ಮಂಡ್ಯದಿಂದಲೇ ಸುಮಲತಾ ಸ್ಪರ್ಧೆ? – ಅವರ ಮುಂದಿರುವ ಆಯ್ಕೆಗಳೇನು..?

ಮಂಡ್ಯದಿಂದಲೇ ಸುಮಲತಾ ಸ್ಪರ್ಧೆ? – ಅವರ ಮುಂದಿರುವ ಆಯ್ಕೆಗಳೇನು..?

ಚುನಾವಣೆ ಹತ್ತಿರವಾದಂತೆಲ್ಲಾ ಮಂಡ್ಯ ಕಣ ರಣರಣ ಅಂತಿದೆ. ಮೂರು ಪ್ರಬಲ ಪಕ್ಷಗಳ ನಡುವೆ ಸುಮಲತಾ ಅಂಬರೀಶ್ ನೇರಾನೇರ ಪೈಪೋಟಿಗೆ ಸಿದ್ಧವಾಗಿದ್ದಾರೆ. ಕಳೆದ ಬಾರಿ ಸ್ವಾಭಿಮಾನದ ಕಹಳೆ ಮೊಳಗಿಸಿ ಗೆದ್ದಿದ್ದ ಸುಮಲತಾ ಈಗ ಮತ್ತೊಮ್ಮೆ ಸಂಸದೆಯಾಗೋ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಮೈತ್ರಿ ಕಾರಣದಿಂದ ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾಗಿದೆ ಎನ್ನಲಾಗ್ತಿದೆ. ಛಲ ಬಿಡದ ಸುಮಲತಾ ಮಂಡ್ಯದಿಂದಲೇ ಸ್ಪರ್ಧೆಗೆ ಸಿದ್ಧವೆಂದು ಸಮರ ಸಾರಿದ್ದಾರೆ. ಆಪ್ತರ ಜೊತೆ ಸಭೆ ನಡೆಸಿ ಮುಂದಿನ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಹಾಗಾದ್ರೆ ಸುಮಲತಾ ನಡೆ ಏನು..? ಅವ್ರ ಮುಂದಿರುವ ಆಯ್ಕೆಗಳೇನು..? ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳೀತಾರಾ..? ಕಾಂಗ್ರೆಸ್ ಬಾಗಿಲು ತಟ್ಟುತ್ತಾರಾ.. ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..?- ಮಂಡ್ಯದಲ್ಲಿ ಸ್ಪರ್ಧೆ ಖಂಡಿತಾ ಎಂದು ಹಠ ಮಾಡಿದ್ಯಾಕೆ ಸಂಸದೆ

ಸುಮಲತಾ ಅಂಬರೀಶ್ ಕಳೆದ ಲೋಕಸಭಾ ಚುನಾವಣೆ ವೇಳೆಯೇ ದೇಶಾದ್ಯಂತ ಭಾರೀ ಸದ್ದು ಮಾಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರೂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ್ದರು. ಈ ಬಾರಿಯೂ ಮಂಡ್ಯ ಕ್ಷೇತ್ರದಿಂದಲೇ ಮತ್ತೊಮ್ಮೆ ಲೋಕಸಭೆ ಪ್ರವೇಶಿಸೋ ತವಕದಲ್ಲಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಸಿಗದಿದ್ರೂ ಪಕ್ಷೇತರವಾಗಿ ಅಖಾಡಕ್ಕೆ ಇಳಿಯೋಕೆ ತಯಾರಿ ಮಾಡಿಕೊಳ್ತಿದ್ದಾರೆ. ಈ ಸಂಬಂಧ ಆಪ್ತರ ಸಭೆಯನ್ನೂ ಕರೆಯಲಾಗಿದೆ.

ಮಂಡ್ಯದಿಂದಲೇ ಸುಮಲತಾ ಸ್ಪರ್ಧೆ

ಮಂಡ್ಯದ ಮೈತ್ರಿ ಟಿಕೆಟ್ ಜೆಡಿಎಸ್ ಗೆ ನೀಡಲಾಗಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಹಲ್​ಚಲ್ ಎಬ್ಬಿಸಿದೆ. ಹೀಗಾಗಿ ಸುಮಲತಾ ಅಂಬರೀಶ್​ಗೆ ಬಿಜೆಪಿ ಟಿಕೆಟ್ ಸಿಗದೇ ಇದ್ದರೂ ಮಂಡ್ಯದಿಂದಲೇ ಸ್ಪರ್ಧಿಸುತ್ತಾರೆ ಎಂದು  ಸುಮಲತಾ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ. ಸುಮಲತಾ ಮಂಡ್ಯ ಕಣದಲ್ಲಿ ಇರಲಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಜೆಪಿ ನಗರದ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆಯಲಾಗಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಸಭೆ ಆಯೋಜನೆ ಮಾಡಲಾಗಿದೆ. ಚುನಾವಣೆಯಲ್ಲಿ ಸುಮಲತಾ ಯಾವ ನಿರ್ಧಾರ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡ್ತೇವೆ ಎಂದಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸುಮಲತಾ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಟಿಕೆಟ್ ನಮಗೆ ಸಿಗುವ ಭರವಸೆ ಇದೆ. ಈವರೆಗೂ ಟಿಕೆಟ್ ಘೋಷಣೆ ಆಗಿಲ್ಲದೆ ಇರುವುದರಿಂದ ಪ್ಲಾನ್ ಬಿ ಬಗ್ಗೆ ಆಲೋಚನೆ ಮಾಡಿಲ್ಲ. ಮಂಡ್ಯದಿಂದ ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಖಂಡಿತವಾಗಿ ಇರಲಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಹೀಗೆ ಸುಮಲತಾ ಮಂಡ್ಯದಿಂದಲೇ ಸ್ಪರ್ಧೆಗೆ ದಾರಿ ಹುಡುಕುತ್ತಿದ್ರೆ ಮತ್ತೊಂದೆಡೆ ಬಿಜೆಪಿ ಬೇರೆಯದ್ದೇ ಪ್ಲ್ಯಾನ್ ಮಾಡಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಟಾರ್ಗೆಟ್ 25 ಎಂಬ ಗುರಿಯೊಂದಿಗೆ ಬಿಜೆಪಿ ಮತ್ತು ಜೆಡಿಎಸ್ ಹೈಕಮಾಂಡ್ ನಾಯಕರು ಹೊಸ ಪ್ರಯೋಗ ಮಾಡಲು ಚಿಂತನ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ಲೋಕಸಭೆ ಎಲೆಕ್ಷನ್ ಗೆಲ್ಲೋಕೆ ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದೆ. ಅಂದ್ರೆ ಹೊಸ ಪ್ರಯೋಗದಂತೆ ಕಮಲದ ಚಿಹ್ನೆಯಡಿ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಸುವುದು ಮೈತ್ರಿ ಉದ್ದೇಶ.

Shwetha M