ಬಾಹ್ಯಾಕಾಶದಿಂದ ಬಿಪರ್‌ಜಾಯ್‌ ಚಂಡಮಾರುತದ ದೃಶ್ಯ ಸೆರೆ

ಬಾಹ್ಯಾಕಾಶದಿಂದ ಬಿಪರ್‌ಜಾಯ್‌ ಚಂಡಮಾರುತದ ದೃಶ್ಯ ಸೆರೆ

ನವದೆಹಲಿ: ‌ಅಲೆಗಳ ಅಬ್ಬರ.. ಬಿರುಗಾಳಿ ಆರ್ಭಟ.. ಬಿಪರ್‌ಜಾಯ್ ಚಂಡಮಾರುತ ಕರಾವಳಿಯ ಸಮುದ್ರತೀರಗಳಲ್ಲಿ ಕೋಲಾಹಲ ಸೃಷ್ಟಿಸಿದೆ.  ಸೈಕ್ಲೋನ್ ಪರಿಣಾಮದಿಂದಾಗಿ ಕೇರಳ, ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಇದೀಗ ಬಿಪೋರ್​​ಜಾಯ್ ಚಂಡಮಾರುತದ ಚಿತ್ರವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಕ್ಷಣ ಕ್ಷಣಕ್ಕೂ ಉಗ್ರ ರೂಪ ತಾಳುತ್ತಿರುವ ಬಿಪರ್ ಜಾಯ್ – ಶಾಲಾ-ಕಾಲೇಜು, ಧಾರ್ಮಿಕ ಕೇಂದ್ರಗಳು ಬಂದ್!

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ್‌ ಜಾಯ್‌ ಚಂಡಮಾರುತ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಕರಾವಳಿ ಭಾಗದ ಜನರು ಆತಂಕದಿಂದ ಕಾಲಕಳೆಯುತ್ತಿದ್ದಾರೆ. ಇದೀಗ ಚಂಡಮಾರುತದ ಭೀಕರತೆಯ ದೃಶ್ಯವನ್ನು ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಇಬ್ಬರು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಗಗನಯಾತ್ರಿಗಳ ಪೈಕಿ ಒಬ್ಬರಾದ ಸುಲ್ತಾನ್‌ ಅಲ್‌ ನೆಯ್ಯದಿ, ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಭೀಕರ ಬಿಪರ್‌ಜಾಯ್‌ ಚಂಡಮಾರುತದ ಚಿತ್ರಗಳನ್ನು ಬಾಹ್ಯಾಕಾಶದಿಂದ ತೆಗೆದಿದ್ದು ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದವರೆಲ್ಲರೂ ಚಂಡಮಾರುತ ಎಷ್ಟು ಭೀಕರವಾಗಿರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ.

ಚಂಡಮಾರುತದ ರುದ್ರ ರಮಣೀಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ ಬರೆದುಕೊಂಡಿರುವ ಅಲ್‌ ನೆಯ್ಯದಿ, ‘ನಾನು ನನ್ನ ಕಳೆದ ವಿಡಿಯೋದಲ್ಲಿ ಹೇಳಿದಂತೆ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪರ್‌ಜಾಯ್‌ ಚಂಡಮಾರುತದ ಚಿತ್ರಗಳನ್ನು ಇಲ್ಲಿ ಪೋಸ್ಟ್‌ ಮಾಡಿದ್ದೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳ ಅವಧಿಯಲ್ಲಿ ಈ ಚಿತ್ರಗಳನ್ನು ತೆಗೆದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಚಂಡಮಾರುತವು ಗುರುವಾರ ಸಿಂಧ್‌ನ ಥಟ್ಟಾ ಜಿಲ್ಲೆಯ ಕೇತಿ ಬಂದರ್ ಬಂದರು ಮತ್ತು ಭಾರತದ ಕಚ್ ಜಿಲ್ಲೆಯ ನಡುವೆ ಭಾರೀ ಪ್ರಮಾಣದ ಹಾನಿ ಉಂಟುಮಾಡುವ ಸಾಧ್ಯತೆ ಇದೆ. 4 ನಿಮಿಷದ ವಿಡಿಯೋದಲ್ಲಿ ಅಲ್‌ ನೆಯ್ಯದಿ, ಬಿಪರ್‌ಜಾಯ್‌ ಚಂಡಮಾರುತದ ಕೇಂದ್ರವನ್ನು ಸೆರೆ ಮಾಡಿದ್ದು, ಅದರೊಂದಿಗೆ ಚಂಡಮಾರುತ ಎಷ್ಟು ದೂರದವರೆಗೆ ಹರಡಿದೆ ಎನ್ನುವ ಅಂಶವನ್ನೂ ಶೂಟ್‌ ಮಾಡಿದ್ದಾರೆ.

ಬಿಪರ್‌ಜಾಯ್‌ ಚಂಡಮಾರುತವು ಈಗ ತೀವ್ರರೂಪದ ಚಂಡಮಾರುತ ಎಂದು ವರ್ಗೀಕೃತವಾಗಿತ್ತು.  ಅರಬ್ಬಿ ಸಮುದ್ರದಲ್ಲಿ ರಚಿತವಾಗಿರುವ ಈ ಸೈಕ್ಲೋನ್‌ ಭಾರತ ಹಾಗೂ ಪಾಕಿಸ್ತಾನದತ್ತ ನುಗ್ಗುತ್ತಿದೆ. ಎರಡೂ ದೇಶಗಳಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಬಿಪರ್‌ಜಾಯ್‌ಗೆ ‘ಹಾನಿಕಾರಕ ಸಾಮರ್ಥ್ಯ’ ಇದೆ ಎಂದು ಮುನ್ಸೂಚನೆ ನೀಡಿದೆ.

 

suddiyaana