ಮಂಡ್ಯ ಅಖಾಡದಿಂದ ಹಿಂದೆ ಸರಿದ ಸುಮಲತಾ ರಿಯಲ್ ಗೇಮ್ ಸ್ಟಾರ್ಟ್ ಮಾಡಿದ್ರಾ?

ಮಂಡ್ಯ ಅಖಾಡದಿಂದ ಹಿಂದೆ ಸರಿದ ಸುಮಲತಾ ರಿಯಲ್ ಗೇಮ್ ಸ್ಟಾರ್ಟ್ ಮಾಡಿದ್ರಾ?

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ರಣೋತ್ಸಾಹ ಒಂದ್ಕಡೆ.. ಕಾಂಗ್ರೆಸ್ ಕಲಿಗಳ ಶಕ್ತಿ ಪ್ರದರ್ಶನ ಮತ್ತೊಂದ್ಕಡೆ. ರಾಜ್ಯದಲ್ಲಿ ಮೂರು ಪ್ರಬಲ ಪಕ್ಷಗಳಿದ್ರೂ ಎರಡು ಟೀಮ್​ಗಳಾಗಿ ಲೋಕಸಭಾ ಚುನಾವಣಾ ಅಖಾಡದಲ್ಲಿ ಎದುರು ಬದುರಾಗಿವೆ. ಈಗಾಗ್ಲೇ ನಾಮಿನೇಷನ್​ನಲ್ಲೇ ತಾಕತ್ತು ಪ್ರದರ್ಶನ ಮಾಡುತ್ತಾ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇಷ್ಟೆಲ್ಲಾ ಹೈವೋಲ್ಟೇಜ್ ಬೆಳವಣಿಗೆಗಳ ನಡುವೆ ಮಂಡ್ಯದ ಅಖಾಡ ಮಾತ್ರ ಗೊಂದಲದ ಗೂಡಾಗಿತ್ತು. ಸಂಸದೆ ಸುಮಲತಾ ಅಂಬರೀಶ್ ಏನ್ ಮಾಡ್ತಾರೆ ಅನ್ನೋದೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆದ್ರೆ ಕೊನೆಗೂ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಂಸದೆ ಸುಮಲತಾ ಅಂಬರೀಶ್ ಕಣದಿಂದ ಹಿಂದೆ ಸರಿದಿದ್ದು ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಅದೂ ಕೂಡ ಹೆಚ್.ಡಿ ಕುಮಾರಸ್ವಾಮಿ ಪರ ನಿಲ್ಲೋದಾಗಿ ಹೇಳಿದ್ದಾರೆ. ಇಷ್ಟು ದಿನ ಹೋದಲ್ಲಿ ಬಂದಲ್ಲೆಲ್ಲಾ ನಾನು ಎಲೆಕ್ಷನ್​ಗೆ ನಿಂತೇ ನಿಲ್ತೀನಿ, ಮಂಡ್ಯದಲ್ಲಿ ಸೇವೆ ಮಾಡೇ ಮಾಡ್ತೇನೆ ಅಂತಿದ್ದ ಸುಮಲತಾ ಕ್ಲೈಮ್ಯಾಕ್ಸ್​ನಲ್ಲಿ ಯೂಟರ್ನ್ ಹೊಡೆದಿದ್ದೇಕೆ? ಸೋಲಿನ ಭಯ ಕಾಡಿತಾ..? ಕುಮಾರಣ್ಣನಿಗೆ ಬೆಂಬಲ ನೀಡ್ತಿರೋದ್ರ ಹಿಂದೆ ಬಿಜೆಪಿ ಪವರ್ ಪಾಲಿಟಿಕ್ಸ್ನ ಅಭಯ ಇದ್ಯಾ? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಸುಮಲತಾ ಅಂಬರೀಶ್. 2019ದಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಹೆಸ್ರು. ಪಕ್ಷೇತರ ಅಭ್ಯರ್ಥಿಯಾಗಿ ಅಂದಿನ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪುತ್ರನನ್ನೇ ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ಅಂದಿನಿಂದ್ಲೂ ಸುದ್ದಿಯಲ್ಲೇ ಇದ್ದ ಸುಮಲತಾ ಇದೀಗ ಸೈಲೆಂಟ್ ಆಗಿ ಸೈಡ್​ಗೆ ಹೋಗಿದ್ದಾರೆ. ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಮಂಡ್ಯ ನೆಲದಲ್ಲೇ ನಿಂತು ಘೋಷಣೆ ಮಾಡಿದ್ದಾರೆ. ಹಾಗೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗೋದಾಗಿ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲ್ಲ! 

ನಟ ದರ್ಶನ್ ಹಾಗೂ ಪುತ್ರ ಅಭಿಷೇಕ್ ಅಂಬರೀಶ್ ಜೊತೆಯಲ್ಲೇ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಜನರ ಎದುರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಸುಮಲತಾ, ಕಾಂಗ್ರೆಸ್‌ನವರೇ ಬೇಡ ಎಂದ ಮೇಲೆ ನಾನು ಅಲ್ಲಿಗೆ ಹೋಗಲ್ಲ. ನಾನು ಸ್ವತಂತ್ರ ಸಂಸದೆಯಾಗಿದ್ದರೂ ನನಗೆ ಸಾವಿರಾರು ಕೋಟಿ ಅನುದಾನ ನೀಡಿದ್ದು ಕೇಂದ್ರದ ಬಿಜೆಪಿ ಸರ್ಕಾರ. ದೇಶದ ಪ್ರಧಾನಿಯೇ ನನಗೆ ಗೌರವ ಕೊಡುತ್ತಾರೆ ಎಂದರೆ ನನಗೆ ಅಲ್ಲಿ ಗೌರವ ಇದೆ ಅಲ್ವಾ ಎಂದು ಅಭಿಮಾನಿಗಳನ್ನ ಪ್ರಶ್ನಿಸಿದ್ದಾರೆ. ಹಾಗೇ ಮಂಡ್ಯ ಕ್ಷೇತ್ರಕ್ಕಾಗಿ ತಾವು ತಂದ ಅನುದಾನ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಜನರ ಮುಂದೆ ಹೇಳಿಕೊಂಡಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ ಬಿಜೆಪಿ ಮೈತ್ರಿಯಾಗಿದೆ. ನಾನು ಕೊನೆಯ ಕ್ಷಣದವರೆಗೂ ಮಂಡ್ಯ ಸೀಟ್ ಅನ್ನು ಬಿಜೆಪಿಯೇ ಉಳಿಸಿಕೊಳ್ಳಲಿ ಎಂದು ಹೋರಾಡಿದ್ದೆ. ನನಗೆ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಮೈಸೂರು ಲೋಕಸಭಾ ಚುನಾವಣೆಯ ಟಿಕೆಟ್ ಕೊಡ್ತೀನಿ ಅಂದರು. ಆದರೆ ನಾನು ಇದ್ದರೂ ಹೋದರೂ ಮಂಡ್ಯದಲ್ಲೇ ಎಂದು ಹೇಳಿದ್ದೆ. ನಾನು ಅಂಬರೀಷ್ ಅವರ ಚೌಕಟ್ಟಿನಲ್ಲಿ ರಾಜಕೀಯ ಮಾಡುತ್ತೇನೆ. ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ರಾಜಕೀಯ ಬಿಟ್ಟು ಹೋಗಲ್ಲ. ನನಗೆ ಇವತ್ತಿನ ದಿನ ನರೇಂದ್ರ ಮೋದಿ ಅವರು ಕಾಣುತ್ತಿರುವ ಕನಸಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ನನ್ನ ಎಂಪಿ ಸ್ಥಾನವನ್ನು ಬಿಟ್ಟು ಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೀನಿ ಎಂದು ಘೋಷಿಸಿದ್ದಾರೆ.

ಅಷ್ಟಕ್ಕೂ ಇಲ್ಲಿ ಸುಮಲತಾ ಈ ಬಾರಿ ಮಂಡ್ಯದಿಂದ ಯೂಟರ್ನ್ ಆಗಿದ್ದಕ್ಕೆ ಪ್ರಮುಖ ಕಾರಣ ಜೆಡಿಎಸ್. 2019 ರ ಲೋಕಸಭಾ ಚುನಾವಣೆಯಲ್ಲಿ ಕಳೆದುಕೊಂಡ ಮಂಡ್ಯ ಕ್ಷೇತ್ರವನ್ನ ಈ ಬಾರಿಯ ಚುನಾವಣೆಯಲ್ಲಿ ವಶಕ್ಕೆ ಪಡೆಯಬೇಕು ಎಂಬುದು ದಳಪತಿಗಳ ಟಾರ್ಗೆಟ್. ಹೀಗಾಗೇ ಆರಂಭದಿಂದಲೂ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಬಿಜೆಪಿ ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚೆ ನಡೆಸಿ, ಪಟ್ಟು ಹಿಡಿದಂತೆ ಮಂಡ್ಯ ಕ್ಷೇತ್ರವನ್ನ ಪಡೆಯುವಲ್ಲಿ ಮೊದಲ ಹಂತದಲ್ಲೇ ಯಶಸ್ವಿಯಾಗಿದ್ರು. ಬಳಿಕ ಸುಮಲತಾ ಜೊತೆ ಚರ್ಚೆ ನಡೆಸಿ ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಕ್ಸಸ್ ಆಗಿದ್ದಾರೆ. ಅಷ್ಟಕ್ಕೂ ಸುಮಲತಾಗೆ ಕುಮಾರಣ್ಣ ಮುಂದಿನ ದಿನಗಳಲ್ಲಿ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಒಂದ್ಕಡೆ ಮಗನ ಭವಿಷ್ಯದ ಚಿಂತೆಯಾದ್ರೆ ಮತ್ತೊಂದ್ಕಡೆ ಸುಮಲತಾಗೆ ಈ ಬಾರಿಯ ಚುನಾವಣೆಯಲ್ಲಿ ಸಾಲು ಸಾಲು ಸವಾಲುಗಳಿದ್ವು.

ಸುಮಲತಾಗೆ ಕಾಡಿತ್ತಾ ಭಯ?    

2019ರಲ್ಲಿ ಸುಮಲತಾ ಗೆಲುವಿಗೆ ಹಲವು ಕಾರಣಗಳಿದ್ದವು. ಅಂಬರೀಶ್ ನಿಧನದ ಅನುಕಂಪದ ಅಲೆ ವರ್ಕೌಟ್ ಆಗಿತ್ತು. ಅಲ್ದೇ ಬಿಜೆಪಿ ಪಕ್ಷ ಅಭ್ಯರ್ಥಿಯನ್ನ ನಿಲ್ಲಿಸದೇ ಸುಮಲತಾ ಅಂಬರೀಶ್​ಗೆ ನೇರವಾಗಿ ಬೆಂಬಲ ಘೋಷಣೆ ಮಾಡಿತ್ತು. ಅತ್ತ, ಕಾಂಗ್ರೆಸ್ ನ ಕೆಲವು ನಾಯಕರು ಸಹ ಸುಮಲತಾ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದರು. ಇದೆಲ್ಲವೂ, ಮಂಡ್ಯದಲ್ಲಿ ಜೆಡಿಎಸ್ ಗೆ ಸೋಲುಣಿಸಬೇಕು ಎಂಬ ಉದ್ದೇಶವೇ ಆಗಿತ್ತು.  ಇದೆಲ್ಲದರ ಫಲವಾಗಿ, ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿ ಸಂಸತ್ತು ಪ್ರವೇಶಿಸಿದರು. ಆದ್ರೆ ಈ ಬಾರಿ ಚುನಾವಣೆಗೂ ಮೊದ್ಲೇ ಬಿಜೆಪಿ ಪರವೇ ಗುರುತಿಸಿಕೊಂಡ್ರು. ಈ ಮೂಲಕ ಒಂದು ಪಕ್ಷಕ್ಕೆ ಸೀಮಿತವಾದ್ರು. ಹಾಗೇ ಕ್ಷೇತ್ರದಲ್ಲಿ ಮತದಾರರ ವಿರೋಧಿ ಅಲೆ ಕೂಡ ಎದುರಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಬಿಜೆಪಿ ಟಿಕೆಟ್ ಮಿಸ್ ಆಗಿತ್ತು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಪಕ್ಷೇತರ ಮಾತ್ರವೇ ಉಳಿದಿತ್ತು. ನಿಂತ್ರೂ ಗೆಲ್ಲುವ ಕಾನ್ಫಿಡೆನ್ಸ್ ಇರಲಿಲ್ಲ. ಈ ಎಲ್ಲಾ ಕಾರಣಗಳಿಂದ ಸುಮಲತಾ ಅಂಬರೀಶ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

ಅಂತೂ ಇಂತೂ ಮೂರು ತಿಂಗಳಿಂದ ಮಂಡ್ಯ ಕ್ಷೇತ್ರದ ವಿಚಾರವಾಗಿ ನಡೀತಿದ್ದ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿ ಹೈಕಮಾಂಡ್ ಬಳಿ ಮ್ಯಾರಥಾನ್ ಮೀಟಿಂಗ್ ನಡೆಸಿದ್ದ ಸುಮಲತಾ ಈ ಸಲ ಸ್ಪರ್ಧೆ ಮಾಡಲ್ಲ. ರಾಜಕೀಯ ಬಿಟ್ಟು ಹೋಗಲ್ಲ ಅಂದಿದ್ದಾರೆ. ಇಲ್ಲಿಗೆ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆಯೇ ನೇರಾನೇರ ಫೈಟ್ ನಡೆಯಲಿದೆ. ಮೈತ್ರಿ ಅಭ್ಯರ್ಥಿ ಕುಮಾರಣ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮುಖಾಮುಖಿಯಾಗಿದ್ದು ಕ್ಷೇತ್ರದ ಮತದಾರರು ಯಾರಿಗೆ ಮಣೆ ಹಾಕ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

Shwetha M