ಸುಮಲತಾ ಮತ್ತು ನಿಖಿಲ್ ಜಟಾಪಟಿಗೆ ಮತ್ತೆ ಸಾಕ್ಷಿಯಾಗುತ್ತಾ ಮಂಡ್ಯ ಅಖಾಡ – ನಿಖಿಲ್ ಮೈತ್ರಿ ಅಭ್ಯರ್ಥಿಯಾಗೋದು ಪಕ್ಕಾನಾ..?

ಸುಮಲತಾ ಮತ್ತು ನಿಖಿಲ್ ಜಟಾಪಟಿಗೆ ಮತ್ತೆ ಸಾಕ್ಷಿಯಾಗುತ್ತಾ ಮಂಡ್ಯ ಅಖಾಡ – ನಿಖಿಲ್ ಮೈತ್ರಿ ಅಭ್ಯರ್ಥಿಯಾಗೋದು ಪಕ್ಕಾನಾ..?

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ರಣರಂಗವಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ನಡುವೆ ನೇರಾನೇರ ಕಾಳಗ ನಡೆದಿತ್ತು. ಸುಮಲತಾ ಪರ ದರ್ಶನ್ ಮತ್ತು ಯಶ್ ಜೊಡೆತ್ತುಗಳಾಗಿ ನಿಂತಿದ್ರೆ ನಿಖಿಲ್ ಪರ ಅಂದಿನ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ ಅಬ್ಬರಿಸಿದ್ರು. ಮಂಡ್ಯದ ದಶ ದಿಕ್ಕುಗಳಲ್ಲೂ ಪ್ರತಿಷ್ಠೆಯ ಕಹಳೆ ಮೊಳಗಿತ್ತು. ಇದೀಗ ಅಂಥದ್ದೇ ಅಖಾಡ ಮತ್ತೊಮ್ಮೆ ಸಿದ್ಧವಾಗ್ತಿದೆ. ಸ್ವಾಭಿಮಾನದ ಹೆಸ್ರಲ್ಲಿ ಮತ್ತೊಮ್ಮೆ ಸಂಸತ್ತಿಗೆ ಕಾಲಿಡಲು ಸುಮಲತಾ ತಯಾರಿ ಮಾಡಿದ್ದಾರೆ. ಮತ್ತೊಂದೆಡೆ ಸೋತ ನೆಲದಲ್ಲೇ ಗೆದ್ದು ಬೀಗೋಕೆ ನಿಖಿಲ್ ಹವಣಿಸ್ತಿದ್ದಾರೆ. ಮಂಡ್ಯ ಅಖಾಡ ಮತ್ತೆ ಸುಮಲತಾ ಮತ್ತು ನಿಖಿಲ್ ಜಟಾಪಟಿಗೆ ಸಾಕ್ಷಿಯಾಗೋದು ಬಹುತೇಕ ಫೈನಲ್ ಆಗಿದೆ. ಹಾಗಾದ್ರೆ ಸುಮಲತಾ ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ..? ನಿಖಿಲ್ ಮೈತ್ರಿ ಅಭ್ಯರ್ಥಿಯಾಗೋದು ಪಕ್ಕಾನಾ..? ಕಾಂಗ್ರೆಸ್ ಸ್ಟ್ರಾಟಜಿ ಹೇಗಿದೆ..? ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ:ಮಂಡ್ಯಕ್ಕಾಗಿ ಸುಮಲತಾ ಜೊತೆ ಕುಮಾರಣ್ಣನ ಸಂಧಾನ?- ಸ್ನೇಹದ ನಿರೀಕ್ಷೆಯಲ್ಲಿದ್ದಾರಾ ಹೆಚ್‌ಡಿಕೆ?

ಮಂಡ್ಯದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ದೊಡ್ಡ ಶಾಕ್ ನೀಡಿತ್ತು. ಆದ್ರೂ ಪಟ್ಟು ಬಿಡದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಆದರೂ ಮಂಡ್ಯದಿಂದಲೇ ಸ್ಪರ್ಧಿಸೋ ಸವಾಲು ಹಾಕಿದ್ದಾರೆ. ಸೈಲೆಂಟ್ ಆಗೇ ದಾಳ ಉರುಳಿಸುತ್ತಿರುವ ಸುಮಲತಾ ತಮ್ಮ ಆಪ್ತರ ಮೂಲಕ ಬಿಜೆಪಿಗೆ ಎಚ್ಚರಿಕೆ ರವಾನಿಸುತ್ತಿದ್ದಾರೆ. ಆದ್ರೆ ಆರಂಭದಲ್ಲೇ ಸುಮಲತಾಗೆ ಶಾಕ್ ಎದುರಾಗಿದೆ.

ಸುಮಲತಾ ಬಣ ಇಬ್ಭಾಗ?  

ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಬೇಕು ಅನ್ನೋ ಆಲೋಚನೆಯಲ್ಲಿದ್ದ ಸುಮಲತಾಗೆ ಬಿಗ್ ಶಾಕ್ ಎದುರಾಗಿದೆ. ಕಮಲ ದಳ ಮೈತ್ರಿ ಬಳಿಕ ಸುಮಲತಾ ಕಾಂಗ್ರೆಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ರು. ಆದ್ರೀಗ ಸುಮಲತಾ ಪಡೆಯಲ್ಲಿ ಎರಡು ಭಾಗವಾಗಿದೆ ಎನ್ನಲಾಗಿದೆ. ಒಂದು ಬಣ ತಮ್ಮ ನಾಯಕಿಯ ನಿರ್ಧಾರಕ್ಕೆ ನಿಂತರೆ, ಮತ್ತೊಂದು ಬಣ ಮೈತ್ರಿ ಪರ ನಿಂತಿದ್ಯಂತೆ. ಅದರ ಮುಂದುವರಿದ ಭಾಗವಾಗಿ ಸುಮಲತಾ ಅವರ ಅತ್ಯಾಪ್ತ ಇಂಡುವಾಳು ಸಚ್ಚಿದಾನಂದ ಅವರನ್ನ ಕುಮಾರಸ್ವಾಮಿ ಭೇಟಿಯಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಜೊತೆ ಕುಮಾರಸ್ವಾಮಿ ಭೇಟಿಯಾಗಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಬಗ್ಗೆ ಭರವಸೆ ನೀಡಿದ್ದಾರಂತೆ. ಕಳೆದ ಚುನಾವಣೆಯಲ್ಲಿ ಸಚ್ಚಿದಾನಂದ ಸುಮಲತಾ ಹೆಗಲಿಗೆ ಹೆಗಲಾಗಿ ನಿಂತಿದ್ದರು. ಹಲವು ಕಾರ್ಯಕ್ರಮದಲ್ಲಿ ಸಚ್ಚಿದಾನಂದ ನನ್ನ ಮತ್ತೊಬ್ಬ ಮಗ ಎಂದು ಹೇಳಿಕೊಂಡಿದ್ದರು. ಇದೀಗ ಸಚ್ಚಿದಾನಂದ ಅವರ ನಿಲುವು ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಸುಮಲತಾಗೆ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊನೆ ಕ್ಷಣದವರೆಗೂ ಸುಮಲತಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಸಂಸದೆ ಸುಮಲತಾ ತಮ್ಮ ಸ್ಪರ್ಧೆ ಬಗ್ಗೆ ತಮ್ಮ ಆಪ್ತರ ಮೂಲಕವೇ ಹೇಳಿಸುತ್ತಿದ್ದಾರೆ. ತಾವು ಮಂಡ್ಯದಿಂದ ಸ್ಪರ್ಧಿಸುವುದು ನಿಶ್ಚಿತ ಎಂಬ ಸಂದೇಶವನ್ನು ತಮ್ಮ ಆಪ್ತ ಹನಕೆರೆ ಶಶಿಕುಮಾರ್ ಅವರ ಬಾಯಿಂದ ಹೇಳಿಸಿದ್ದಾರೆ. ಸಂದೇಶಕ್ಕಿಂತ ಅವರು ಬಿಜೆಪಿಗೆ ಎಚ್ಚರಿಕೆ ರವಾನಿಸಿದ್ದಾರೆ ಅಂತಾನೇ ಹೇಳ್ಬೋದು. ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಮಾಡಿದರೆ ಸುಮಲತಾ ಅವರ ಮುಂದೆ ಬೇರೆ ಆಯ್ಕೆಗಳಿವೆ ಎನ್ನುವ ಮೂಲಕ ನಾವು ಎಲ್ಲದಕ್ಕೂ ಸಿದ್ಧ ಎನ್ನುವ ಸಂದೇಶ ರವಾನಿಸಿದ್ದಾರೆ. ಹೀಗೆ ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಒಂದು ಕಡೆ ಕನ್ಫರ್ಮ್ ಆಗ್ತಿದ್ರೆ ಮತ್ತೊಂದೆಡೆ ಪರ ವಿರೋಧದ ಅಲೆಯೂ ಎದ್ದಿದೆ. ಮತ್ತೊಂದೆಡೆ ಮಂಡ್ಯ ಕ್ಷೇತ್ರ ತಮಗೇ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿರುವ ಕುಮಾರಣ್ಣ ಭರ್ಜರಿ ಗೇಮ್ ಪ್ಲ್ಯಾನ್ ಮಾಡ್ತಿದ್ದಾರೆ. ಮತ್ತೊಂದೆಡೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವ್ರನ್ನೇ ಮತ್ತೊಮ್ಮೆ ಅಖಾಡಕ್ಕಿಳಿಸೋ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.

ಮತ್ತೊಮ್ಮೆ ನಿಖಿಲ್ ಸ್ಪರ್ಧೆ?  

ಲೋಕಸಭಾ ಚುನಾವಣೆ ಹತ್ತಿರವಾದಂತೆಲ್ಲಾ ನಿಖಿಲ್ ಕುಮಾರಸ್ವಾಮಿ ಹೆಸರು ಪದೇಪದೆ ಮುನ್ನಲೆಗೆ ಬರ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲೂ ನಿಖಿಲ್‌ರನ್ನೇ ಕಣಕ್ಕೆ ಇಳಿಸುವಂತೆ ಮಂಡ್ಯದ ಜೆಡಿಎಸ್ ನಾಯಕರು ಒತ್ತಡ ಹಾಕುತ್ತಿದ್ದಾರೆ. ಈ ಮೂಲಕ ಲೋಕಸಭೆ, ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಜೊತೆ ಜಿಲ್ಲೆಯ ಜೆಡಿಎಸ್ ನಾಯಕರು ಚರ್ಚೆ ಮಾಡಿದ್ದು ನಿಖಿಲ್​ರನ್ನು ಕಣಕ್ಕೆ ಇಳಿಸಲು ಒತ್ತಡ ಹಾಕಿದ್ದಾರೆ. ಜೊತೆಗೆ ನಿಖಿಲ್ ಸ್ವರ್ಧೆ ‌ಮಾಡಿದ್ರೆ ಗೆಲುವು ಸಾಧಿಸಲು ಅನುಕೂಲ ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.

ಅಸಲಿಗೆ 2019ರ ಲೋಕಸಭಾ ಸಮರಕ್ಕೂ 2024ರ ಸಮರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸಿದ್ರು. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿಯಾಗಿದೆ. ಆದ್ರೆ ಮೈತ್ರಿ ನಾಯಕರೆಲ್ಲಾ ನಿಷ್ಠೆಯಿಂದ ಬೆಂಬಲ ನೀಡ್ತಾರೆ ಅಂತಾ ಹೇಳೋಕೆ ಆಗಲ್ಲ. ಸಂಸದೆ ಸುಮಲತಾಗೂ ಕಳೆದ ಬಾರಿಯಂತೆ ಈ ಸಲ ಗೆಲುವು ಸಿಗುತ್ತೆ ಅಂತಾ ಹೇಳೋಕೂ ಆಗಲ್ಲ. ಜನರ ಅಭಿಪ್ರಾಯಗಳೂ ಬದಲಾಗಿವೆ. ಹೀಗಾಗಿ ಉಭಯ ನಾಯಕರು ಮತ್ತೆ ಮುಖಾಮುಖಿಯಾದ್ರೆ ಮಂಡ್ಯ ಮತ್ತೊಮ್ಮೆ ರಣರಂಗವಾಗೋದು ಫಿಕ್ಸ್.

Sulekha