ಕಬ್ಬು ಬೆಳೆಗಾರರ ಬಾಳಲ್ಲಿ ಕಾರ್ಖಾನೆ ಮಾಲೀಕರ ಚೆಲ್ಲಾಟ! – ಬೀದರ್‌ನಲ್ಲಿ ಸಿಡಿದೆದ್ದ ರೈತರು

ಕಬ್ಬು ಬೆಳೆಗಾರರ ಬಾಳಲ್ಲಿ ಕಾರ್ಖಾನೆ ಮಾಲೀಕರ ಚೆಲ್ಲಾಟ! – ಬೀದರ್‌ನಲ್ಲಿ ಸಿಡಿದೆದ್ದ ರೈತರು

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ದಿನೇ ದಿನೆ ಹೆಚ್ಚಾಗ್ತಿದೆ. ಬೆಳಗಾವಿಯಲ್ಲಿ ಆರಂಭವಾದ ಕಬ್ಬು ಬೆಳೆಗಾರರ ಹೋರಾಟ ಇಡೀ ಕರ್ನಾಟಕವನ್ನೇ ಆವರಿಸಿದೆ. ಮುಧೋಳ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಅನ್ನದಾತರು ತಣ್ಣಗಾದ್ರೂ ಕಲಬುರಗಿ ಹಾಗೂ ಬೀದರ್‌ನಲ್ಲಿ ರೈತರ ಹೋರಾಟ ಮುಂದುವರಿದಿದೆ.

ಇದನ್ನೂ ಓದಿ: RCBಗೆ ಬೇಕು ಬ್ಯಾಕಪ್ ಬೌಲರ್ – ಹೇಜಲ್ ವುಡ್ ಬಗ್ಗೆ ಪಠಾಣ್ ಎಚ್ಚರಿಕೆ

ಪ್ರತಿಟನ್‌ ಕಬ್ಬಿಗೆ 3,100 ರೂ. ಬೆಲೆ ನಿಗದಿ ಮಾಡಬೇಕು ಎಂದು ಬೀದರ್‌ ನಲ್ಲಿ ಕಳೆದ ಆರು ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ.  ಈ ಹೋರಾಟವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲು ಜಿಲ್ಲಾಡಳಿತವು ಸತತ ಪ್ರಯತ್ನ ನಡೆಸುತ್ತಾ ಬಂದಿದೆ. ಆದ್ರೆ ಹೆಚ್ಚುವರಿ ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪುತ್ತಿಲ್ಲ. ಈಗಾಗಲೇ 5ನೇ ಬಾರಿ ಸಭೆಸಿದ್ರೂ ಯಾವುದೇ ಫಲ ಸಿಕ್ಕಿಲ್ಲ. ಹೀಗಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ರೈತರ ಹೋರಾಟ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ , ಪೌರಾಡಳಿತ ಸಚಿವ ರಹೀಂ ಖಾನ್‌ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಈ ಬೆನ್ನಲ್ಲೇ ಎಫ್‌ಆರ್‌ಪಿ ಆಧಾರ ಮೇಲೆ ಪ್ರತಿಟನ್‌ ಕಬ್ಬಿಗೆ 3,300 ರೂ. ಬೆಲೆ ನಿಗದಿಪಡಿಸಿರುವ ರಾಜ್ಯ ಸರಕಾರ ಈಗಾಗಲೇ ನಿಗದಿಯಾದ 3,200 ರೂ.ಗೆ ಹೆಚ್ಚುವರಿಯಾಗಿ ಸಕ್ಕರೆ ಕಾರ್ಖಾನೆಗಳಿಂದ 50 ರೂ. ಹಾಗೂ ರಾಜ್ಯ ಸರಕಾರದಿಂದ 50 ರೂ. ಭರಿಸುವ ಮೂಲಕ ಕಬ್ಬಿನ ದರ ನಿಗದಿಪಡಿಸಲಾಗಿದೆ. ಕಬ್ಬಿನ 11.25 ರಿಕವರಿಗೆ ಸಾಗಾಣಿಕೆ, ಕಟಾವು ವೆಚ್ಚ ಸೇರಿ 3300 ರೂ. ಬೆಲೆ ಆಗಲಿದೆ ಎಂದರು.

ಕಬ್ಬಿನ ದರ ಕುರಿತು ಈಗಾಗಲೇ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರೊಂದಿಗೆ ಚರ್ಚೆ ಮಾಡಿದ್ದೇನೆ. ಪ್ರತಿ ಟನ್‌ಗೆ 2,800 ರೂ. ಕೊಡಲು ಸಿದ್ಧರಿದ್ದು, ಹೆಚ್ಚುವರಿ ದರ ನೀಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಬ್ಬಿನ ತೂಕದಲ್ಲಿ ಹೇರಾಫೇರಿ ನಡೆಯುತ್ತಿರುವ ಬಗ್ಗೆ ರೈತರಿಂದ ದೂರುಗಳು ಬಂದಿದ್ದು, ತೂಕದಲ್ಲಿ ದೋಷ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಮೊಕದಮ್ಮೆ ಹೂಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Shwetha M