ಸುಧಾಕರ್ Vs ಪ್ರದೀಪ್ ಈಶ್ವರ್? – ಈ ಬಾರಿಯೂ ರಣರಂಗವಾಗುತ್ತಾ ಚಿಕ್ಕಬಳ್ಳಾಪುರ ಅಖಾಡ?
2023ರ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಮಕಾಡೆ ಮಲಗಿದ್ದರು. ಅದರಲ್ಲೂ ಪ್ರಭಾವಿ ಸಚಿವರಾಗಿದ್ದ ಡಾ.ಕೆ ಸುಧಾಕರ್ ಹೀನಾಯ ಸೋಲು ಕಂಡಿದ್ದರು. ಅಂದು ಬಿಜೆಪಿ ಸರ್ಕಾರದ ಆರೋಗ್ಯ ಮಂತ್ರಿಯನ್ನೇ ಮಣ್ಣು ಮುಕ್ಕಿಸಿ ಬೀಗಿದ್ದು ಒಬ್ಬ ಮೇಷ್ಟ್ರು. ಬಯಾಲಜಿ ಬ್ರಹ್ಮ ಅಂತಾನೇ ಕರೆದುಕೊಳ್ತಿದ್ದ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾದ್ರು. ರಾಜಕೀಯದ ಗಂಧ ಗಾಳಿಯೂ ಗೊತ್ತಿಲ್ಲದ ಒಬ್ಬ ಕೋಚಿಂಗ್ ಮೇಷ್ಟ್ರು ಪ್ರಭಾವಿ ಸಚಿವರನ್ನೇ ಸೋಲಿಸಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ರು. ಆದ್ರೀಗ ಅಂಥದ್ದೇ ಅಖಾಡ ಮತ್ತೊಮ್ಮೆ ಸೃಷ್ಟಿಯಾಗೋ ಎಲ್ಲಾ ಲಕ್ಷಣ ಕಾಣ್ತಿದೆ. ವಿಧಾನಸಭೆಯ ಲಾಜಿಕ್ ಲೋಕಸಭೆಯಲ್ಲೂ ನಡೆಯುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ.ಕೆ ಸುಧಾಕರ್‌ಗೆ ಸವಾಲು ಕೂಡ ಹಾಕಿದ್ದಾರೆ.
ಇದನ್ನೂ ಓದಿ: 3 ಡಿಸಿಎಂ ಹುದ್ದೆಗೆ ಪಟ್ಟು!- ಡಿಸಿಎಂ ಕಚ್ಚಾಟಕ್ಕೆ ಕಾಂಗ್ರೆಸ್ ಮನೆಯಲ್ಲಿ ಕೋಲಾಹಲ..!
ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಭಾರೀ ಕಸರತ್ತು ನಡೀತಿದೆ. ಈ ಲೆಕ್ಕಾಚಾರದ ನಡುವೆಯೇ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣೆಯಲ್ಲಿ ನಾನೂ ಸ್ಪರ್ಧಿಸೋಕೆ ರೆಡಿ ಇದ್ದೇನೆ ಅಂತಾ ಘೋಷಿಸಿದ್ದಾರೆ. ಆದ್ರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ತಾವು ಸ್ಪರ್ಧಿಸೋ ಮುನ್ನ ತಮ್ಮ ಎದುರಾಳಿ ಯಾರು ಆಗಿರಬೇಕು ಅನ್ನೋದನ್ನೂ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಡಾ.ಕೆ ಸುಧಾಕರ್ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಪ್ರದೀಪ್ ಈಶ್ವರ್ ಪ್ರತಿತಂತ್ರ ಹೆಣೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಕೆ.ಸುಧಾಕರ್‌ಗೆ ಟಿಕೆಟ್ ಕೊಟ್ಟರೆ, ಕಾಂಗ್ರೆಸ್ ಪಕ್ಷದಿಂದ ತಾವೇ ಸ್ಪರ್ಧೆ ಮಾಡೋಕೆ ಸಿದ್ಧ ಎಂದಿದ್ದಾರೆ. ವಿಧಾನಸಭಾ ಚುನಾವಣೆಯ ಗೆಲುವಿನಂತೆ ಲೋಕಸಭೆ ಚುನಾವಣೆಯಲ್ಲೂ ಗೆದ್ದು ಬರುತ್ತೇನೆ ಎಂದು ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ, ಬಾಲಾಜಿ ಹಾಗೂ ಎಸ್ ರವಿ ಹೆಸರು ಕೇಳಿ ಬರುತ್ತಿದೆ. ಅದ್ಯಾಗೂ ನಮ್ಮ ಹೈಕಮಾಂಡ್ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನಿರ್ಲಕ್ಷ್ಯ ಕೂಡ ಪ್ರದೀಪ್ ಈಶ್ವರ್ ಗೆಲುವಿಗೆ ಕಾರಣವಾಗಿತ್ತು. ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ ಎಂದು ಬಿಜೆಪಿ ನಾಯಕರು ಸುಮ್ಮನಾಗಿದ್ರು. ಆದ್ರೆ ಸೈಲೆಂಟಾಗಿ ಗೆದ್ದಿದ್ದ ಪ್ರದೀಪ್ ಬಳಿಕ ಬಿಜೆಪಿ ಪಾಳಯಕ್ಕೆ ಬಹುದೊಡ್ಡ ಶಾಕ್ ಕೊಟ್ಟಿದ್ರು.. ಚುನಾವಣೆ ಬಳಿಕ ಪ್ರದೀಪ್ ಈಶ್ವರ್ ಮತ್ತು ಸುಧಾಕರ್ ನಡುವೆ ಮಾತಿನ ಪ್ರಹಾರಗಳು ನಡೆಯುತ್ತಲೇ ಇವೆ. ಹಗರಣಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಬ್ಬರು ಪರಸ್ಪರ ಕಿತ್ತಾಡುತ್ತಲೇ ಇದ್ದಾರೆ. ಇನ್ನು ಪ್ರದೀಪ್ ಈಶ್ವರ್ ಬಿಗ್ಬಾಸ್ ಗೆ ಹೋಗಿದ್ದ ವೇಳೆಯೂ ಸುಧಾಕರ್ ವಾಗ್ದಾಳಿ ನಡೆಸಿದ್ದರು. ಒಬ್ಬ ರಾಜಕಾರಣಿ, ಜನಪ್ರತಿನಿಧಿಯಾಗಿ ಶಾಸಕರಾಗಿ ಈ ರೀತಿಯ ಶೋಗೆ ಹೋಗಿದ್ದು ಇದೇ ಮೊದಲು. ಇದೊಂದು ನಾಚಿಕೆಗೇಡಿನ ಸಂಗತಿ ಅಂತೆಲ್ಲಾ ಸುಧಾಕರ್ ಲೇವಡಿ ಮಾಡಿದ್ರು. ಕೆಲವೇ ಕ್ಷಣಗಳಲ್ಲಿ ಬಿಗ್ಬಾಸ್ ಮನೆಯಿಂದ ಹಿಂತಿರುಗಿದ್ದ ಪ್ರದೀಪ್ ಈಶ್ವರ್ ಸರಿಯಾಗೇ ತಿರುಗೇಟು ಕೊಟ್ಟಿದ್ದರು. ಅಸಲಿಗೆ ವಿಧಾನಸಭಾ ಚುನಾವಣೆಗೂ ಮುನ್ನ ಪ್ರದೀಪ್ ಈಶ್ವರ್ ಯಾರು ಅನ್ನೋದು ಬೆರಳೆಣಿಕೆಯ ಜನ್ರಿಗಷ್ಟೇ ಗೊತ್ತಿತ್ತು. ಆದ್ರೆ ಚುನಾವಣೆ ಮುಗಿದ್ಮೇಲೆ ಹಳ್ಳಿ ಹಳ್ಳಿಗಳಲ್ಲೂ ಪ್ರದೀಪ್ ಈಶ್ವರ್ದೇ ಮಾತು.
ಅಷ್ಟಕ್ಕೂ ಈ ಪ್ರದೀಪ್ ಈಶ್ವರ್ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರ ತವರೂರಾದ ಪೆರೇಸಂದ್ರದವರೇ. ಚಿಕ್ಕ ವಯಸ್ಸಲ್ಲೇ ಹೆತ್ತವರನ್ನು ಕಳೆದುಕೊಂಡು ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದರು. ನಂತ್ರ ಬೋಧಕ ವೃತ್ತಿ ಆರಿಸಿಕೊಂಡರು. ಒಬಿಸಿ ಬಲಿಜ ಸಮುದಾಯಕ್ಕೆ ಸೇರಿರುವ ಪ್ರದೀಪ್ ಈಶ್ವರ್, ಕೋಚಿಂಗ್ ಸೆಂಟರ್‌ಗಳಲ್ಲಿ ಪಾಠ ಮಾಡುತ್ತಿದ್ದರು. ಬಳಿಕ 2016ರ ವೇಳೆಗೆ ಯೂಟ್ಯೂಬ್ನಲ್ಲಿ ಡಾ.ಕೆ ಸುಧಾಕರ್ ವಿರುದ್ಧ ಸಣ್ಣ ಪುಟ್ಟ ವಿಡಿಯೋಗಳನ್ನ ಮಾಡಿಕೊಂಡಿದ್ರು. 2018ರ ವಿಧಾನಸಭೆ ಚುನಾವಣೆ ವೇಳೆ ಹಾಲಿ ಶಾಸಕರಾಗಿದ್ದ ಡಾ.ಕೆ ಸುಧಾಕರ್ ಅವರನ್ನು ಎದುರು ಹಾಕಿಕೊಂಡು ಅವರ ವಿರುದ್ಧ ಹಲವು ವಿಡಿಯೋಗಳನ್ನು ಮಾಡಿದ್ದರು. ಸುಧಾಕರ್ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ವಿ ನವೀನ್‌ಕಿರಣ್ ಪರ ಭರ್ಜರಿ ಪ್ರಚಾರ ಮಾಡಿ ಸದ್ದು ಮಾಡಿದ್ದರು. ಆದ್ರೆ 2018ರಲ್ಲಿ ಡಾ.ಕೆ ಸುಧಾಕರ್ ಗೆದ್ದ ನಂತರ ಬೆಂಗಳೂರಿಗೆ ತೆರಳಿ ಸಣ್ಣ ಮಟ್ಟದಲ್ಲಿ ಪರಿಶ್ರಮ ಎಂಬ ನೀಟ್ ಅಕಾಡೆಮಿಯನ್ನು ಕಟ್ಟಿದರು. ಇಲ್ಲಿಂದ ಪ್ರದೀಪ್ ಈಶ್ವರ್ ನಸೀಬೇ ಬದಲಾಗಿ ಹೋಗಿತ್ತು. ಅದೃಷ್ಟ ಎಂಬಂತೆ 2023ರ ಚಿಕ್ಕಬಳ್ಳಾಪುರ ವಿಧಾನಸಭೆ ಕಾಂಗ್ರೆಸ್ ಟಿಕೆಟ್ ಪ್ರದೀಪ್ಗೆ ಸಿಕ್ಕಿತ್ತು. ತೆಲುಗು ಹಾಗೂ ಕನ್ನಡದಲ್ಲಿ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಚುನಾವಣೆಯಲ್ಲಿ ಗೆದ್ದು ಬೀಗಿದ್ರು.
ಚುನಾವಣೆಯಲ್ಲಿ ಗೆದ್ದ ಬಳಿಕವೂ ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದರು. ಹಳ್ಳಿ ಹಳ್ಳಿಗಳಿಗೆ ಹೋಗೋದು, ಬಡವರಿಗೆ ಸಹಾಯ ಮಾಡೋದು ಮಾಡ್ತಿದ್ರು. ಜನ ಕೂಡ ಶಾಸಕರು ಅಂದ್ರೆ ಪ್ರದೀಪ್ ಈಶ್ವರ್ ಥರಾನೇ ಇರ್ಬೇಕು ಅಂತಿದ್ರು. ಇದೀಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ಮಾತುಗಳನ್ನೂ ಆಡ್ತಿದ್ದಾರೆ. ಹಾಗೇನಾದ್ರೂ ಚಿಕ್ಕಬಳ್ಳಾಪುರದಿಂದ ಡಾ.ಕೆ ಸುಧಾಕರ್ ಬಿಜೆಪಿ ಅಭ್ಯರ್ಥಿಯಾದ್ರೆ ಪ್ರದೀಪ್ ಈಶ್ವರ್ ಅಖಾಡಕ್ಕೆ ಇಳೀತಾರಾ..? ಕಾಂಗ್ರೆಸ್ ಟಿಕೆಟ್ ಕೊಡುತ್ತಾ ಅನ್ನೋದನ್ನ ಕಾದು ನೋಡ್ಬೇಕು.