ಸುಮಕ್ಕ ಪಕ್ಷೇತರವಾಗಿ ನಿಂತ್ರೆ ಗೆಲ್ಲೋದ್ಯಾರು? –  ದಳಪತಿಗೆ ಬೀಳುತ್ತಾ ಗುನ್ನಾ?

ಸುಮಕ್ಕ ಪಕ್ಷೇತರವಾಗಿ ನಿಂತ್ರೆ ಗೆಲ್ಲೋದ್ಯಾರು? –  ದಳಪತಿಗೆ ಬೀಳುತ್ತಾ ಗುನ್ನಾ?

ಮಂಡ್ಯದ ಲೋಕಸಭಾ ಕ್ಷೇತ್ರ ಮತ್ತೆ ಇಂಡಿಯಾದ ಗಮನ ಸೆಳೆಯುವ ಹಂತಕ್ಕೆ ಬರುತ್ತಿದೆ.. ಸುಮಲತಾ ಮಂಡ್ಯದಲ್ಲೇ ತನ್ನ ರಾಜಕೀಯ ನಿರ್ಧಾರ ಹೇಳುವ ತೀರ್ಮಾನಕ್ಕೆ ಬಂದಿದ್ದಾರೆ.. ಮಂಡ್ಯವೇ ತನ್ನ ಅಸ್ತಿತ್ವ.. ಮಂಡ್ಯದಲ್ಲೇ ನನ್ನ ರಾಜಕೀಯ.. ಮಂಡ್ಯವೇ ನನ್ನ ಗೌರವ.. ನಾನು ಮಂಡ್ಯದ ಶೈಲಿಯಲ್ಲಷ್ಟೇ ಇರಬಲ್ಲೆ ಎನ್ನುವ ಮೂಲಕ ಮತ್ತೆ ಮಂಡ್ಯದ ಸೊಸೆ ಸೆರಗೊಡ್ಡಿ ನ್ಯಾಯ ಕೇಳಲು ಜನರ ಮುಂದೆಯೇ ಬರುವ ಲಕ್ಷಣ ಕಾಣ್ತಿದೆ.. ಕಳೆದ ಬಾರಿ ಬೆನ್ನಿಗೆ ನಿಂತವರು ಈಗ ಎದುರಾಳಿಗಳಾಗಿದ್ದಾರೆ.. ಕಳೆದ ಬಾರಿಯ ಎದುರಾಳಿಗಳು ಈಗ ಮನೆ ಬಾಗಿಲಿಗೆ ಬಂದು ಯುದ್ಧ ವಿರಾಮ ಘೋಷಿಸಿ, ಬೆಂಬಲ ಪಡೆಯುವ ಪ್ರಯತ್ನ ಮಾಡಿದ್ದಾರೆ..  ಖುದ್ದು ಕುಮಾರಸ್ವಾಮಿಯವರೇ ಸುಮಲತಾ ಜೊತೆಗೆ ಮಾತಾಡಿರುವುದರಿಂದ ಸುಮಲತಾ ಮುಂದಿನ ನಡೆ ಏನು ಎನ್ನುವ ಕುತೂಹಲ ಇದ್ದೇ ಇದೆ.. ಹಾಗಿದ್ದರೂ ಸುಮಲತಾ ಅವರೇನಾದರೂ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದರೆ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ..  ಒಂದು ವೇಳೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಏನಾಗಬಹುದು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:  ತೈವಾನ್‌ನಲ್ಲಿ ಪ್ರಬಲ ಭೂಕಂಪ –  ಹಲವು ಕಟ್ಟಡಗಳು ನೆಲಸಮ, ಸುನಾಮಿ ಎಚ್ಚರಿಕೆ

ಸುಮಲತಾ ಮತ್ತೆ ರೆಬೆಲ್‌ ಲೇಡಿಯಾಗಿಯೇ ಮಂಡ್ಯದ ಚುನಾವಣಾ ರಣಕಣಕ್ಕೆ ಧುಮುಕುತ್ತಾರೋ ಇಲ್ಲವೋ ಎನ್ನುವುದು ಇನ್ನೂ ನಿರ್ಧಾರ ಆಗಿಲ್ಲ… ಮಂಡ್ಯದ ಗಂಡು ಅಂಬರೀಶ್‌ ತೆರೆಯ ಮೇಲೆ ರೆಬೆಲ್‌ ಸ್ಟಾರ್‌ ಅಂತಲೇ ಫೇಮಸ್‌ ಆಗಿದ್ದವರು.. ಆದ್ರೆ ರೆಬೆಲ್‌ ಸ್ಟಾರ್‌ ಅಂಬರೀಶ್ ಪತ್ನಿಗೆ ರಾಜಕೀಯ ಪ್ರಯಾಣವೇ ರೆಬೆಲ್‌ ಲೇಡಿಯಾಗಿ ಇರುವಂತೆ ಮಾಡುತ್ತಿದೆ.. 2019ರಲ್ಲಿ ಕಾಂಗ್ರೆಸ್ ಟಿಕೆಟ್‌ ನಿರೀಕ್ಷಿಸಿದ್ದ ಸುಮಲತಾ ಅಂತಿಮವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ರಣಕಹಳೆ ಮೊಳಗಿಸಿದ್ದರು.. ಈಗ 2024ರಲ್ಲಿ ಸುಮಲತಾ ನಿರೀಕ್ಷೆ ಮಾಡಿದ್ದದ್ದು ಬಿಜೆಪಿಯಿಂದ ಟಿಕೆಟ್‌.. ಇದೇ ಕಾರಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್‌ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೀಗೆ ದೆಹಲಿ ನಾಯಕರನ್ನೆಲ್ಲಾ ಭೇಟಿಯಾಗಿದ್ದರು.. ಸ್ಪರ್ಧಿಸಿದರೆ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ.. ರಾಜಕೀಯ ಮಾಡುವುದಿದ್ದರೆ ಮಂಡ್ಯದಿಂದಲೇ ಮಾಡುತ್ತೇನೆ ಎಂದು ಗಂಡನ ಮನೆಯ ನಂಟು ಬಿಟ್ಟುಕೊಡಲು ನಾನು ಸಿದ್ಧವಿಲ್ಲ ಎಂಬ ತೀರ್ಮಾನವನ್ನು ಬಿಜೆಪಿಯ ಉನ್ನತ ನಾಯಕರಿಗೆ ಸ್ಪಷ್ಟವಾಗಿಯೇ ಹೇಳಿಬಂದಿದ್ದರು.. ಆದರೆ ದಳಪತಿಗಳ ಜೊತೆಗೆ ಹೊಸ ನಂಟಸ್ತನ ಕುದುರಿಸಿಕೊಂಡಿರುವ ಕಮಲ ನಾಯಕರಿಗೆ ಈಗ ತೆನೆ ಹೊತ್ತ ಮಹಿಳೆಗಿಂತ ಸುಂದರವಾಗಿ ಕರ್ನಾಟಕದಲ್ಲಿ ಬೇರೆ ಯಾರೂ ಕಾಣ್ತಿಲ್ಲ..  ಹೀಗಾಗಿ ಜೆಡಿಎಸ್‌ ನಾಯಕರ ಒತ್ತಾಸೆಯಂತೆ ಪ್ರೀತಂ ಗೌಡ ವಿರೋಧ ಕಟ್ಟಿಕೊಂಡು ಹಾಸನ.. ಸುಮಲತಾ ವಿರೋಧ ಕಟ್ಟಿಕೊಂಡು ಮಂಡ್ಯ.. ಮುನಿಸ್ವಾಮಿ ವಿರೋಧ ಕಟ್ಟಿಕೊಂಡು ಕೋಲಾರದ ಸೀಟನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ.. ಹೀಗೆ ಜೆಡಿಎಸ್‌ ನಾಯಕರಿಗೆ ಅವರ ಶಕ್ತಿ ಇಷ್ಟೇ ಎಂಬ ತೀರ್ಮಾನಕ್ಕೆ ಬಂದಂತೆ ಸೀಟು ಕೊಟ್ಟಿದ್ದರೂ ಬಿಜೆಪಿ ಕಳೆದ ಬಾರಿ ಗೆದ್ದಿದ್ದ ಸೀಟನ್ನೂ ಬಿಟ್ಟುಕೊಟ್ಟು ಔದರ್ಯ ಮೆರೆದಿದ್ದು ರಾಜಕೀಯ ಅನಿವಾರ್ಯತೆಯೆಂಬ ಚಕ್ರವ್ಯೂಹದಲ್ಲಿ ಬಿಜೆಪಿ ಹೇಗೆ ಸಿಲುಕಿದೆ ಎನ್ನುವುದಕ್ಕೊಂದು ಉದಾಹರಣೆ ಅಲ್ಲದೆ ಬೇರೇನಲ್ಲ.. ಈಗ ಮತ್ತೆ ಮಂಡ್ಯದ ವಿಚಾರಕ್ಕೆ ಬರೋಣ.. ಸುಮಲತಾ ಈ ಬಾರಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ.. ಮುಖ್ಯವಾಗಿ ಸುಮಲತಾ ಮಂಡ್ಯದಿಂದಲೇ ಸ್ಪರ್ಧಿಸಬೇಕು ಎಂದು ಹಠ ಹಿಡಿಗದು ಕುಳಿತಿರುವುದಕ್ಕೆ ಕಾರಣ ಕಳೆದ ಬಾರಿ ತಮಗೆ ಸಿಕ್ಕಿದ್ದ ಅಪೂರ್ವ ಜನಬೆಂಬಲ..  ಅಂದು ರಾಜ್ಯದಲ್ಲಿ ಆಳುವ ಸರ್ಕಾರವನ್ನೇ ಎದುರು ಹಾಕಿಕೊಂಡು ಮಂಡ್ಯದಲ್ಲಿ ಕಣಕ್ಕಿಳಿದಿದ್ದರು ಸುಮಲತಾ.. ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಯನ್ನು ಮಂಡ್ಯದಲ್ಲಿ ಕಣಕ್ಕಿಳಿಸದೆ ಸುಮಲತಾ ಬೆಂಬಲಕ್ಕೆ ನಿಂತಿದ್ದರು.. ಇದೇ ಕಾರಣಕ್ಕಾಗಿ ಸುಮಲತಾ ಗೆಲುವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಗೆಲುವು ಎಂದು ಬಿಂಬಿಸಿಕೊಂಡಿದ್ದರು.. ಆದರೆ ಸರಿಯಾಗಿ ನೋಡುವುದಿದ್ದರೆ, ಮಂಡ್ಯದಲ್ಲಿ ಬಿಜೆಪಿಗೆ ಕಳೆದ ಲೋಕಸಭಾ ಚುನಾವಣೆಯವರೆಗೆ ಇದ್ದ ಶಕ್ತಿ ಒಂದೂವರೆ ಲಕ್ಷದ ಆಸುಪಾಸಿನಷ್ಟು ಮತಗಳು ಮಾತ್ರ.

ಮಂಡ್ಯ ಮತ ಲೆಕ್ಕಾಚಾರ!

ಯಾಕಂದ್ರೆ 2018ರ ಲೋಕಸಭಾ ಬೈಎಲೆಕ್ಷನ್‌ನಲ್ಲಿ ಬಿಜೆಪಿ 2,44,404 ಮತಗಳನ್ನು ಗಳಿಸಿತ್ತು ಎನ್ನುವುದೇನೋ ನಿಜ.. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋದಿ ಅಲೆಯ ನಡುವೆಯೂ ಮಂಡ್ಯದಲ್ಲಿ ಗಳಿಸಿದ್ದದ್ದು ಕೇವಲ 86,993 ಮತಗಳನ್ನು ಮಾತ್ರ..  2018ರ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದಾಗಿ ಮಂಡ್ಯದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿರಲಿಲ್ಲ.. ಇದರಿಂದಾಗಿ ಅದಕ್ಕಿಂತ ಹಿಂದಿನ ಅಂದರೆ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದ್ರೆ ಬರೋಬ್ಬರಿ 3 ಲಕ್ಷ ಮತಗಳು ಕಡಿಮೆ ಚಲಾವಣೆಯಾಗಿದ್ದವು.. ಜೆಡಿಎಸ್‌ಗೆ 2018ರ ಲೋಕಸಭಾ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ ಜೊತೆಗಿನ ಮೈತ್ರಿಯ ಹೊರತಾಗಿಯೂ ಕೇವಲ 45 ಸಾವಿರದಷ್ಟು ಮತಗಳು ಮಾತ್ರ ಹೆಚ್ಚುವರಿಯಾಗಿ ಬಂದಿದ್ದವು.. ಅದರ ಅರ್ಥ 2018ರ ಲೋಕಸಭಾ ಚುನಾವಣೆಯ ಬೈಎಲೆಕ್ಷನ್‌ನಲ್ಲಿ ದೊಡ್ಡಮಟ್ಟದಲ್ಲಿ ಕಾಂಗ್ರೆಸ್‌ ಮತಗಳು ಬಿಜೆಪಿಯ ಕಡೆಗೆ ವಾಲಿದ್ದವು. ಹಾಗಾಗಿ ಬಿಜೆಪಿ ಮಂಡ್ಯದಲ್ಲಿ 2019ರ ವೇಳೆಗೆ ದೊಡ್ಡ ಶಕ್ತಿಯಾಗಿಯೇ ಬೆಳೆದಿತ್ತು ಎನ್ನುವುದನ್ನು ರಾಜಕೀಯವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.. ಯಾಕಂದ್ರೆ 2014ರಲ್ಲಿ ಕಾಂಗ್ರೆಸ್‌ ಗಳಿಸಿದ್ದ ಮತಗಳು ಮತ್ತು ಬಿಜೆಪಿಯ ಮತಗಳನ್ನು ಜೊತೆ ಸೇರಿಸಿದರೆ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ 2019ರಲ್ಲಿ ಗಳಿಸಿದ್ದ ಮತಕ್ಕಿಂತ ಜಾಸ್ತಿಯಿತ್ತು.. ಇದರ ಜೊತೆಗೆ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ 1 ಲಕ್ಷದ 86 ಸಾವಿರದಷ್ಟು ಹೆಚ್ಚುವರಿ ಮತಗಳು 2019ರ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾಗಿದ್ದವು..  ಇದರಿಂದಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ 7,03,660 ಮತಗಳಿಸಿ, 1,25,876 ಮತಗಳ ಅಂತರದಿಂದ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಜಯ ಸಾಧಿಸಿದ್ದರು.

ಯಾಕೆ ಇಷ್ಟೆಲ್ಲಾ ಮತ ಲೆಕ್ಕಾಚಾರ ಹೇಳ್ತಿದ್ದೇವೆ ಎಂದ್ರೆ ಮೇಲ್ನೋಟಕ್ಕೆ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದರೂ ಕೇವಲ 1 ಲಕ್ಷಕ್ಕಿಂತ ಕಡಿಮೆ ಮತ ಬರಬಹುದು ಅಂತ ಅವರ ವಿರೋಧಿಗಳು ಹೇಳ್ತಿದ್ದಾರೆ.. ಕಾಂಗ್ರೆಸ್‌-ಬಿಜೆಪಿ-ಜೆಡಿಎಸ್‌ ಮೂರೂ ಪಕ್ಷಗಳು ಈ ವಿಚಾರದಲ್ಲಿ ಸುಮಲತಾ ವಿರುದ್ಧ ಒಂದಾಗಿವೆ.. ಆದರೆ ಸುಮಲತಾ ಬೆಂಬಲಿಗರು ಬೇರೆಯೇ ಲೆಕ್ಕ ಹೇಳ್ತಾರೆ.. ಆ ಲೆಕ್ಕಾಚಾರವನ್ನು ನಿಮ್ಮ ಮುಂದಿಡ್ತೇವೆ..

ಸುಮಲತಾ ಮತ ಲೆಕ್ಕ!

ಸುಮಲತಾ ಬೆಂಬಲಿಗರ ಪ್ರಕಾರ ಮಂಡ್ಯದಲ್ಲಿ ಈಗಲೂ ಅಂಬರೀಶ್‌ ಅಭಿಮಾನಿಗಳು 2.5 ಲಕ್ಷಕ್ಕಿಂತ ಹೆಚ್ಚು ಮತ ಹಾಕಬಹುದು.. ಜೊತೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಚಾರಕ್ಕೆ ಬರುವುದರಿಂದ ಅವರ ಅಭಿಮಾನಿಗಳು 1.5 ಲಕ್ಷಕ್ಕಿಂತ ಹೆಚ್ಚು ವೋಟು ಹಾಕಬಹುದು..

ಇದರ ಜೊತೆಗೆ ಸುಮಲತಾ ಸಂಸದೆಯಾಗಿ ಮಾಡಿರುವ ಕೆಲಸ. ಅದರಲ್ಲೂ ಅಕ್ರಮ ಗಣಿಗಾರಿಕೆ ಮಟ್ಟ ಹಾಕಿರುವುದು ಹಾಗೂ ಮೈಶುಗರ್‌ ಕಾರ್ಖಾನೆ ಮರು ಸ್ಥಾಪನೆಗೆ ಮಾಡಿರುವ ಕೆಲಸ ಮೆಚ್ಚಿರುವ ಜನರಿದ್ದಾರೆ.. ಇದರ ಜೊತೆಗೆ ಮಹಿಳೆಯರು ಈಗಲೂ ಮಂಡ್ಯದಲ್ಲಿ ಓರ್ವ ಗಟ್ಟಿಗಿತ್ತಿ ಮಹಿಳೆ ಸಂಸದೆಯಾಗುವುದನ್ನು ಬಯಸುತ್ತಿದ್ದು ಅವರು ಸುಮಲತಾ ಕೈ ಹಿಡಿಯಬಹುದು..  ಮಂಡ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಾಗ 4 ಲಕ್ಷಕ್ಕಿಂತ ಹೆಚ್ಚು ಮತಗಳಿಸಿದರೂ ಸಾಕು ಗೆಲುವು ಸಾಧಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ..

ಆದರೆ ಈ ಲೆಕ್ಕಾಚಾರದ ಬಗ್ಗೆ ಕೆಲವು ಪ್ರಶ್ನೆಗಳಿವೆ.. ಅಂಬರೀಶ್‌ ಅಭಿಮಾನಿಗಳು ಮತ್ತು ದರ್ಶನ್‌ ಅಭಿಮಾನಿಗಳು ಎನ್ನುವುದನ್ನು ಬೇರೆ ಬೇರೆಯಾಗಿ ಲೆಕ್ಕ ಹಾಕಲು ಸಾಧ್ಯವಿದೆಯೇ? ನಾಯಕ ನಟರ ಅಭಿಮಾನಿಗಳು ಕೂಡ ಬೇರೆ ಬೇರೆ ಪಕ್ಷಗಳ ಜೊತೆಗೆ ಗುರುತಿಸಿಕೊಂಡಿರುವಾಗ ಅವರು ಸುಮಲತಾ ಅವರಿಗೆ ರಾಜಕೀಯವಾಗಿ ಬೆಂಬಲ ನೀಡಬಹುದೇ? ಎನ್ನುವ ಪ್ರಶ್ನೆಗಳಿಗೆ ಸದ್ಯ ಉತ್ತರವಿಲ್ಲ..

ಕುಮಾರಸ್ವಾಮಿಗೆ ಬೀಳುತ್ತಾ ಸುಮಲತಾ ಹೊಡೆತ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ರಾಜಕೀಯ ಸಂಘರ್ಷಕ್ಕೆ ಐದು ವರ್ಷಗಳ ಇತಿಹಾಸವಷ್ಟೇ ಇದೆ… ಆದರೆ ಈ ಐದು ವರ್ಷಗಳಲ್ಲಿ ಸುಮಲತಾ ಅವರನ್ನು ನಾನಾ ರೀತಿಯಲ್ಲಿ ಕುಮಾರಸ್ವಾಮಿ ಚುಚ್ಚಿ ಮಾತಾಡಿದ್ದರು.. ಕೆಆರ್‌ಎಸ್‌ ಡ್ಯಾಂ ಅಪಾಯದಲ್ಲಿದೆ ಎಂದಾಗ ಅವರೇ ಹೋಗಿ ನೀರಿ ಅಡ್ಡವಾಗಿ ಮಲಗಲಿ ಎನ್ನುವವರೆಗೂ ಕುಮಾರಸ್ವಾಮಿ ಮಾತಾಡಿದ್ದರು.. ರಾಜಕೀಯದಲ್ಲಿದ್ದರೂ ಸುಮಲತಾ ಇನ್ನೂ ಪಕ್ಷ ರಾಜಕಾರಣಕ್ಕೆ ಅಂಟಿಕೊಂಡಿಲ್ಲ.. ಅವರು ಈಗಲೂ ಮಂಡ್ಯದ ಸ್ವಾಭಿಮಾನ ಎಂಬ ಬ್ಯಾಡ್ಜ್‌ ಧರಿಸಿಯೇ ಓಡಾಡ್ತಾರೆ.. ಹೀಗಾಗಿ ಈಗ ಬಿಜೆಪಿ ಜೊತೆಗೆ ಕುಮಾರಸ್ವಾಮಿ ಕೈ ಜೋಡಿಸಿದ್ದರೂ ಸುಮಲತಾ ಅವರನ್ನು ಹಿಂದೆ ಬೆಂಬಲಿಸಿದ್ದವರು ಒಂದು ವೇಳೆ ಸುಮಲತಾ ಪಕ್ಷೇತರವಾಗಿ ನಿಂತರೆ ಅವರನ್ನೇ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ..  ಅಲ್ಲದೆ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಹಾಗೂ ಸುಮಲತಾ ನಡುವೆ ಕುಮಾರಸ್ವಾಮಿ ಹೊರಗಿನವರು ಎಂಬ ಚರ್ಚೆಯನ್ನು ಸುಮಲತಾ ಸ್ಪರ್ಧೆ ಹೆಚ್ಚು ಮುನ್ನೆಲೆಗೆ ತರಬಹುದು.. ಇವೆಲ್ಲವೂ ಮಂಡ್ಯದ ಸ್ವಾಭಿಮಾನ.. ಮಂಡ್ಯದ ಗಂಡು.. ಮಂಡ್ಯದ ಸೊಸೆ ಎಂಬ ರಾಜಕೀಯ ಅಸ್ತ್ರಗಳ ನಡುವೆ ಕುಮಾರಸ್ವಾಮಿಯವರಿಗೆ ಚುಚ್ಚಬಹುದು.. ಹೀಗಾಗಿಯೇ ಸುಮಲತಾ ಸ್ಪರ್ಧೆಯಿಂದ ಅವರು ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ.. ಆದರೆ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಹೆಚ್ಚಿದೆ.. ಇದರ ಲಾಭವನ್ನು ಕಾಂಗ್ರೆಸ್‌ ನೇರವಾಗಿ ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ. ಹಾಗಿದ್ದರೂ ಕುಮಾರಸ್ವಾಮಿ ಮಾತುಕತೆ ನಡೆಸಿ, ಸುಮಲತಾ ಹಾಗೂ ಅವರ ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ.. ಈಗ ಸಹಾಯ ಮಾಡಿದರೆ ಮುಂದೆ ಅದಕ್ಕೆ ಪ್ರತಿಯಾಗಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ.. ಸುಮಲತಾ ಕೂಡ ಕುಮಾರಸ್ವಾಮಿ ಭೇಟಿಯ ನಂತರ ಸ್ವಲ್ಪ ಮೆತ್ತಗಾದವರಂತೆ ಕಾಣ್ತಿದ್ದಾರೆ.. ಆದರೆ ಇದು ಸಮರ ಘೋಷಣೆಗೆ ಮುಂಚಿನ ಶಾಂತತೆಯೋ.. ಅಥವಾ ಬಿಜೆಪಿ ಸೇರಿ ರಾಜಕೀಯ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಗುವ ಅವಕಾಶವನ್ನು ಬಳಸಿಕೊಳ್ಳುವ ರಾಜಕೀಯ ನಡೆಯೋ ಎನ್ನುವುದನ್ನು ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Shwetha M