ಮಂಡ್ಯದಲ್ಲಿ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ತಾರಾ ಕುಮಾರಣ್ಣ? – ಹೇಗಿದೆ ಮಂಡ್ಯ ರಾಜಕೀಯ..!?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ ಅಂತಾ ಸುಮಲತಾ ಅಂಬರೀಶ ಹೇಳಿದ್ದಾರೆ. ಒಂದು ವೇಳೆ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿದ್ರೆ ಗೆಲ್ಲುತ್ತಾರಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೋವಿಡ್ ಪಾಸಿಟಿವ್ ಬಂದ್ರೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ – ದಿನೇಶ್ ಗುಂಡೂರಾವ್
ವಿಧಾನಸಭಾ ಕ್ಷೇತ್ರಗಳಿರುವ ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಂಡ್ಯ ನಂತರ ಜೆಡಿಎಸ್ ತೆಕ್ಕೆಗೆ ಜಾರಿತ್ತು. ಈವರೆಗೂ ಮಂಡ್ಯ ಲೋಕಸಭೆಯಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಹೀಗಾಗಿ ಮೈತ್ರಿಯಲ್ಲಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದಿದ್ರೆ ಸುಮಲತಾಗೆ ಬಿಜೆಪಿ ಟಿಕೆಟ್ ಕೊಡಬೇಕು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಸುಮಲತಾ ಬಿಜೆಪಿಯಿಂದ ಸ್ಪರ್ಧಿಸಬೇಕು. ಬಿಜೆಪಿಯಿಂದ ಸ್ಪರ್ಧಿಸಿದರೆ ಸುಮಲತಾಗೆ ಕಳೆದ ಬಾರಿಯಂತೆ ಮತ ಸಿಗದೆ ಇರಬಹುದು. ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಬಿಜೆಪಿಗೆ ಅಂತಹ ದೊಡ್ಡ ನಷ್ಟ ಏನೂ ಆಗುವುದಿಲ್ಲ. ಆದ್ರೆ ಬಿಜೆಪಿಗೆ ಮಂಡ್ಯ ಕ್ಷೇತ್ರವನ್ನ ಬಿಟ್ಟುಕೊಟ್ಟರೆ ಜೆಡಿಎಸ್ ಗೆ ಬಹುದೊಡ್ಡ ನಷ್ಟವಾಗುತ್ತೆ. ಹಾಸನದ ಬಳಿಕ ಮಂಡ್ಯ ಕ್ಷೇತ್ರ ದಳಪತಿಗಳ ಪಾಲಿಗೆ ಭದ್ರಕೋಟೆ ಎನಿಸಿಕೊಂಡಿದೆ. ಒಕ್ಕಲಿಗರ ಪ್ರಾಬಲ್ಯ ಇರೋದ್ರಿಂದ ಜಿಲ್ಲೆಯಲ್ಲಿ ಜೆಡಿಎಸ್ ಕಡೆ ಹೆಚ್ಚಿನ ಒಲವು ಇದೆ. ಕಳೆದ ಬಾರಿ ಅನುಕಂಪದ ಆಧಾರದಲ್ಲಿ ಸುಮಲತಾ ಅಂಬರೀಶ್ ಗೆ ಹೆಚ್ಚಿನ ಮತ ಸಿಕ್ಕಿತ್ತು. ಚುನಾವಣೆ ಬಳಿಕ ಹಲವು ವಿಚಾರಗಳಲ್ಲಿ ಸುಮಲತಾ ಬಗ್ಗೆ ಮತದಾರರಲ್ಲಿ ಅಸಮಾಧಾನ ಇದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಜೆಡಿಎಸ್ ಸ್ಪರ್ಧಿಗೆ ಗೆಲುವು ಸಿಗಬಹುದು.
ಸದ್ಯ ಮಂಡ್ಯದಲ್ಲಿನ ರಾಜಕೀಯ ಬೆಳವಣಿಗೆಗಳನ್ನ ಗಮನಿಸಿದ್ರೆ 2019ರ ಲೋಕಸಭಾ ಚುನಾವಣೆಗೂ 2024ರ ಚುನಾವಣೆಗೂ ಬಹಳಷ್ಟು ವ್ಯತ್ಯಾಸಗಳಿವೆ. 2019ರಲ್ಲಿ ಬಿಜೆಪಿಗೆ ರಾಜಕೀಯ ಎದುರಾಳಿಯಾಗಿದ್ದ ಜೆಡಿಎಸ್ ಈಗ ಮೈತ್ರಿಯಿಂದ ಮಿತ್ರನಾಗಿದೆ. ಕಳೆದ ಲೋಕಸಭಾ ಚುನಾವಣೆಯ ಜೆಡಿಎಸ್ ಮಿತ್ರ ಕಾಂಗ್ರೆಸ್ ಈಗ ವಿರೋಧಿ ಸ್ಥಾನದಲ್ಲಿದೆ. ಜನಾಭಿಪ್ರಾಯವೂ ಪ್ರಸ್ತುತ ಸಂದರ್ಭದಲ್ಲಿ ವಿಭಿನ್ನವಾಗಿದೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ಗೆ ಗೆಲುವು ಅನಿವಾರ್ಯವಾಗಿದೆ. ಮತ್ತೊಂದೆಡೆ ಕಳೆದ ಬಾರಿಯಂತೆ ಅಷ್ಟು ಸಲೀಸಾಗಿ ಸುಮಲತಾ ಗೆಲ್ಲೋದು ಕೂಡ ಕಷ್ಟವೇ. ಆದ್ರೂ ಬಿಜೆಪಿ ನಾಯಕರ ಆಫರ್ ಗೆ ಒಪ್ಪದೆ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಲೂಬಹುದು. ಬೇರೆ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸದೆ ಇರಲೂಬಹುದು. ಹಾಗೇನಾದ್ರೂ ಮಂಡ್ಯ ಕ್ಷೇತ್ರ ಬಿಜೆಪಿ ಪಾಲಾದ್ರೆ ಸುಮಲತಾಗೆ ಟಿಕೆಟ್ ನೀಡಬಹುದು. ಆದ್ರೆ ಇದೆಲ್ಲದರ ಹೊರತಾಗಿ ಕ್ಲೈಮ್ಯಾಕ್ಸ್ನಲ್ಲಿ ಜೆಡಿಎಸ್ ಮತ್ತು ಬಿಜೆಪಿಗೆ ಶಾಕ್ ಕೊಟ್ಟು ಕಾಂಗ್ರೆಸ್ ಗೆದ್ದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ರಾಜಕೀಯದಲ್ಲಿ ಯಾವಾಗ ಏನಾಗುತ್ತೆ ಅನ್ನೋದನ್ನ ಊಹಿಸೋಕೂ ಸಾಧ್ಯ ಇಲ್ಲ.