ವಾಹನದ ಮೇಲೆ ಕಾಡಾನೆ ದಿಢೀರ್‌ ದಾಳಿ – ಅಪಾಯದಲ್ಲಿದ್ದವರನ್ನು ರಕ್ಷಿಸಿತು ಚಿಪ್ಸ್​ ಮತ್ತು ಸ್ಯಾಂಡ್​ವಿಚ್​!

ವಾಹನದ ಮೇಲೆ ಕಾಡಾನೆ ದಿಢೀರ್‌ ದಾಳಿ – ಅಪಾಯದಲ್ಲಿದ್ದವರನ್ನು ರಕ್ಷಿಸಿತು ಚಿಪ್ಸ್​ ಮತ್ತು ಸ್ಯಾಂಡ್​ವಿಚ್​!

ಅರಣ್ಯ ಭೂಮಿಯಲ್ಲಿ ಮನುಷ್ಯನ ಮಿತಿ ಮೀರಿದ ಹಸ್ತಕ್ಷೇಪದಿಂದ ಕಾಡುಗಳು ನಾಶವಾಗುತ್ತಿದೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿ ನಾಡಿನ ಕಡೆ ಮುಖ ಮಾಡುತ್ತಿವೆ. ಹುಲಿ, ಚಿರತೆ, ಕರಡಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿವೆ. ರಸ್ತೆ ಮಧ್ಯೆ ನಿಂತು ವಾಹನ ಸವಾರರಲ್ಲಿ ಭೀತಿ ಹುಟ್ಟಿಸುತ್ತವೆ. ಕೆಲವೊಂದು ಬಾರಿ ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಇನ್ನೂ ಆನೆಗಳಂತೂ ಸಿಕ್ಕಾಪಟ್ಟೆ ಡೇಂಜರ್‌. ಅವುಗಳು ಒಮ್ಮೆ ಕೋಪಗೊಂಡ್ರೆ ಫುಲ್‌ ದಾಂದಲೇ ನಡೆಸಿಬಿಡುತ್ತವೆ. ಆನೆಗಳು ರಸ್ತೆಯನ್ನು ಅಡ್ಡಗಟ್ಟಿ ಬರುವ ವಾಹನಗಳನ್ನು ತಡೆದು ಕಬ್ಬು ಸೇರಿದಂತೆ ಇನ್ನಿತರ ಆಹಾರಗಳನ್ನು ದೋಚುವಂಥಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುತ್ತೇವೆ. ಇದೀಗ ಇಲ್ಲೊಂದು ಆನೆಯ ವಿಡಿಯೋ ಭಾರಿ ವೈರಲ್‌ ಆಗಿದೆ. ಕಾಡಾನೆ ವಾಹನದ ಮೇಲೆ ಭೀಕರ ದಾಳಿ ನಡೆಸಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಶಾಲೆಗೆ ಎಂಟ್ರಿಕೊಟ್ಟ ಕರಡಿ.. – ಶಿಕ್ಷಕರ ಕೊಠಡಿಗೆ ನುಗ್ಗಿ ಆಹಾರ ಪದಾರ್ಥ ತಿಂದ ಜಾಂಬವಂತ!

ರಸ್ತೆ ಮಧ್ಯೆ ಹೋಗುತ್ತಿರುವಾಗ ಆನೆಯೊಂದು ಮಿನಿ ವ್ಯಾನ್​ ಅನ್ನು ಅಡ್ಡಗಟ್ಟಿರುವ ಭಯಾನಕ ವಿಡಿಯೋವೊಂದು ಸೆರೆಯಾಗಿದೆ. ಆನೆಯು ಏಕಾಏಕಿ ವಾಹನದ ಮೇಲೆ ದಾಳಿ ನಡೆಸಿದೆ. ಆನೆ ವ್ಯಾನ್​ ಮೇಲೆ ನುಗ್ಗಿದ ರಭಸಕ್ಕೆ ವ್ಯಾನ್​ ಜಖಂಗೊಂಡಿದ್ದು, ಕಾರಿನ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್​ ವ್ಯಾನ್​ನಲ್ಲಿದ್ದ ಕುಟುಂಬದ ಯಾವೊಬ್ಬ ಸದಸ್ಯರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯ ಭಯಾನಕ ದೃಶ್ಯ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ?

ಅರಣ್ಯ ಪ್ರದೇಶದ ನಡುವಿನ ರಸ್ತೆಯಲ್ಲಿ ವ್ಯಾನ್​ ಚಲಾಯಿಸಿಕೊಂಡು ಹೋಗುವಾಗ ದಿಢೀರನೇ ದಟ್ಟ ಹಸಿರಿನ ಕಾಡಿನಿಂದ ವ್ಯಾನ್​ ಕಡೆ ಕಾಡಾನೆ ನುಗ್ಗುತ್ತದೆ. ವೇಗವಾಗಿ ವ್ಯಾನ್​ನ ಬಳಿ ಬಂದು, ಅದರೊಳಗೆ ತನ್ನ ಸೊಂಡಿಲನ್ನು ಬಿಟ್ಟು ಆಹಾರಕ್ಕಾಗಿ ತುಂಬಾ ಹುಡುಕಾಡುತ್ತದೆ. ಕೊನೆಗೆ ವ್ಯಾನ್​ ಒಳಗಿದ್ದ ಕುಟುಂಬ ಚಿಪ್ಸ್​ ಮತ್ತು ಸ್ಯಾಂಡ್​ವಿಚ್ ಅನ್ನು ಆನೆಗೆ ನೀಡಿ, ಅಲ್ಲಿಂದ ಪರಾರಿಯಾಗುತ್ತಾರೆ.

ಘಟನೆ ನಡೆದಿದ್ದು ಎಲ್ಲಿ?

ಈ ಘಟನೆ ಶ್ರೀಲಂಕಾದ ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ವ್ಯಾನ್​ನಲ್ಲಿ ಕಸುನ್ ಬಸ್ನಾಯಕ್ ಅವರ ಕುಟುಂಬ ಬಾಡಿಗೆ ವ್ಯಾನ್​ನಲ್ಲಿ ಪ್ರಯಾಣ ಮಾಡುತ್ತಿತ್ತು. ಚಿಪ್ಸ್​ ಮತ್ತು ಸ್ಯಾಂಡ್​ವಿಚ್​ ಇಲ್ಲದಿದ್ದರೆ, ಏನೂ ಸಿಗದ ಹತಾಶೆಯಿಂದ ಕಾಡಾನೆ ವ್ಯಾನ್​ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿತ್ತು ಎಂದು ಕಸುನ್ ಬಸ್ನಾಯಕ್ ಹೇಳಿದ್ದಾರೆ. ವ್ಯಾನ್​ನತ್ತ ನುಗ್ಗಿದ ರಭಸಕ್ಕೆ ಗಾಜು ಪುಡಿ ಪುಡಿಯಾಗಿದೆ ಮತ್ತು ದಂತದಿಂದ ತಿವಿದಿರುವುದರಿಂದ ವ್ಯಾನ್​ಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಕಸುನ್ ಬಸ್ನಾಯಕ್ ಕುಟುಂಬದ ಯಾರೊಬ್ಬರಿಗೂ ಯಾವುದೇ ಹಾನಿಯಾಗಿಲ್ಲ. ಅಕ್ಷರಶಃ ಚಿಪ್ಸ್​ ಮತ್ತು ಸ್ಯಾಂಡ್​ವಿಚ್​ ಬಸ್ನಾಯಕ್ ಕುಟುಂಬವನ್ನು ಕಾಪಾಡಿದೆ. ವಿಡಿಯೋದಲ್ಲಿ ಆನೆ ಬಂದ ರೀತಿ ಮತ್ತು ಅದರ ಗಾತ್ರವನ್ನು ನೋಡಿದರೆ ಮೈ ನಡುಗುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Shwetha M