ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಕ್ಕೆ ಪೆಟ್ಟು?  – ಕುಮಾರಣ್ಣನ ಗೇಮ್​ಗೆ ಪಕ್ಷೇತರ ಸ್ಪರ್ಧೆ?

ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಕ್ಕೆ ಪೆಟ್ಟು?  – ಕುಮಾರಣ್ಣನ ಗೇಮ್​ಗೆ ಪಕ್ಷೇತರ ಸ್ಪರ್ಧೆ?

2019ರ ಲೋಕಸಭಾ ಚುನಾವಣೆ ಅಂದ್ರೆ ಕರ್ನಾಟಕದ ಮತದಾರರಿಗೆ ಥಟ್ಟಂತ ನೆನಪಾಗೋದೇ ಮಂಡ್ಯ ಕ್ಷೇತ್ರ. ಎಲೆಕ್ಷನ್ ಮುಗ್ದು ರಿಸಲ್ಟ್ ದಿನ ಇಡೀ ದೇಶದ ಚಿತ್ತ ಪ್ರಧಾನಿಯತ್ತ ನೆಟ್ಟಿದ್ರೆ ಕರ್ನಾಟಕದ ಮತದಾರರ ಕಣ್ಣು ಮಂಡ್ಯದ ಮೇಲೇ ಇತ್ತು. ಒಂದ್ಕಡೆ ಅಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿಯವ್ರ ಪುತ್ರ ನಿಖಿಲ್ ಕುಮಾರಸ್ವಾಮಿ. ಮತ್ತೊಂದ್ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನೇರಾನೇರ ಪೈಪೋಟಿಗೆ ಇಳಿದಿದ್ದರು. ನಿಖಿಲ್ ಪರ ಹೆಚ್​ಡಿಕೆ ಮತ್ತು ಡಿಕೆಶಿ ಜೋಡೆತ್ತುಗಳಂತೆ ಅಬ್ಬರಿಸುತ್ತಿದ್ರೆ ಯಶ್‌ ಮತ್ತು ದರ್ಶನ್‌ ಸುಮಲತಾ ಪರ ಘೀಳಿಡ್ತಿದ್ರು. ಕೊನೆಗೆ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ರು. ಇದೇ ಹಿಸ್ಟರಿ ರಿಪೀಟ್ ಆಗೋ ಎಲ್ಲಾ ಚಾನ್ಸಸ್ ಇದೆ. ಮತ್ತೊಮ್ಮೆ ಸುಮಲತಾ ಮತ್ತು ಹೆಚ್​ಡಿಡಿ ಫ್ಯಾಮಿಲಿ ಮುಖಾಮುಖಿಯಾಗೋದು ಫಿಕ್ಸ್ ಎನ್ನಲಾಗ್ತಿದೆ. ಅಷ್ಟಕ್ಕೂ ಮಂಡ್ಯ ಕ್ಷೇತ್ರ ಜೆಡಿಎಸ್​ಗೋ ಬಿಜೆಪಿಗೋ..? ಅಭ್ಯರ್ಥಿ ಯಾರು..? ಸುಮಲತಾ ನಡೆ ಏನು..? ಕುಮಾರಣ್ಣ ಕ್ಷೇತ್ರ ಬಿಟ್ಟು ಕೊಡ್ತಾರಾ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ 

ಪುತ್ರನ ಹೀನಾಯ ಸೋಲಿನಿಂದ ಸುಮಲತಾ ವಿರುದ್ಧ ಬುಸುಗುಡ್ತಿರೋ ಕುಮಾರಣ್ಣ ಸೇಡು ತೀರಿಸಿಕೊಳ್ಳೋಕೆ ಹವಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ತಮಗೇ ಬೇಕು ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ. ಇತ್ತ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳನ್ನೂ ಗೆಲ್ಲಬೇಕು ಅನ್ನೋದು ಬಿಜೆಪಿ ಟಾರ್ಗೆಟ್. ಈಗಾಗ್ಲೇ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ನಡೆದಿದ್ದು ಕ್ಷೇತ್ರಗಳ ಹಂಚಿಕೆ ಬಹುತೇಕ ಫೈನಲ್ ಆದಂತಿದೆ. ಬಿಜೆಪಿಗೆ 24 ಕ್ಷೇತ್ರ ಹಾಗೂ ಜೆಡಿಎಸ್​ಗೆ 4 ಕ್ಷೇತ್ರ ಬಿಟ್ಟುಕೊಡೋದು ಪಕ್ಕಾ ಆಗ್ತಿದೆ. ಕೋಲಾರ, ಮಂಡ್ಯ, ಹಾಸನ ಮತ್ತು ಮೈಸೂರು-ಕೊಡಗು ಕ್ಷೇತ್ರವನ್ನು ಜೆಡಿಎಸ್ ನಾಯಕರು ಕೇಳಿದ್ದಾರೆ ಎನ್ನಲಾಗಿದೆ. ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಇದೇ ಬೆಳವಣಿಗೆ ಈಗ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಮುನ್ನುಡಿ ಬರೆಯುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಗೇಮ್ ಗೆ ಸೆಡ್ಡು ಹೊಡೆಯೋಕೆ ಸಂಸದೆ ಸುಮಲತಾ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಸುಮಲತಾ ಮೈತ್ರಿ ಪಕ್ಷಗಳ ವಿರುದ್ಧ ತೊಡೆ ತಟ್ಟಿದ್ದಾರೆ.

ಮಂಡ್ಯದಿಂದ ಸ್ಪರ್ಧಿಸೋದು ಫಿಕ್ಸ್!

2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದಲೇ ಮತ್ತೊಮ್ಮೆ ಸ್ಪರ್ಧಿಸೋದಾಗಿ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ. ಬಿಜೆಪಿ ಟಿಕೆಟ್ ನೀಡಿದ್ರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ನನ್ನ ಕರ್ಮಭೂಮಿಯಾಗಿದ್ದು, ಇಲ್ಲಿಂದಲೇ ಸ್ಪರ್ಧೆ ಮಾಡೋದು ನನ್ನ ಬಯಕೆ. ನನ್ನ ಸ್ಪರ್ಧೆಯ ಬಗ್ಗೆ ಹರಡಿರುವ ವದಂತಿಗಳಿಗೆ ಯಾರೂ ಕಿವಿಕೊಡಬೇಡಿ. ಮಾರ್ಚ್​ನಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ನಿರ್ಧಾರ ಪ್ರಕಟಿಸುತ್ತೇನೆ. ಮಂಡ್ಯದಲ್ಲಿ ಸಾಕಷ್ಟು ಜನರು ಅಂಬರೀಶ್ ಅವರ ಅಭಿಮಾನಿಗಳಿದ್ದಾರೆ. ಅಂಬರೀಶ್ ಇಲ್ಲಿಯ ಜನಪ್ರಿಯ ಕೆಲಸಗಳನ್ನು ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೇನೇ ಹೊರತು ಪಕ್ಷದ ತೀರ್ಮಾನಗಳಲ್ಲಿ ಭಾಗಿಯಾಗಿಲ್ಲ. ನಾನಿನ್ನೂ ಪಕ್ಷೇತರ ಲೋಕಸಭೆ ಸಂಸದೆ ಅನ್ನೋ ಮೂಲಕ ಮತ್ತೊಮ್ಮೆ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ ಆಗುವ ಸೂಚನೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಪರ ಇದ್ದ ಬಿಜೆಪಿ ಲೋಕಸಭಾ ಚುನಾವಣೆ ವೇಳೆಗೆ ತನ್ನ ಪ್ಲ್ಯಾನ್ ಚೇಂಜ್ ಮಾಡಿತ್ತು. ಜೆಡಿಎಸ್ ಜೊತೆ ಮೈತ್ರಿಯಾದ ಬಳಿಕ ಬಿಜೆಪಿ ಸಂಸದೆ ಸುಮಲತಾರಿಂದ ಅಂತರ ಕಾಯ್ದುಕೊಂಡೇ ಬರ್ತಿದೆ. ಬಿಜೆಪಿಯ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ. ಅಲ್ಲದೆ ದಶಕಗಳಿಂದಲೂ ಮಂಡ್ಯ ಅಂದ್ರೆ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿದುಕೊಂಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಕ್ಕರೆನಗರಿಯ ರಸ ಹೀರೋಕೆ ಬಿಜೆಪಿ ಹಲವು ಸಲ ಪ್ರಯತ್ನ ಪಟ್ಟಿದೆ. ಈ ಸಲ ಪಕ್ಷೇತರ ಸಂಸದೆ ಸುಮಲತಾಗೆ ಬಿಜೆಪಿ ಟಿಕೆಟ್ ನೀಡಬಹುದು ಎಂದೇ ಅಂದಾಜಿಸಲಾಗಿತ್ತು. ಆದ್ರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಈ ಲೆಕ್ಕಾಚಾರ ಉಲ್ಟಾ ಆಗಿದೆ. ಒಂದ್ಕಡೆ ಸುಮಲತಾ ನಾನು ಪಕ್ಷೇತರ ಅಭ್ಯರ್ಥಿಯಾಗಿ ಆದ್ರೂ ಮತ್ತೊಮ್ಮೆ ಅಖಾಡಕ್ಕೆ ಇಳಿಯೋದು ಖಚಿತ ಅಂತಿದ್ದಾರೆ. ಮತ್ತೊಂದೆಡೆ ಹೆಚ್.ಡಿ ಕುಮಾರಸ್ವಾಮಿ ಅವ್ರನ್ನೇ ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಕಣಕ್ಕಿಳಿಯುತ್ತಾರಾ ಕುಮಾರಣ್ಣ?

ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಹೆಚ್.ಡಿ ದೇವೇಗೌಡ ಮತ್ತು ಕುಟುಂಬಸ್ಥರು ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದರು. ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಜೆಡಿಎಸ್‌ ಪಾಲಾಗಿವೆ. ಜೆಡಿಎಸ್‌ನ ಇಬ್ಬರು ಹಿರಿಯ ನಾಯಕರಾದ ಸಿಎಸ್‌ ಪುಟ್ಟರಾಜು ಮತ್ತು ಸುರೇಶ್‌ಗೌಡ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಒಲವು ಹೊಂದಿದ್ದಾರೆ. ಹಾಸನ ಹಾಗೂ ಮಂಡ್ಯದಿಂದ ದೇವೇಗೌಡ ಕುಟುಂಬದ ಸದಸ್ಯರೇ ಸ್ಪರ್ಧೆ ಮಾಡಬೇಕೆಂಬುದು ಬಿಜೆಪಿ ನಾಯಕರ ಒತ್ತಾಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್‌ ಪಕ್ಷವು ಮತ್ತೆ ಪುಟಿದೇಳುವ ಅವಶ್ಯಕತೆ ಇದೆ. ಹೀಗಾಗಿ ಕುಮಾರಸ್ವಾಮಿಯವರೇ ಮಂಡ್ಯದಿಂದ ಸ್ಪರ್ಧಿಸಿ ಗೆದ್ದರೆ ಕೇಂದ್ರ ಸಚಿವರಾಗಬಹುದು. ಈ ಮೂಲಕ ಪಕ್ಷಕ್ಕೆ ಬಲತಂದುಕೊಡಬಹುದು. ಪಕ್ಷಕ್ಕೆ ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಳ್ಳಲು ಇದು ಸಹಾಯ ಮಾಡಬಹುದು. ಒಕ್ಕಲಿಗ ಮತಗಳನ್ನು ಮತ್ತೆ ಸೆಳೆಯಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಪುತ್ರ ನಿಖಿಲ್‌ ಮಂಡ್ಯದಿಂದ ಮತ್ತೆ ಕಣಕ್ಕಿಳಿಯಬೇಕೆಂಬುದು ಕುಮಾರಸ್ವಾಮಿ ಅವರ ಹೆಬ್ಬಯಕೆಯಾಗಿದೆ. ಆದರೆ, ಬಿಜೆಪಿ ಹೈಕಮಾಂಡ್‌ ಇದಕ್ಕೆ ಒಪ್ಪುತ್ತಿಲ್ಲವೆಂದು ಮೂಲಗಳು ತಿಳಿಸಿದೆ.

ಇಲ್ಲಿ ಇನ್ನೊಂದು ವಿಚಾರ ಅಂದ್ರೆ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ. 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಸುಮಲತಾ ಎದುರು ಸೋಲು ಕಂಡಿದ್ರು. ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಾಯಿ ಅನಿತಾ ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಲೂ ಕೂಡ ಪರಾಭವಗೊಂಡಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಅವರು ಸ್ಪರ್ಧಿಸದೇ ಹೋದರೆ, ಅವರ ಭವಿಷ್ಯ ಮತ್ತೆ ಅತಂತ್ರವಾಗುವುದು ನಿಶ್ಚಿತವಾಗಿದೆ. ಬಿಜೆಪಿ ಪಾಳಯದ ಮತ್ತೊಂದು ಚರ್ಚೆ ಪ್ರಕಾರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟು ಬೇರೆ ಯಾವುದಾದ್ರೂ ಕ್ಷೇತ್ರದ ಟಿಕೆಟ್​ನ ಸುಮಲತಾಗೆ ಕೊಡುವ ಸಾಧ್ಯತೆ ಇದೆ. ಮಾಜಿ ಸಿಎಂ ಸದಾನಂದಗೌಡ ಅವ್ರ ಚುನಾವಣಾ ರಾಜಕೀಯ ನಿವೃತ್ತಿಯಿಂದ ತೆರವಾಗಲಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಸುಮಲತಾಗೆ ನೀಡಲು ಚಿಂತನೆ ಇದೆ.

Shwetha M