ಸುಮಲತಾ ಮುಂದೆ ಸಾಲು ಸಾಲು ಸವಾಲು! – ಬಿಜೆಪಿ ನಂಬಿ ಕೆಟ್ರಾ ಸುಮಲತಾ?

ಸುಮಲತಾ ಮುಂದೆ ಸಾಲು ಸಾಲು ಸವಾಲು! – ಬಿಜೆಪಿ ನಂಬಿ ಕೆಟ್ರಾ ಸುಮಲತಾ?

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಸೊಸೆ ಎನ್ನುತ್ತಲೇ ಅಬ್ಬರಿಸಿದ್ದ ಸುಮಲತಾ ಅಂಬರೀಶ್ ಘಟಾನುಘಟಿಗಳ ಎದುರೇ ಗೆದ್ದು ಬೀಗಿದ್ರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ರಾಷ್ಟ್ರೀಯ ಪಕ್ಷಗಳಿಗೆ ಮಣ್ಣು ಮುಕ್ಕಿಸಿದ್ರು. ಈ ಬಾರಿಯೂ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೋದಾಗಿ ಕಹಳೆ ಮೊಳಗಿಸಿದ್ದಾರೆ. ಆದ್ರೆ ಕಳೆದ ಬಾರಿಯ ಚುನಾವಣೆಗೂ ಈ ಬಾರಿಯ ಎಲೆಕ್ಷನ್​ಗೂ ಅಜಗಜಾಂತರ ವ್ಯತ್ಯಾಸ ಇದೆ. ಸ್ವತಂತ್ರ್ಯ ಸ್ಪರ್ಧಿಯಾಗಿದ್ದ ಸುಮಲತಾ ಈಗ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಸುಮಲತಾರ ಇದೇ ನಿರ್ಧಾರ ಅವ್ರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಕೊಡುತ್ತೆ ಎಂದೇ ವಿಶ್ಲೇಷಣೆ ಮಾಡಲಾಗ್ತಿದೆ.

ಸುಮಲತಾ ಅಂಬರೀಶ್.. ಮಂಡ್ಯದಿಂದ ಇಂಡಿಯಾವರೆಗೂ ಸದ್ದು ಮಾಡಿರುವ ನಾಯಕಿ. ಪಕ್ಷೇತರ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಬಳಿಕ ಬಿಜೆಪಿಗೆ ಬೆಂಬಲ ಘೋಷಿಸಿದ್ರು. 2024ರ ಲೋಕಸಭೆಗೆ ಕಮಲದ ಚಿಹ್ನೆಯಡಿಯೇ ಅಖಾಡಕ್ಕಿಳಿಯೋ ತಯಾರಿಯನ್ನೂ ಮಾಡ್ಕೊಂಡಿದ್ರು. ಆದ್ರೆ ಅಷ್ಟೊತ್ತಿಗೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಇದೇ ಮೈತ್ರಿಯೇ ಸುಮಲತಾಗೆ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ: ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಸಿನಿಮಾ, ಧಾರಾವಾಹಿಯಲ್ಲಿ ಅನುಕರಣೆ – ಕರಾವಳಿ ಭಾಗದ ದೈವಾರಾಧಕರಿಂದ ಹೋರಾಟ

ಬಿಜೆಪಿ ನಂಬಿ ಕೆಟ್ರಾ ಸುಮಲತಾ?

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿಗೆ ಎಷ್ಟು ಸ್ಥಾನ, ಜೆಡಿಎಸ್​ಗೆ ಎಷ್ಟು ಸೀಟ್ ಅನ್ನೋದು ಫೈನಲ್ ಆಗಿಲ್ಲ. ಅಲ್ಲದೆ ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್ ಪಟ್ಟು ಹಿಡಿದಿದೆ. ಕಳೆದ ಬಾರಿ ಪುತ್ರ ಸೋಲು ಕಂಡಿದ್ದ ಮಂಡ್ಯ ಕ್ಷೇತ್ರವನ್ನ ಈ ಸಲ ಗೆಲ್ಲಲೇಬೇಕೆಂದು ಹೆಚ್.ಡಿ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಒಕ್ಕಲಿಗ ಪ್ರಾಬಲ್ಯವುಳ್ಳ ಮಂಡ್ಯ ಕ್ಷೇತ್ರ ತಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇತ್ತ ಬಿಜೆಪಿ ಹೈಕಮಾಂಡ್ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಮತ್ತೊಂದೆಡೆ ಮಂಡ್ಯದ ಬಿಜೆಪಿ ನಾಯಕರು ಕೂಡ ಕ್ಷೇತ್ರ ತಮಗೇ ಬೇಕೆಂದು ವರಸೆ ತೆಗೆದಿದ್ದಾರೆ. ಮೂಲಗಳ ಪ್ರಕಾರ ಮಂಡ್ಯ ಕ್ಷೇತ್ರವನ್ನ ಬಿಜೆಪಿ ಜೆಡಿಎಸ್​ಗೆ ಬಿಟ್ಟುಕೊಡುವ ಸಾಧ್ಯತೆ ಹೆಚ್ಚಿದೆ. ಹಾಗೇನಾದ್ರೂ ಮಂಡ್ಯ ಜೆಡಿಎಸ್ ಪಾಲಾಗಿದ್ದೆ ಆದ್ರೆ ಸುಮಲತಾಗೆ ದೊಡ್ಡ ಹಿನ್ನಡೆಯಾಗಲಿದೆ. ಇಲ್ಲಿಯವರೆಗೂ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾ ಚುನಾವಣೆಗೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಬಿಜೆಪಿ ಕಡೆ ಒಲವು ಇರೋದ್ರಿಂದ ಕಾಂಗ್ರೆಸ್ ನಾಯಕರು ಸುಮಲತಾ ಬೆಂಬಲಕ್ಕೆ ನಿಲ್ಲೋದಿಲ್ಲ. ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಾಗುತ್ತೆ.

ಕಾಂಗ್ರೆಸ್‌ನಿಂದಲೂ ನನಗೆ ಆಹ್ವಾನವಿದೆ ಅಂತಿದ್ದ ಸುಮಲತಾಗೆ ಕೈ ನಾಯಕರು ಬಾಗಿಲು ಮುಚ್ಚಿದ್ದಾರೆ. ಯಾಕಂದ್ರೆ ಸುಮಲತಾರನ್ನ ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಪಕ್ಷದಲ್ಲಿ ಒಮ್ಮತ ಮೂಡಿಲ್ಲ. ಮಂಡ್ಯದಲ್ಲಿ ಕ್ಲೀನ್ ಇಮೇಜ್ ಇರುವ ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿಗೆ ಮಣೆ ಹಾಕಿ ಹಾಕಿ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಸುಮಲತಾರನ್ನ ಕಾಂಗ್ರೆಸ್‌ಗೆ ಕರೆತಂದು ಮಂಡ್ಯ ಟಿಕೆಟ್ ಕೊಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಕಾಂಗ್ರೆಸ್ ಆಹ್ವಾನದ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಕಾಂಗ್ರೆಸ್ ಬಾಗಿಲು ಬಹುತೇಕ ಬಂದ್ ಆಗಿದೆ. ಹೀಗಾಗಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಮಂಡ್ಯದಿಂದ ಕಣಕ್ಕಿಳಿಯಬೇಕೆಂಬ ಸುಮಲತಾ ಲೆಕ್ಕಾ ಉಲ್ಟಾ ಆಗಲಿದೆ. ಬಿಜೆಪಿ ಟಿಕೆಟ್ ಸಿಗದಿದ್ರೂ ಸುಮಲತಾ ಮಂಡ್ಯದಿಂದಲೇ ಸ್ಪರ್ಧೆ ಮಾಡೋದಾಗಿ ಹೇಳಿದ್ದಾರೆ. ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಗೆಲುವು ಸುಲಭವಾಗಿಲ್ಲ.

ಸುಮಲತಾ ಮುಂದೆ ಸವಾಲು! 

2019ರ ಲೋಕಸಭಾ ಚುನಾವಣೆ ವೇಳೆ ಹಲವು ವಿಚಾರಗಳಲ್ಲಿ ಸುಮಲತಾ ಬಗ್ಗೆ ಮತದಾರರಿಗೆ ಅನುಕಂಪವಿತ್ತು. 2018ರ ನವೆಂಬರ್ ತಿಂಗಳಲ್ಲಿ ಮಂಡ್ಯದ ಗಂಡು, ನಟ ಅಂಬರೀಶ್ ಸಾವನ್ನಪ್ಪಿದ್ರು. ಅವ್ರ ಸಾವಿನ 6 ತಿಂಗಳಲ್ಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದು, ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ರು. ಅಂಬರೀಶ್​ರ ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ರು. ಕುಮಾರಣ್ಣನ ಈ ನಿರ್ಧಾರದ ಹಿಂದೆ ಬೇರೆಯದ್ದೇ ರಾಜಕೀಯ ಲೆಕ್ಕಾಚಾರವಿತ್ತು. ಪುತ್ರನನ್ನ ಮಂಡ್ಯದಿಂದಲೇ ಲೋಕಸಭಾ ಚುನಾವಣಾ ಕಣಕ್ಕಿಳಿಸಿದ್ರು. ಆದ್ರೆ ಹೆಚ್​ಡಿಕೆಗೆ ಶಾಕ್ ಕೊಟ್ಟು ಸುಮಲತಾ ತಾವೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು. ದರ್ಶನ್ ಮತ್ತು ಯಶ್ ಜೋಡೆತ್ತುಗಳೆಂತೆ ಪ್ರಚಾರ ಮಾಡಿದ್ರು. ಬಿಜೆಪಿಯಂತೂ ಅಭ್ಯರ್ಥಿ ಹಾಕದೇ ಸುಮಲತಾಗೆ ಬೆಂಬಲ ಘೋಷಿಸಿತ್ತು. ಇನ್ನು ಜೆಡಿಎಸ್ ಜೊತೆ ಮೈತ್ರಿ ಇದ್ರೂ ಕೆಲ ಕಾಂಗ್ರೆಸ್ ನಾಯಕರು ಸುಮಲತಾಗೆ ಸಪೋರ್ಟ್ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಸುಮಲತಾ ಗೆದ್ದು ಬೀಗಿದ್ದರು. ಆದ್ರೆ ಈ ಬಾರಿ ಯಾವ ಅನುಕಂಪವೂ ಇಲ್ಲ. ಅಲ್ಲದೆ ಮಂಡ್ಯಕ್ಕೆ ಸುಮಲತಾ ಬರೋದೇ ಇಲ್ಲ ಎನ್ನುವ ಅಪವಾದವಿದೆ. ಹೀಗಾಗಿ ಯಾವುದೇ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಮತದಾರರ ಮನ ಗೆಲ್ಲೋದು ಅಷ್ಟು ಸುಲಭವಾಗಿಲ್ಲ.

ಸದ್ಯಕ್ಕಂತೂ ಮಂಡ್ಯ ಅಖಾಡ ರಂಗೇರುತ್ತಿದೆ. ಜೆಡಿಎಸ್ ನಿಂದ ನಿಖಿಲ್ ಅಥವಾ ಖುದ್ದು ಹೆಚ್​ಡಿಕೆಯೇ ಸ್ಪರ್ಧೆ ಮಾಡಬಹುದೆಂಬ ಬಗ್ಗೆ ಚರ್ಚೆಯಾಗ್ತಿದೆ. ಹೀಗಾಗಿ ಪ್ರೀತಿ, ಅಭಿಮಾನ ಕೊಟ್ಟ ನೆಲ ಬಿಡಲ್ಲ ಎಂದಿದ್ದ ಸುಮಲತಾ ಈಗೇನ್ ಮಾಡುತ್ತಾರೆ ಎನ್ನುವ ಚರ್ಚೆಯೂ ಗರಿಗೆದರಿದೆ. ಬಿಜೆಪಿ-ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಮಂಡ್ಯದಲ್ಲೇ ಪಕ್ಷೇತರರಾಗಿ ಸ್ಪರ್ಧಿಸ್ತಾರಾ? ಅಥವಾ ಬಿಜೆಪಿ ನಾಯಕರು ಸುಮಲತಾರನ್ನ ಮನವೊಲಿಸಿ ಬೇರೆ ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಾರಾ? ಇದಕ್ಕೆ ಸುಮಲತಾ ಒಪ್ತಾರಾ? ಅನ್ನೋದೇ ಈಗಿರುವ ಪ್ರಶ್ನೆ.

Shwetha M