ಮಂಡ್ಯದಿಂದ HDK ಸ್ಪರ್ಧೆ.. – ಸೈಲೆಂಟ್ ಆಗಿ ಸೈಡ್ ಗೆ ಹೋದ್ರಾ ಸುಮಲತಾ ಅಂಬರೀಶ್?

ಮಂಡ್ಯದಿಂದ HDK ಸ್ಪರ್ಧೆ.. – ಸೈಲೆಂಟ್ ಆಗಿ ಸೈಡ್ ಗೆ ಹೋದ್ರಾ ಸುಮಲತಾ ಅಂಬರೀಶ್?

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರು ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಧಿಕೃತವಾಗಿ ಅಖಾಡಕ್ಕಿಳಿದಿದ್ದಾರೆ. ಈ ಮೂಲಕ ಎರಡೂವರೆ ದಶಕಗಳ ಬಳಿಕ ಮತ್ತೊಮ್ಮೆ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದಾರೆ. ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕುಮಾರಣ್ಣನ ಮಂಡ್ಯ ಸ್ಪರ್ಧೆ ಹತ್ತಾರು ಲೆಕ್ಕಾಚಾರಗಳನ್ನ ಹುಟ್ಟು ಹಾಕಿದೆ. ಗುರುವಾರ ಮಂಡ್ಯ ರಣಭೂಮಿಗೆ ಕಾಲಿಟ್ಟಿದ್ದ ಎಚ್​ಡಿ ಕುಮಾರಸ್ವಾಮಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಮಂಡ್ಯದಲ್ಲಿ ಸ್ಪರ್ಧೆ ಕನ್ಪರ್ಮ್ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಕುಮಾರಸ್ವಾಮಿ ಆಗಮಿಸಿದ್ದರು. ಬಳಿಕ ಮಂಡ್ಯದಲ್ಲಿ ನಡೆದ ದೋಸ್ತಿ ನಾಯಕರ ಸಮನ್ವಯ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ರು. ಈ ಮೂಲಕ ಕುಮಾರಣ್ಣ ಅಧಿಕೃತವಾಗಿ ಮಂಡ್ಯ ಕ್ಷೇತ್ರದಲ್ಲಿ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಡೆಲ್ಲಿ, ರಾಜಸ್ತಾನ್​ ರಾಯಲ್ಸ್​ ಮಧ್ಯೆ ಹೈವೋಲ್ಟೇಜ್​ ಮ್ಯಾಚ್‌ –  ರಾಯಲ್ಸ್‌ಗೆ 12 ರನ್‌ಗಳ ಗೆಲುವು

ಜೆಡಿಎಸ್ ಗೆ ಅಸ್ತಿತ್ವದ ಪ್ರಶ್ನೆ!

ಜೆಡಿಎಸ್​ಗೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಿಂದ ನೆಲ ಕಚ್ಚಿರುವ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಿದೆ. ಈ ಕಾರಣಕ್ಕೆ ಜೆಡಿಎಸ್​ಗೆ ಸಿಕ್ಕಿರುವ ಮೂರೂ ಕ್ಷೇತ್ರಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಜೆಡಿಎಸ್​ಗೆ ಇದೆ. ಇದೇ ಕಾರಣಕ್ಕೆ ತಾವು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದರೆ ಜನರು ಮತ ಹಾಕಿ ಜೆಡಿಎಸ್ ಅನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಅವರದ್ದು. ಇದರ ಜೊತೆಗೆ ಎನ್​ಡಿಎ ಸರ್ಕಾರ ರಚನೆ ನಂತರ ಕೇಂದ್ರದಲ್ಲಿ ಮಂತ್ರಿ ಸ್ಥಾನವೂ ಸಿಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹಾಗಾಗಿ, ರಾಜಕೀಯವಾಗಿ ಮತ್ತಷ್ಟು ಶಕ್ತಿ ಪಡೆಯಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಅಷ್ಟಕ್ಕೂ ಕುಮಾರಣ್ಣನಿಗೆ ಲೋಕಸಭೆ ಹೊಸದೇನೂ ಅಲ್ಲ. ಮೊದಲ ಬಾರಿಗೆ 1996ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1998ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಹಾಗೂ 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡ ಅವರು, 2004ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಬಳಿಕ 2008, 2013 ಮತ್ತು 2018ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿಯಾಗಿದ್ದರು.  2023ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದೀಗ ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸಲು ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ. ಹೀಗೆ ಹೆಚ್​ಡಿಕೆ ಒಂದ್ಕಡೆ ಸಂಸತ್ತು ಮೆಟ್ಟಿಲು ಹತ್ತೋಕೆ ಮುಂದಾಗಿದ್ರೆ ಅತ್ತ ಹಾಲಿ ಸಂಸದೆ ಸುಮಲತಾ ಅಂಬರೀಶ್ ನೀರಿನಿಂದ ಹೊರಬಿದ್ದ ಮೀನಿನಂತೆ ವಿಲವಿಲ ಒದ್ದಾಡ್ತಿದ್ದಾರೆ.

ಸುಮಲತಾ ನಡೆ ಏನು? 

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರಿಣಾಮ ಸುಮಲತಾಗೆ ಮಂಡ್ಯ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಹೀಗಾಗಿ ಮುಂದಿನ ನಿರ್ಧಾರ ಕೈಗೊಳ್ಳಲು ಮಾರ್ಚ್ 30 ಬೆಂಗಳೂರು ನಿವಾಸದಲ್ಲಿ ಮತ್ತೆ ಸಭೆ ಕರೆದಿದ್ದಾರೆ. ಬಿಜೆಪಿ ಟಿಕೆಟ್ ಮಿಸ್ ಆದ ಕಾರಣ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಆಪ್ತರು, ಕಾರ್ಯತರ ಅಭಿಪ್ರಾಯ ಸಂಗ್ರಹಿಸಿ, ಅದರ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಅಂದಿನ ಸಭೆ ಬಳಿಕ ಮುಂದಿನ ರಾಜಕೀಯ ನಡೆ ಬಹಿರಂಗೊಳಿಸುವ ನಿರೀಕ್ಷೆಗಳು ಇವೆ. ಸಭೆಯಲ್ಲಿ ಮಂಡ್ಯದಿಂದ ಪಕ್ಷೇತರವಾಗಿ ನಿಲ್ಲಬೇಕಾ? ನಿಂತರೆ ಅದರ ಸಾಧಕ, ಬಾಧಕಗಳು, ಗೆಲವು-ಸೋಲಿನ ಲೆಕ್ಕಾಚಾರಗಳು ಹಾಗೂ ಪಕ್ಷೇತರವಾಗಿ ಸ್ಪರ್ಧೆ ಮಾಡದೇ ಬಿಜೆಪಿ ವರಿಷ್ಠರ ಸೂಚನೆಯಂತೆ ಸ್ವಕ್ಷೇತ್ರ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕಾ? ಎಂಬ ಹಲವು ವಿಚಾರಗಳನ್ನು ಅವರು ಚರ್ಚೆ ಮಾಡಲಿದ್ದಾರೆ.

ಸದ್ಯ ಮಂಡ್ಯದಲ್ಲಿ ಜೆಡಿಎಸ್​ಗೆ ಟಿಕೆಟ್ ಸಿಕ್ಕ ಬಳಿಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುಮಲತಾ ವಿಚಾರದಲ್ಲಿ ಸಾಫ್ಟ್ ಆಗಿದ್ದಾರೆ. ಈ ಹಿಂದೆ ಸುಮಲತಾ ನಮ್ಮ ಅಕ್ಕ ಇದ್ದಂತೆ ಎಂದಿದ್ದ ಕುಮಾರಣ್ಣ ಈಗ  ಸುಮಲತಾ ಏನು ನನ್ನ ಶಾಶ್ವತ ಶತ್ರುನಾ? ರಾಮಾಂಜನೇಯ ಯುದ್ಧವೇ ಈ ಮಣ್ಣಿನಲ್ಲಿ ನಡೆದು ಹೋಗಿಲ್ವಾ? ನಾವೆಲ್ಲ ಹುಲುಮಾನವರು ಅದರ ಮುಂದೆ ಯಾವ ಲೆಕ್ಕ ಹೇಳಿ? ಎಂದಿದ್ದಾರೆ. ಇನ್ನು ಬಿಎಸ್ ಯಡಿಯೂರಪ್ಪ ಮಾತನಾಡಿ, ಮಂಡ್ಯದಿಂದ ಕುಮಾರಸ್ವಾಮಿಗೆ ಟಿಕೆಟ್‌ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ. ಆದರೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯನ್ನು ಹೈಕಮಾಂಡ್‌ ಕೊಟ್ಟಿದೆ ಎಂದಿದ್ದಾರೆ. ಹೀಗಾಗಿ ಸುಮಲತಾ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

Shwetha M