ಚಿಕ್ಕಬಳ್ಳಾಪುರಕ್ಕೆ ಸುಮಲತಾ ಶಿಫ್ಟ್! – ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಕಣಕ್ಕೆ?

ಚಿಕ್ಕಬಳ್ಳಾಪುರಕ್ಕೆ ಸುಮಲತಾ ಶಿಫ್ಟ್! – ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಕಣಕ್ಕೆ?

ಏಕಾಂಗಿಯಾಗಿ ಅಖಾಡಕ್ಕಿಳಿದು ಸ್ವಾಭಿಮಾನಿಯಾಗಿ ಗೆದ್ದಿದ್ದ ಸಂಸದೆ ಸುಮಲತಾ ಅಂಬರೀಶ್ ಈಗ ಅಕ್ಷರಶಃ ಅತಂತ್ರರಾಗಿದ್ದಾರೆ. ಬಿಜೆಪಿಯನ್ನ ನಂಬಿ ಟಿಕೆಟ್ ಕೊಟ್ಟೇ ಕೊಡ್ತಾರೆ ಅಂತಾ ಕಾಯ್ತಿದ್ದ ಮಂಡ್ಯದ ಸೊಸೆಗೆ ಮರ್ಮಾಘಾತವಾಗಿದೆ. ಸಕ್ಕರೆನಾಡಿನ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿದ್ದು ಸುಮಲತಾ ರಾಜಕೀಯ ಭವಿಷ್ಯವೇ ಅಡಕತ್ತರಿಯಲ್ಲಿ ಸಿಲುಕಿದೆ. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ಬೇಕಾ ಇಲ್ಲ ಬೇರೆ ಕ್ಷೇತ್ರಕ್ಕೆ ವಲಸೆ ಹೋಗ್ಬೇಕಾ ಎಂಬ ಗೊಂದಲದಲ್ಲಿದ್ದಾರೆ. ಇದೇ ಕಾರಣಕ್ಕೆ ಮತ್ತೆ ದೆಹಲಿಗೆ ಹಾರಿರುವ ಸುಮಲತಾ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಹೈಕಮಾಂಡ್ ಸುಮಲತಾಗೆ ಹೊಸ ಆಫರ್ ನೀಡಿದೆ. ಅದೂ ಕೂಡ ಕ್ಷೇತ್ರ ಬದಲಾವಣೆ ಆಫರ್. ಮತ್ತೊಂದೆಡೆ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಸುಮಲತಾ ಅಂಬರೀಶ್ ಬೇರೆ ಕ್ಷೇತ್ರಕ್ಕೆ ವಲಸೆ ಹೋಗ್ತಾರಾ..? ಯಾವ ಕ್ಷೇತ್ರ..? ಕುಮಾರಣ್ಣನ ನಡೆ ಏನು..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಯೇ ಮೈತ್ರಿ ಅಭ್ಯರ್ಥಿ – ಮಂಡ್ಯ ಲೋಕಸಭಾ ಅಖಾಡದಲ್ಲಿ ಲೆಕ್ಕಾಚಾರಗಳು ಉಲ್ಟಾ..!

ಸುಮಲತಾ ಮತ್ತು ಜೆಡಿಎಸ್ ನಡುವೆ ಮಂಡ್ಯ ಕ್ಷೇತ್ರದ ಟಿಕೆಟ್ ಫೈಟ್ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಬಿಜೆಪಿ ಹೈಕಮಾಂಡ್ ಸುಮಲತಾಗೆ ಮಂಡ್ಯದ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದೆ. ಇದು ಸುಮಲತಾ ಅವ್ರ ಮುನಿಸಿಗೆ ಕಾರಣವಾಗಿದೆ. ಮಂಡ್ಯದಲ್ಲಿ ಸುಮಲತಾಗೆ ನಟ ಹಾಗೂ ರಾಜಕಾರಣಿ ಅಂಬರೀಶ್ ಅವರ ಅಪಾರ ಅಭಿಮಾನಿಗಳ ಬೆಂಬಲವಿದೆ. ಸ್ಟಾರ್ ನಟರು ಕೂಡ ಪ್ರಚಾರದ ಮೂಲಕ ಸುಮಲತಾ ಪರ ನಿಲ್ಲಲಿದ್ದಾರೆ.  ಹೀಗಾಗಿ ಸುಮಲತಾ ಮುನಿಸಿಕೊಂಡರೆ ಅವರಿಗಿರುವ ಅಪಾರ ಮತಗಳು ಮೈತ್ರಿ ಪಕ್ಷದ ಅಭ್ಯರ್ಥಿಗೆ ಕೈ ತಪ್ಪುವ ಸಾಧ್ಯತೆ ಇದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಸುಮಲತಾ ಪ್ರಚಾರ ಮಾಡಿದರೆ ಮಾತ್ರ ಅವರ ಮತಗಳು ಕೈಗೆಟುಕಲಿವೆ. ಹೀಗಾಗಿ ಸುಮಲತಾ ಮುನಿಸು ಶಮನ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಮಂಡ್ಯ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಸುಮಲತಾಗೆ ಆಫರ್ ನೀಡಲಾಗಿದೆ.

ಚಿಕ್ಕಬಳ್ಳಾಪುರದ ಬಿಜೆಪಿ ಹಾಲಿ ಸಂಸದ ಬಿ.ಎನ್ ಬಚ್ಚೇಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. ಈ ಕ್ಷೇತ್ರಕ್ಕಾಗಿ ಡಾ.ಕೆ ಸುಧಾಕರ್ ಮತ್ತು ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕ್ ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಸುಮಲತಾ ಪ್ರತಿನಿಧಿಸುವ ಮಂಡ್ಯ ಬಿಜೆಪಿ ಮೈತ್ರಿಕೂಟದ ಪಾಲುದಾರ ಜೆಡಿಎಸ್‌ಗೆ ಹೋಗಿರುವುದರಿಂದ ಪರ್ಯಾಯ ಸ್ಥಾನದಿಂದ ಟಿಕೆಟ್ ನೀಡುವಂತೆ ಸುಮಲತಾ ಕೂಡ ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ತೆಲುಗು ಭಾಷಿಕ ಮತದಾರರನ್ನು ಹೊಂದಿರುವ ಚಿಕ್ಕಬಳ್ಳಾಪುರದಿಂದ ಈಗಾಗ್ಲೇ ಬಲಿಜ ಸಮುದಾಯದ ಯುವ ಮುಖಂಡ ರಕ್ಷಾ ರಾಮಯ್ಯ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ಮುಂದಾಗಿದೆ. ಹೀಗಾಗಿ ಅದೇ ಸಮುದಾಯದ ಸುಮಲತಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗ್ತಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಚಿಕ್ಕಬಳ್ಳಾಪುರದಿಂದ ಬಿಜೆಪಿ ಸುಮಲತಾ ಅವರನ್ನು ಕಣಕ್ಕಿಳಿಸಿದರೆ, ಹೆಚ್​ಡಿ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಇತ್ತ ಮಂಡ್ಯದಲ್ಲಿ ಹೆಚ್​ಡಿಕೆ ಪರ ಸುಮಲತಾ ಪ್ರಚಾರ ನಡೆಸಲಿದ್ದಾರೆ.

ಹೀಗೆ ಸುಮಲತಾ ಹಾಗೂ ಹೆಚ್.ಡಿ ಕುಮಾರಸ್ವಾಮಿ ಇಬ್ಬರ ಜನಪ್ರಿಯತೆಯ ಲಾಭ ಪಡೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಸುಮಲತಾ ಮಂಡ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋದ್ರೆ ಮಂಡ್ಯದಲ್ಲಿ ಜೆಡಿಎಸ್​ ಗೆಲುವು ಸುಲಭವಾಗಲಿದೆ. ಮತ್ತೊಂದೆಡೆ ಜೆಡಿಎಸ್​ನಿಂದಲೂ ಹೊಸ ಗೇಮ್ ಪ್ಲ್ಯಾನ್ ರೆಡಿ ಆಗಿದೆ. ಇಷ್ಟು ದಿನ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯ ಮಾಡಿದ್ದರು. ಕುಮಾರಸ್ವಾಮಿ ಕೂಡ ನಿಖಿಲ್​ರನ್ನ ಒಪ್ಪಿಸೋದಾಗಿ ಭರವಸೆ ನೀಡಿದ್ದರು. ಆದ್ರೀಗ ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಯವ್ರನ್ನೇ ಸ್ಪರ್ಧೆಗೆ ಇಳಿಯುವಂತೆ ಒತ್ತಾಯಿಸಿದೆ.

ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ಕುರಿತಂತೆ ಅಮಿತ್ ಶಾ ಜೆಡಿಎಸ್ ಗೆ ಬೇರೆಯದ್ದೇ ಸಲಹೆ ನೀಡಿದ್ದಾರೆ. ಸದ್ಯದ ರಾಜಕೀಯ ಸ್ಥಿತಿಗತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೇಡ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್‌ಡಿ ಕುಮಾರಸ್ವಾಮಿ ನೀವೆ ಸ್ಪರ್ಧಿಸುವಂತೆ ಅಮಿತ್ ಶಾ ಅವರು ಸಲಹೆ ನೀಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ನೀವೆ ಕಣ್ಣಕ್ಕಿಳಿದರೆ ಗೆಲುವಿಗೆ ಮತ್ತು ಮೈತ್ರಿ ಭವಿಷ್ಯಕ್ಕೆ ಸಾಕಷ್ಟು ಸಹಾಯವಾಗಲಿದೆ. ಆದ್ದರಿಂದ ನೀವೆ ಸ್ಪರ್ಧಿಸುವುದು ಒಳಿತು. ಅಂತಿಮ ನಿರ್ಧಾರ ತಮಗೇ ಬಿಟ್ಟದ್ದು ಎಂದು ಅಮಿತ್ ಶಾ ತಿಳಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿಯವರು, ತಂದೆ ಹೆಚ್‌ಡಿ ದೇವೇಗೌಡ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಅಲ್ದೇ ನಿಖಿಲ್ ಮಂಡ್ಯದಿಂದ ಸ್ಪರ್ಧಿಸಿ ಗೆದ್ದರೂ ಕೇಂದ್ರದಲ್ಲಿ ಮಂತ್ರಿ ಆಗೋಕೆ ಆಗಲ್ಲ. ಹೀಗಾಗಿ ಕುಮಾರಸ್ವಾಮಿ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಗೆದ್ದರೆ ಎನ್​ಡಿಎ ಸರ್ಕಾರ ರಚನೆಯಾದ್ರೆ ಕೇಂದ್ರ ಸಚಿವ ಆಗುವ ಅವಕಾಶಗಳಿರುತ್ತೆ. ಹೀಗಾಗಿ ಅಂತಿಮವಾಗಿ ಕುಮಾರಣ್ಣನೇ ಲೋಕ ಅಖಾಡಕ್ಕೆ ಎಂಟ್ರಿ ಕೋಡೋ ಸಾಧ್ಯತೆ ದಟ್ಟವಾಗಿದೆ.

ಒಟ್ಟಾರೆ ಮಂಡ್ಯ ಕ್ಷೇತ್ರದ ಟಿಕೆಟ್ ಗುದ್ದಾಟದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಸದ್ಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹೆಚ್​ಡಿಕೆ ಮಾರ್ಚ್ 21ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಬಳಿಕ ಮಾರ್ಚ್ 25ರಂದು ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ ಸುಮಲತಾ ಜೆಪಿ ನಡ್ಡಾ ಭೇಟಿ ಬಳಿಕ ಮಂಡ್ಯದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.. ಹೀಗಾಗಿ ಈ ಹಗ್ಗಾಜಗ್ಗಾಟ ತಿಳಿಯಲು ಇನ್ನೂ ಕೆಲ ದಿನವು ಕಾದು ನೋಡಲೇಬೇಕು.

Sulekha