ನೇಹಾ ತಂದೆಗೆ ಕ್ಷಮೆ ಕೇಳಿದ ಸಿಎಂ | ಮಂಡ್ಯ ಅಖಾಡಕ್ಕೆ ಸುಮಲತಾ ಎಂಟ್ರಿ! | ಇಂದಿನ ಪ್ರಮುಖ ಸುದ್ದಿಗಳು

 ನೇಹಾ ತಂದೆಗೆ ಕ್ಷಮೆ ಕೇಳಿದ ಸಿಎಂ | ಮಂಡ್ಯ ಅಖಾಡಕ್ಕೆ ಸುಮಲತಾ ಎಂಟ್ರಿ! | ಇಂದಿನ ಪ್ರಮುಖ ಸುದ್ದಿಗಳು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರಿಗೆ ಸಿಎಂ ಸಿದ್ದರಾಮಯ್ಯ ಸಾರಿ ಕೇಳಿದ್ದಾರೆ. ಕಾನೂನು ಸಚಿವ ಹೆಚ್​ಕೆ ಪಾಟೀಲ್​ ಹಿರೇಮಠ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಫೋನ್ ಮೂಲಕ ಮಾತನಾಡಿಸಿದರು. ಸಿಎಂ ಸಿದ್ದರಾಮಯ್ಯ, ನೇಹಾ ತಂದೆ ನಿರಂಜನ ಹಿರೇಮಠ ಜೊತೆ ಮಾತನಾಡಿ, ನಾವು ನಿಮ್ಮ ಜೊತೆ ಇರುತ್ತೇವೆ, ವೆರಿ ಸಾರಿ ಎಂದರು. ಪ್ರಕರಣವನ್ನು ಸಿಐಡಿಗೆ ನೀಡಿದ್ದಕ್ಕೆ ನಿಮಗೆ ಧನ್ಯವಾದ ಅಂತ ನಿರಂಜನ ಹಿರೇಮಠ ಸಿಎಂಗೆ ಹೇಳಿದರು.

  •  ಮತ್ತೆ ಬಿಜೆಪಿಗೆ ಬರ್ತಾರಾ ಕೆ.ಎಸ್‌ ಈಶ್ವರಪ್ಪ?

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ ಅವರನ್ನು ಬಿಜೆಪಿಯಿಂದ 6 ವರ್ಷಗಳ ಅವಧಿಗೆ ಉಚ್ಛಾಟಿಸಿದೆ.. ಆದರೆ ಈಶ್ವರಪ್ಪ ಮಾತ್ರ ಬಿಜೆಪಿ ಕ್ರಮಕ್ಕೆ ಕ್ಯಾರೆ ಅನ್ನುತ್ತಿಲ್ಲ.. ಇದೀಗ ಈಶ್ವರಪ್ಪ ಶಾಕಿಂಗ್‌ ರಿಯಾಕ್ಷನ್‌ ಕೊಟ್ಟಿದ್ದಾರೆ…ನಾನು ಮತ್ತೆ ಬಿಜೆಪಿಗೆ ಹೋಗುತ್ತೇನೆ ಅಂತಾ ಹೇಳಿದ್ದಾರೆ.. ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದ ಬಳಿಕ ಯಡಿಯೂರಪ್ಪ ಬಂದು ತನ್ನನ್ನು ಪಕ್ಷಕ್ಕೆ ಕರೆದೊಯ್ಯುತ್ತಾರೆ.. ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ಅವರೇ ವಾಪಸ್ಸು ಕರೆತಂದಿದ್ದರು ಅಂತಾ ಹೇಳಿದ್ದಾರೆ.

  • ಮಂಡ್ಯ ಅಖಾಡಕ್ಕೆ ಸುಮಲತಾ ಎಂಟ್ರಿ!

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ ಪರ ಸುಮಲತಾ ಅಂಬರೀಶ್‌ ನಾಳೆ ಪ್ರಚಾರ ಮಾಡಲಿದ್ದಾರೆ. ಇಷ್ಟು ದಿನ ಸುಮಲತಾ, ಕುಮಾರಸ್ವಾಮಿ ಪರ ಪ್ರಚಾರ ಮಾಡದೇ ದೂರ ಉಳಿದಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಡೆಗೂ ಮಂಡ್ಯ ಕಣಕ್ಕೆ ಸುಮಲತಾ ಎಂಟ್ರಿಯಾಗುತ್ತಿದ್ದಾರೆ. ಚುನಾವಣಾ ಪ್ರಚಾರ ದಿನದ ಅಂತಿಮ ದಿನವಾದ ನಾಳೆ ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ನಡೆಸಲಿದ್ದಾರೆ.

  • ಕೈಪಡೆಯ ಚೊಂಬು ಫೈಟ್ ಗೆ ಕಮಲ ಪಕ್ಷದಿಂದ ಮತ್ತೊಂದು ತಿರುಗೇಟು!

ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ `ಚೊಂಬು’ ಎಂಬ ಕಾಂಗ್ರೆಸ್ ಜಾಹೀರಾತಿಗೆ ಪ್ರತಿಯಾಗಿ `ಕಾಂಗ್ರೆಸ್ ಡೇಂಜರ್’ ಎಂಬ ಜಾಹೀರಾತು ಪ್ರಕಟಿಸಿದ್ದ ರಾಜ್ಯ ಬಿಜೆಪಿ ಇದೀಗ `ಪಿಕ್ ಪಾಕೆಟ್ ಕಾಂಗ್ರೆಸ್’ ಎಂಬ ಮತ್ತೊಂದು ಜಾಹೀರಾತು ಪ್ರಕಟಿಸಿದೆ. ದರ ಹೆಚ್ಚಳ, ತೆರಿಗೆ ಹೆಚ್ಚಳ ಮಾಡಿರುವ ವಿಚಾರವನ್ನೇ ಪ್ರಸ್ತಾಪಿಸಿ ಬಿಜೆಪಿ, ಕಾಂಗ್ರೆಸ್ ಜನರ ಜೇಬಿಗೆ ಕೈ ಹಾಕಿದೆ ಎಂದು ಆರೋಪಿಸಿದೆ. ಪ್ಯಾಂಟಿನ ಜೇಬಿನಿಂದ ನೋಟನ್ನು ಕದಿಯುತ್ತಿರುವ ಚಿತ್ರದೊಂದಿಗೆ `ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ’ ಎಂದು ಬಿಜೆಪಿ ತನ್ನ ಪೋಸ್ಟರ್ ನಲ್ಲಿ ಉಲ್ಲೇಖಿಸಿದೆ.

  • ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ ದೊಡ್ಡೇಗೌಡರು?

ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಕೈಗೊಂಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಭಾವುಕರಾಗಿ ಮಾತನಾಡುತ್ತಿದ್ದ ದೊಡ್ಡಗೌಡರ ಕಣ್ಣುಗಳಿಂದ ನೀರು ಸುರಿಯುತಿತ್ತು. ತಾವು ರೈತರಿಗೆ ಮಾಡಿದ ಸಹಾಯಗಳನ್ನು ನೆನಪಿಸಿದ ದೇವೇಗೌಡರು, ನಾನು ಇನ್ನೆಷ್ಟು ವರ್ಷ ಬದುಕಿರುತ್ತೇನೋ ಗೊತ್ತಿಲ್ಲ, ಆದರೆ ಬದುಕಿರುವಷ್ಟು ಜನ ರಾಜ್ಯದ ರೈತರಿಗೆ ಒಳಿತನ್ನು ಮಾಡುವ ಸಂಕಲ್ಪ ತೊಟ್ಟಿದ್ದೇನೆ ಎಂದರು.

  •  ಬೆಂಗಳೂರಿನಲ್ಲಿ‌ ಎರಡು ದಿನ ಮದ್ಯ ಮಾರಾಟ ಬಂದ್!

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಮತದಾನ ನಡೆಯುವ ಬೆಂಗಳೂರಿನ ಎಂಟೂ ವಿಭಾಗಗಳಲ್ಲಿಯೂ ಪೊಲೀಸ್​ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಮತದಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 24ರ ಸಂಜೆ 6ರಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ. ಜೊತೆಗೆ ಮದ್ಯ ಮಾರಾಟಕ್ಕೂ ನಿಷೇಧವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ.

  • ವ್ಯಕ್ತಿಯೊಬ್ಬನ ಶರ್ಟ್ನೊಳಗೆ ಇತ್ತು ಬರೋಬ್ಬರಿ 14 ಲಕ್ಷ ರೂಪಾಯಿ!

ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ವಾಹನಗಳ ತಪಾಸಣೆ ಮಾಡಿ ದುಡ್ಡನ್ನ ಸೀಜ್ ಮಾಡ್ತಾರೆ. ಜೊತೆಗೆ ಬಸ್‌ಗಳಲ್ಲೂ ತಪಾಸಣೆ ಮಾಡೋದು ಕೂಡಾ ಕಾಮನ್. ಆದ್ರೆ, ಕೇರಳ-ತಮಿಳುನಾಡು ಗಡಿಯಲ್ಲಿರುವ ವಾಳಯಾರ್ ಚೆಕ್ ಪೋಸ್ಟ್‌ನಲ್ಲಿ ಬಸ್‌ನಲ್ಲಿದ್ದ ವ್ಯಕ್ತಿಯೊಬ್ಬನನ್ನ ತಪಾಸಣೆ ಮಾಡಲಾಗಿದೆ. ಅಚ್ಚರಿಯೆಂಬಂತೆ ಆತನ ಶರ್ಟ್‌ನೊಳಗೆ ಬರೋಬ್ಬರಿ 14 ಲಕ್ಷ ರೂಪಾಯಿ ಸಿಕ್ಕಿದೆ. ವಿನೋ ಎಂಬ ವ್ಯಕ್ತಿಯನ್ನು ನೋಡಿ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಬಟ್ಟೆ ತೆಗೆಯಲು ಹೇಳಿದಾಗ 14 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

  •  ಸಿಎಂಗೆ ಸರ್ಪ್ರೈಸ್ ನೀಡಿದ ವಿದ್ಯಾರ್ಥಿನಿ!

ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪರ ಚುನಾವಣೆ ಪ್ರಚಾರ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿನಿಯೊಬ್ಬಳು ಸರ್‌ಪ್ರೈಸ್ ನೀಡಿದ್ದಾಳೆ. ಅರಸೀಕೆರೆಯಲ್ಲಿ ಸಿಎಂ ಪ್ರಚಾರ ಮಾಡುತ್ತಿದ್ದಾಗ ಆಗಮಿಸಿದ ಕಾನೂನು ವಿಭಾಗದ ವಿದ್ಯಾರ್ಥಿನಿ ಜಯಶ್ರೀ, ಮುಖ್ಯಮಂತ್ರಿಗಳಿಗೆ ವಿಶೇಷ ಹಾರವೊಂದನ್ನು ಅರ್ಪಿಸಿದ್ದಾಳೆ. ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಫ್ರೀ ಟಿಕೆಟ್​ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ. ನಿಮಗೆ ಅರ್ಪಿಸುವುದಕ್ಕೆ ಕಾಯುತ್ತಿದ್ದೆ ಎಂದು ಹೇಳಿ ಸಂಭ್ರಮಪಟ್ಟಿದ್ದಾಳೆ.

Shwetha M