಾರಗಳಲ್ಲಿ ಸುಮಲತಾ ಬಗ್ಗೆ ಮತದಾರರಲ್ಲಿ ಅಸಮಾಧಾನ ಇದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಜೆಡಿಎಸ್ ಸ್ಪರ್ಧಿಗೆ ಗೆಲುವು ಸಿಗಬಹುದು.

ಮಂಡ್ಯದಲ್ಲಿನ ರಾಜಕೀಯ ಬೆಳವಣಿಗೆಗಳನ್ನ ಗಮನಿಸಿದ್ರೆ 2019ರ ಲೋಕಸಭಾ ಚುನಾವಣೆಗೂ 2024ರ ಚುನಾವಣೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಳೆದ ಬಾರಿಯಂತೆ ಅಷ್ಟು ಸಲೀಸಾಗಿ ಸುಮಲತಾ ಗೆಲ್ಲೋದು ಕೂಡ ಕಷ್ಟವೇ. ಅಲ್ಲದೆ ಮಂಡ್ಯಕ್ಕಾಗಿ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಬೇರೆ ಯಾವುದೇ ಕ್ಷೇತ್ರಗಳಲ್ಲಿ ರಾಜಿ ಮಾಡಿಕೊಂಡರೂ ಹಾಸನ ಮತ್ತು ಮಂಡ್ಯವನ್ನ ದಳಪತಿಗಳು ಅಷ್ಟು ಈಸಿಯಾಗಿ ಬಿಟ್ಟುಕೊಡೋದಿಲ್ಲ. ಮುಂದಿನ ನಡೆ ಏನು ಬಗ್ಗೆಯೂ ಕುತೂಹಲ ಕೆರಳಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಕಾರಣ ಸುಮಲತಾಗೆ ಎಲ್ಲರಿಂದಲೂ ಬೆಂಬಲ ಸಿಕ್ಕಿತ್ತು. ಬಿಜೆಪಿ ಕಾರ್ಯಕರ್ತರ ಬಹಿರಂಗ ಬೆಂಬಲ, ಕಾಂಗ್ರೆಸ್ ನಿಂದಲೂ ಒಳಗೊಳಗೆ ಬೆಂಬಲ ದೊರಕಿತ್ತು. ಜೆಡಿಎಸ್ ಜೊತೆಗಿನ ಮೈತ್ರಿ ಇಷ್ಟವಿಲ್ಲದ ಕಾರಣ ಹಲವರು ಸುಮಲತಾ ಪರ ಕೆಲಸ ಮಾಡಿದ್ರು.  ಅಂಬರೀಶ್ ನಿಧನದ ಅನುಕಂಪ, ದರ್ಶನ್, ಯಶ್ ಪ್ರಚಾರದಿಂದ ಸುಮಲತಾಗೆ ಬಲ ಬಂದಿತ್ತು. ಆದರೆ ಈ ಬಾರಿ ಬಿಜೆಪಿಗೆ ಬಹಿರಂಗ ಬೆಂಬಲ ಘೋಷಿಸಿರೋದ್ರಿಂದ ಬಿಜೆಪಿ ಮತವಷ್ಟೇ ಸಿಗಬಹುದು. ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವೇ ಇಲ್ಲದಿರೋದ್ರಿಂದ ಬಿಜೆಪಿ ಕೂಡ ಮಂಡ್ಯವನ್ನ ಬಿಟ್ಟುಕೊಡಬಹುದು. ಬಿಜೆಪಿ ನಾಯಕರು ಸುಮಲತಾ ಅಂಬರೀಶ್ ಗೆ ಮನವರಿಕೆ ಮಾಡಿ ಒಪ್ಪಿಸಬಹುದು. ಮಂಡ್ಯದ ಬದಲು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡುವ ಬಗ್ಗೆಯೂ ಚರ್ಚೆ ನಡೀತಿದ್ಯಂತೆ. ಹೀಗಾಗಿ ಸುಮಲತಾ ಅಂಬರೀಶ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ. ಬಿಜೆಪಿ ನಾಯಕರ ಆಫರ್ ಗೆ ಒಪ್ಪದೆ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಲೂಬಹುದು. ಬೇರೆ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸದೆ ಇರಲೂಬಹುದು. ಹಾಗೇನಾದ್ರೂ ಮಂಡ್ಯ ಕ್ಷೇತ್ರ ಬಿಜೆಪಿ ಪಾಲಾದ್ರೆ ಸುಮಲತಾಗೆ ಟಿಕೆಟ್ ನೀಡಬಹುದು.

ಹೀಗೆ ಸುಮಲತಾ ಸದ್ಯ ಮುಂದೆ ಮೂರು ಆಯ್ಕೆಗಳಿವೆ.. ಆದ್ರೆ ಜೆಡಿಎಸ್ ಬಿಜೆಪಿ ಮೈತ್ರಿ ಕನ್ಫರ್ಮ್ ಆಗಿದ್ರೂ ಕೂಡ ಯಾರಿಗೆ ಯಾವ ಕ್ಷೇತ್ರ..? ಎಷ್ಟು ಕ್ಷೇತ್ರ ಅನ್ನೋದು ಫೈನಲ್ ಆಗಿಲ್ಲ.. ದಸರಾ ಮುಗಿದ ಬಳಿಕ ಅಮಿತ್ ಶಾ ಮತ್ತು ಹೆಚ್.ಡಿ ಕುಮಾರಸ್ವಾಮಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಇದು ಒಂದ್ಕಡೆಯಾದ್ರೆ ಇವರಿಬ್ಬರಿಗೂ ಶಾಕ್ ಕೊಟ್ಟು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಕೂಡ ಆಶ್ಚರ್ಯ ಇಲ್ಲ. ಯಾಕಂದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ ಮಳವಳ್ಳಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ನಾಗಮಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಗೆದ್ದಿದ್ದು, ಕೆ.ಆರ್ ಪೇಟೆ ಜೆಡಿಎಸ್ ಪಾಲಾಗಿದೆ. ಹೀಗಾಗಿ ಇಡೀ ರಾಜ್ಯದ್ದೇ ಒಂದು ಲೆಕ್ಕವಾದ್ರೆ ಮಂಡ್ಯದ ರಾಜಕೀಯವೇ ಮತ್ತೊಂದು ಲೆಕ್ಕ ಎಂಬಂತಾಗಿದೆ. ಈ ಎಲ್ಲಾ ಸವಾಲುಗಳ ನಡುವೆ ಸುಮಲತಾ ಮುಂದಿನ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

Shantha Kumari