ಸರ್ಕಾರಕ್ಕೆ ಜಾತಿಗಣತಿ ಸಮೀಕ್ಷೆಯ ವರದಿ ಸಲ್ಲಿಕೆ – ಬಿಜೆಪಿ ನಾಯಕರ ವಿರೋಧದ ನಡುವೆ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಸರ್ಕಾರಕ್ಕೆ ಜಾತಿಗಣತಿ ಸಮೀಕ್ಷೆಯ ವರದಿ ಸಲ್ಲಿಕೆ – ಬಿಜೆಪಿ ನಾಯಕರ ವಿರೋಧದ ನಡುವೆ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿಂದ್ಲೂ ಜಾತಿಜನಗಣತಿ ವರದಿ ಸಲ್ಲಿಕೆ ವಿಚಾರ ಸದ್ದು ಮಾಡ್ತಾನೇ ಇದೆ. ಕಳೆದ 9 ವರ್ಷಗಳಿಂದ ನಿರಂತರವಾಗಿ ಸಂಚಲನ ಸೃಷ್ಟಿಸಿದ್ದ ಜಾತಿಗಣತಿ ಸಮೀಕ್ಷೆ ವರದಿಯನ್ನು ಕೊನೆಗೂ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯರಿಗೆ ಹಸ್ತಾಂತರ ಮಾಡಲಾಗಿದೆ. ಎರಡು ದೊಡ್ಡ ದೊಡ್ಡ ಮೂಟೆಗಳಲ್ಲಿ ವರದಿಗಳ ಪ್ರತಿಯನ್ನು ವಿಧಾನಸೌಧಕ್ಕೆ ತರಲಾಗಿದ್ದು, ಅವುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: ಸುಮಲತಾ ಮಂಡ್ಯದಿಂದ ಸ್ಪರ್ಧಿಸಿದ್ರೆ ಗೆಲ್ಲೋದು ಕಷ್ಟನಾ..? – ಆಪ್ತರೇ ಕೈ ಕೊಟ್ಟ ಮೇಲೆ ಮುಂದೇನು?

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಂದ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ಕೂಡ ದೊಡ್ಡ ಸಂಪುಟಗಳಾಗಿವೆ. ಕೆಲವು ಸಂಪುಟಗಳನ್ನು ಎರಡು-ಮೂರು ಭಾಗಗಳಾಗಿ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ. ಕಾಂಗ್ರೆಸ್‌ ಸ್ವಪಕ್ಷೀಯ ನಾಯಕರು ಹಾಗೂ ಬಿಜೆಪಿ ನಾಯಕರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರು ಸಲ್ಲಿಸಿರುವ ವರದಿಯಲ್ಲಿ ಒಟ್ಟು 13 ಪ್ರತಿಗಳಿದ್ದು, ಅವುಗಳಲ್ಲಿ ಹಲವು ಪ್ರಮುಖ ಅಂಶಗಳಿವೆ.

ವರದಿಯಲ್ಲಿ ಏನೆಲ್ಲ ಅಂಶಗಳಿವೆ? 

  • ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಮಗ್ರ ರಾಜ್ಯ ವರದಿ
  • ಜಾತಿವಾರು ಜನಸಂಖ್ಯೆ ವಿವರ – 1 ಸಂಪುಟ
  • ಜಾತಿ / ವರ್ಗಗಳ ಲಕ್ಷಣಗಳು( ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೊರತುಪಡಿಸಿ)
  • ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿಗಳು)
  • ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳು)
  • ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ-ಅಂಶಗಳು (ಎರಡು ಸಿಡಿಗಳು)

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಮಗ್ರ ರಾಜ್ಯ ವರದಿಯನ್ನ ಸಲ್ಲಿಕೆ ಮಾಡಲಾಗಿದೆ. ಇದ್ರಲ್ಲಿ ಜಾತಿವಾರು ಜನಸಂಖ್ಯೆ ವಿವರ 1 ಸಂಪುಟವನ್ನು ಒಳಗೊಂಡಿದೆ. ಹಾಗೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನ ಹೊರತುಪಡಿಸಿ ಜಾತಿ / ವರ್ಗಗಳ ಲಕ್ಷಣಗಳನ್ನ ತಿಳಿಸಲಾಗಿದೆ. ಹಾಗೇ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪ್ರಮುಖ ಲಕ್ಷಣಗಳನ್ನ ಉಲ್ಲೇಖಿಸಲಾಗಿದೆ. ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ-ಅಂಶಗಳ ವಿವರ ಎರಡು ಸಿಡಿಗಳಲ್ಲಿದೆ.

ಆದ್ರೆ ಗುರುವಾರ ಸಲ್ಲಿಕೆಯಾಗಿರೋ ಜಾತಿ ಜನಗಣತಿ ವರದಿ ಹಿಂದೆಯೇ ಸೋರಿಕೆಯಾಗಿದೆ ಎಂಬ ಆರೋಪವೂ ಇದೆ. ಜೊತೆಗೆ ಸೋರಿಕೆಯಾದ ಮಾಹಿತಿ ಬೇರೆಯದ್ದೇ ಕಥೆ ಹೇಳ್ತಿದೆ. 2016ರ ಏಪ್ರಿಲ್‌  ತಿಂಗಳಿನಲ್ಲಿ ಜಾತಿಗಣತಿಯ ಅಂಕಿಅಂಶ ಸೋರಿಕೆಯಾಗಿತ್ತು. ಇದರ ಮೂಲಕ ಲಿಂಗಾಯತರೇನೂ ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ ನಂ.1 ಅಲ್ಲ.. ಅವರಿಗಿಂತ ಮುಸ್ಲಿಮರ ಜನಸಂಖ್ಯೆ ಜಾಸ್ತಿಯಿದೆ ಎಂದು ತೋರಿಸುವ ಪ್ರಯತ್ನ ಸಾಗಿತ್ತು. ಈ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆಯ ಆಧಾರದಲ್ಲಿ ಮೊದಲ ಸ್ಥಾನದಲ್ಲಿರುವುದು ಪರಿಶಿಷ್ಟ ಜಾತಿ. 2015ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ರಾಜ್ಯದ ಅಂದಿನ ಜನಸಂಖ್ಯೆಯ ಆಧಾರದಲ್ಲಿ ಯಾವ ಜಾತಿಗಳ ಜನಸಂಖ್ಯೆಯೇ ಅಚ್ಚರಿ ಮೂಡಿಸಿದೆ.

ಜಾತಿವಾರು ಜನಸಂಖ್ಯೆ!    

  • ಪರಿಶಿಷ್ಟ ಜಾತಿ           1.08 ಕೋಟಿ
  • ಪರಿಶಿಷ್ಟ ಪಂಗಡ          40.45 ಲಕ್ಷ
  • ಮುಸ್ಲಿಂ                   70 ಲಕ್ಷ
  • ಲಿಂಗಾಯತ            65 ಲಕ್ಷ
  • ಒಕ್ಕಲಿಗ                 60 ಲಕ್ಷ
  • ಕುರುಬ                 45 ಲಕ್ಷ
  • ಈಡಿಗ                  15 ಲಕ್ಷ
  • ಬೆಸ್ತ                    15 ಲಕ್ಷ
  • ಬ್ರಾಹ್ಮಣ            14 ಲಕ್ಷ
  • ಗೊಲ್ಲ (ಯಾದವ)      10 ಲಕ್ಷ
  • ಉಪ್ಪಾರ                10 ಲಕ್ಷ
  • ಕ್ರೈಸ್ತ                   10 ಲಕ್ಷ
  • ಮಡಿವಾಳ              6 ಲಕ್ಷ
  • ಅಲೆಮಾರಿ, ಅರೆ ಅಲೆಮಾರಿ      6 ಲಕ್ಷ
  • ಕುಂಬಾರ               5 ಲಕ್ಷ
  • ಸವಿತಾ                 5 ಲಕ್ಷ

ಪರಿಶಿಷ್ಟ ಜಾತಿಯಲ್ಲಿ 1.08 ಕೋಟಿ, ಪರಿಶಿಷ್ಟ ಪಂಗಡದಲ್ಲಿ 40.45 ಲಕ್ಷ ಜನಸಂಖ್ಯೆ ಇದ್ದಾರೆ. ಮುಸ್ಲಿಮರು 70 ಲಕ್ಷ ಇದ್ದು, ಲಿಂಗಾಯತರು 65 ಲಕ್ಷ, ಒಕ್ಕಲಿಗರು 60 ಲಕ್ಷ ಇದೆ ಎನ್ನಲಾಗಿದೆ. ಇನ್ನು ಕುರುಬರು 45 ಲಕ್ಷ, ಈಡಿಗ 15 ಲಕ್ಷ, ಬೆಸ್ತ      15 ಲಕ್ಷ, ಬ್ರಾಹ್ಮಣ 14 ಲಕ್ಷ ಗೊಲ್ಲ, ಉಪ್ಪಾರ ಹಾಗೂ ಕ್ರೈಸ್ತ ಸಮುದಾಯದವರು ಸುಮಾರು ತಲಾ 10 ಲಕ್ಷ ಜನಸಂಖ್ಯೆ ಇದ್ದಾರೆ. ಉಳಿದಂತೆ ಮಡಿವಾಳ, ಅಲೆಮಾರಿ, ಅರೆ ಅಲೆಮಾರಿಗಳು ತಲಾ 6 ಲಕ್ಷ ಇದ್ರೆ ಕುಂಬಾರ, ಸವಿತಾ ಸಮಾಜದವರು ತಲಾ 5 ಲಕ್ಷ ಇದ್ದಾರೆ.

2014-15ರಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಿಕ್ಷಕರು, ಅಧಿಕಾರಿಗಳು ದತ್ತಾಂಶ ವರದಿಯನ್ನು ತಯಾರಿಸಿದ್ದಾರೆ. ಈ ಹಿಂದೆ ಕಾಂತರಾಜ್ ವರದಿ ಸಲ್ಲಿಕೆ ಮಾಡಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಸಲ್ಲಿಕೆ‌ ಆಗಲಿಲ್ಲ. ಇದೀಗ ಜಯಪ್ರಕಾಶ್ ಹೆಗ್ಡೆ ತಂಡವು ವರದಿ ಸಲ್ಲಿಕೆ ಮಾಡಿದೆ. ಇನ್ನು ಜಾತಿಗಣತಿ ವರದಿ ಸೋರಿಕೆಯಾಗಿದೆ ಎಂಬ ಆರೋಪವನ್ನ ಜಯಪ್ರಕಾಶ್ ಹೆಗ್ಡೆ ತಳ್ಳಿ ಹಾಕಿದ್ದಾರೆ. ರಾಜ್ಯದಾದ್ಯಂತ 1.33 ಶಿಕ್ಷಕರು ಹಾಗೂ ಉಳಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ಒಟ್ಟು 1.60 ಲಕ್ಷ ಸಿಬ್ಬಂದಿ ಜಾತಿಗಣತಿ ವರದಿಯ ದತ್ತಾಂಶ ಸಂಗ್ರಹ ಮಾಡಿದ್ದು, 154 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಹೀಗೆ ವರ್ಷಗಳಿಂದಲೂ ಚರ್ಚೆಯಲ್ಲಿದ್ದ ಜಾತಿಜನಗಣತಿ ಸಮೀಕ್ಷೆ ವರದಿಯನ್ನು ಕೊನೆಗೂ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಆದ್ರೆ ಒಕ್ಕಲಿಗರು ಹಾಗೂ ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ಹಲವು ಸಮುದಾಯಗಳಿಂದ ಜಾತಿಗಣತಿ ವರದಿಗೆ ವಿರೋಧ ವ್ಯಕ್ತವಾಗಿತ್ತು. ಎಲ್ಲರ ವಿರೋಧದ ನಡುವೆಯೂ ವರದಿ ಸ್ವೀಕಾರ ಮಾಡಿದ್ದು, ಅದನ್ನು ಜಾರಿ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಮಾಹಿತಿಗಳ ಪ್ರಕಾರ ಈಗ ಸ್ವೀಕರಿಸಿರುವ ವರದಿ ಸದ್ಯ ಬಹಿರಂಗ ಆಗೋದು ಅನುಮಾನ ಎಂದು ಹೇಳಲಾಗುತ್ತಿದ. ಸಂಪೂರ್ಣ ಅಧ್ಯಯನ ನಡೆಸಿದ ಬಳಿಕ ವರದಿ ಬಹಿರಂಗವಾಗುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆ ಬಳಿಕ ವರದಿ ಪರಿಶೀಲನೆಗೆ ಸರ್ಕಾರ ಮುಂದಾಗುವ ಸಾಧ್ಯತೆಗಳಿವೆ. ಆದ್ರೆ ಸ್ವಪಕ್ಷದಲ್ಲೇ ವಿರೋಧ ಇರೋದ್ರಿಂದ ಸರ್ಕಾರಕ್ಕೂ ಬಿಸಿತುಪ್ಪವಾಗುವ ಸಾಧ್ಯತೆ ಇದೆ.

 

Sulekha