ಜೈಲಿನಿಂದಲೇ ಪ್ರೇಯಸಿ ಜಾಕ್ವೆಲಿನ್‌ಗೆ ಪ್ರೇಮಪತ್ರ ಬರೆದ ಸುಕೇಶ್ ಚಂದ್ರಶೇಖರ್ – ಬರ್ತ್‌ಡೇಗೆ ಲವ್‌ಲೆಟರ್ ಗಿಫ್ಟ್..!
ಆಗಸ್ಟ್ 11ಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟಿದ ಹಬ್ಬ. ಹೀಗಾಗಿ ತನ್ನ ಪ್ರೇಯಸಿಗೆ ಸುಕೇಶ್ ಚಂದ್ರಶೇಖರ್ ಕೈಯಲ್ಲಿ ಬರೆದ ಪ್ರೇಮಪತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪ್ರೇಮಪತ್ರ ಬರೆದಿದ್ದು ಜೈಲಿನಲ್ಲಿಯೇ. ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ಜೈಲಿಂದ ಹೊರಬಂದ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕಾಲಕಳೆಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ₹1.5 ಲಕ್ಷದ ಚಪ್ಪಲಿ.. ₹80 ಸಾವಿರದ ಜೀನ್ಸ್ ಪ್ಯಾಂಟ್ – ಜೈಲಿನಲ್ಲೇ ಸುಕೇಶ್ ನ ದಿಲ್ದಾರ್ ಲೈಫ್..!
ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಜೊತೆ ನಂಟು ಹೊಂದಿದ್ದ ಕಾರಣಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಬಾರಿ ಅವರು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿದ್ದಾರೆ. ಇಷ್ಟಾದರೂ ಸುಕೇಶ್ ಚಂದ್ರಶೇಖರ್‌ಗೆ ಜಾಕ್ವೆಲಿನ್ ಫರ್ನಾಂಡಿಸ್ ಮೇಲೆ ಇರುವ ಪ್ರೀತಿ ಕಡಿಮೆ ಆಗಿಲ್ಲ. ಪದೇಪದೇ ಆತ ತನ್ನ ಪ್ರೇಯಸಿಗೆ ಪತ್ರ ಬರೆಯುತ್ತಲೇ ಇದ್ದಾನೆ. ಆಗಸ್ಟ್ 11ಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಕೈ ಬರಹದಲ್ಲೇ ಪ್ರೇಮಪತ್ರವನ್ನು ಬರೆದು ಕಳಿಸಿದ್ದಾನೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಲುವಾಗಿ ಪತ್ರದಲ್ಲಿ ಪದಗಳ ಜೊತೆ ಚಿತ್ರವನ್ನೂ ಬರೆದು ಕಳಿಸಿದ್ದಾನೆ. ಈ ಮೊದಲು ಕೂಡ ಆತ ಪತ್ರ ಬರೆದು ಸುದ್ದಿಯಾಗಿದ್ದ. ‘ಶೀಘ್ರದಲ್ಲೇ ಈ ಎಲ್ಲ ತೊಂದರೆಗಳು ಮುಗಿಯಲಿವೆ. ಬೇಗ ಬರುತ್ತೇನೆ. ಮುಂದಿನ ವರ್ಷ ಜನ್ಮದಿನವನ್ನು ಒಟ್ಟಿಗೆ ಆಚರಿಸೋಣ. ಅದನ್ನು ತುಂಬ ವಿಶೇಷವಾಗಿಸುತ್ತೇನೆ ಅಂತ ನಿನಗೆ ನಾನು ಪ್ರಾಮಿಸ್ ಮಾಡುತ್ತೇನೆ. ಜಗತ್ತಿಗೆ ಹೊಟ್ಟೆಕಿಚ್ಚು ಆಗಬಹುದು. ನನ್ನ ಗೊಂಬೆಯೇ.. ನೀನು ಸ್ಪೆಷಲ್, ನೀನು ಸೂಪರ್ ಸ್ಟಾರ್. ನನ್ನ ಬದುಕಿನ ವಿಶೇಷ ನೀನು. ಈ ದಿನವನ್ನು ಎಂಜಾಯ್ ಮಾಡು. ಯಾವುದಕ್ಕೂ ಹೆದರಬೇಡ. ನಿನಗಾಗಿ ನಾನಿದ್ದೇನೆ. ನನಗಾಗಿ ಒಂದು ಪೀಸ್ ಕೇಕ್ ಹೆಚ್ಚು ತಿನ್ನು’ ಎಂದು ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದಾನೆ. ಸುಕೇಶ್ ಚಂದ್ರಶೇಖರ್ ಇಷ್ಟೆಲ್ಲ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೂ ಕೂಡ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಮತ್ತು ಸುಕೇಶ್ ಚಂದ್ರಶೇಖರ್ ನಡುವೆ ಈ ರೀತಿಯ ಸಂಬಂಧ ಇಲ್ಲ ಎಂದು ಅವರು ಮೊದಲೇ ಹೇಳಿಕೆ ನೀಡಿದ್ದರು. ಕೇವಲ ವೃತ್ತಿಪರ ಕಾರಣಕ್ಕೆ ಭೇಟಿ ಮಾಡಿದ್ದಾಗಿ ಅವರು ತಿಳಿಸಿದ್ದರು. ಸುಕೇಶ್ ಚಂದ್ರಶೇಖರ್ ಜೈಲಿನಿಂದ ಹೊರಬಂದ ಬಳಿಕ ಒಂದಷ್ಟು ಹೊಸ ವಿಚಾರಗಳು ಬಹಿರಂಗ ಆಗುವ ಸಾಧ್ಯತೆ ಇದೆ.