ಸು ಫ್ರಮ್ ಸೋ ಸಿನಿಮಾ ರಿಲೀಸ್ – ಸೋಮೇಶ್ವರದ ಸುಲೋಚನಾ ದೆವ್ವಾನಾ?

ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ಇಂದು ರಿಲೀಸ್ ಆಗಿದೆ. ಹಾರರ್, ಕಾಮಿಡಿ ಕಥಾ ಹಂದರದ ಈ ಸಿನಿಮಾ ಸಿನಿ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ.. ಮೊದಲಾರ್ಧ ಫುಲ್ ಕಾಮಿಡಿ ಇದ್ರೆ ದ್ವಿತಿಯಾರ್ಧ ಭಾವನಾತ್ಮಕವಾಗಿ ವೀಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ. ಸು ಫ್ರಮ್ ಸೋ ಸಿನಿಮಾಗೆ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ಭೀಮನ ಅಮಾವಾಸ್ಯೆಗೆ ಗಂಡನ ಪಾದಪೂಜೆ – ಮಧ್ಯಾಹ್ನ ಮನೆಯಲ್ಲೇ ಶವವಾಗಿದ್ದಳು ಹೆಂಡತಿ
ಒಂದು ಊರು.. ಆ ಊರಲ್ಲಿ ಎಲ್ಲಾ ಕಾರ್ಯಕ್ರಮಕ್ಕೂ ಜನ ಸೇರ್ತಾರೆ. ಅಲ್ಲಿನ ಪ್ರತಿಯೊಂದು ಸಂಪ್ರದಾಯವನ್ನ ಅಚ್ಚು ಕಟ್ಟಾಗಿ ಮಾಡ್ತಾರೆ. ಆ ಊರಿಗೆ ರವಿ ಅಣ್ಣ ಎಂಬಾತನೇ ದೊಡ್ಡವನು.. ಆ ಊರಲ್ಲಿ ಏನೇ ಆದ್ರೂ ರವಿ ಅಣ್ಣ ಇರ್ಲೇಬೇಕು. ಎಲ್ಲಾ ಸಮಸ್ಯೆಗಳಿಗೂ ಆತನ ಪರಿಹಾರ ಇರುತ್ತೆ. ರವಿ ಅಣ್ಣ ಎಂಥ ಪರಾಕ್ರಮಿ ಎಂದರೆ ಆತನಿಗೆ ಹೊಡೆದು ಅಭ್ಯಾಸವೇ ಹೊರತು, ಹೊಡೆತ ತಿಂದಿದ್ದು ಇತಿಹಾಸದಲ್ಲೇ ಇಲ್ಲ.. ಆ ಊರಲ್ಲಿ ಎಲ್ಲವೂ ಚೆನ್ನಾಗೇ ಇರುತ್ತೆ.. ಆದ್ರೆ ಆ ಊರಿಗೆ ಸೋಮೇಶ್ವರದ ಸುಲೋಚನಾ ಎಂಟ್ರಿ ಕೊಡ್ತಾಳೆ. ಅದೂ ದೆವ್ವವಾಗಿ. ಈಕೆ ಊರಿಗೆ ಕಾಲಿಡ್ತಿದ್ದಂತೆ ಒಂದೊಂದೇ ಸಮಸ್ಯೆ ಶುರುವಾಗುತ್ತೆ. ಈ ಸಮಸ್ಯೆಗಳನ್ನ ರವಿ ಅಣ್ಣನಿಂದಲೂ ಬಗೆಹರಿಸೋದಿಕ್ಕೆ ಆಗಲ್ಲ. ಸುಲೋಚನಾ ಬಂದ್ಮೇಲೆ ಊರಲ್ಲಿ ಏನೇನಾಗುತ್ತೆ? ಆಕೆ ಈ ಊರಿಗೆ ಬಂದಿದ್ಯಾಕೆ? ಆಕೆ ಮರಳಿ ಹೋಗೋದು ಹೇಗೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಲಾಗಿದೆ.
ಸು ಫ್ರಮ್ ಸೋ ಸಿನಿಮಾ ದೆವ್ವದ ಕತೆ ಆಗಿದ್ರೂ ನಿರ್ದೇಶಕ ಜೆಪಿ ತುಮಿನಾಡ ಅವ್ರು ಹಾಸ್ಯಭರಿತವಾಗಿ ಕತೆಯನ್ನ ತೆಗೆದುಕೊಂಡು ಹೋಗಿದ್ದಾರೆ. ಫಸ್ಟ್ ಹಾಫ್ ಹಾಸ್ಯದ ಅಲೆಯಲ್ಲಿ ತೇಲಿಸುತ್ತಾ ಹೋದ್ರೆ, ಸೆಕೆಂಡ್ ಹಾಫ್ ಪ್ರೇಕ್ಷಕರನ್ನು ಭಾವನೆಗಳ ತೀರಕ್ಕೆ ಕರೆತರುತ್ತಾರೆ ನಿರ್ದೇಶಕರು. ಈ ಬದಲಾವಣೆ ಗೊತ್ತಾಗುವುದರೊಳಗೆ ಕಣ್ಣು ಒದ್ದೆ ಆಗುತ್ತದೆ. ಮರುಕ್ಷಣವೇ ಕಣ್ಣೀರನ್ನು ಹಿಂದಕ್ಕೆ ಹಾಕಿ ಮತ್ತೆ ನಗು ಉಕ್ಕುತ್ತದೆ. ಎರಡು ಗಂಟೆ ಹದಿನೇಳು ನಿಮಿಷ ಇರುವ ಈ ಚಿತ್ರದುದ್ದಕ್ಕೂ ಎಲ್ಲಿಯೂ ‘ಈ ದೃಶ್ಯ ಬೇಡವಾಗಿತ್ತು’ ಎಂದು ಅನಿಸುವುದೇ ಇಲ್ಲ. ಆ ರೀತಿಯಲ್ಲಿ ಚಿತ್ರಕಥೆ ಬರೆದುಕೊಂಡಿದ್ದಾರೆ ಜೆಪಿ ಅವರು. ಇಲ್ಲಿ ಎಲ್ಲಿಯೂ ಹಾಸ್ಯವನ್ನು ತುರುಕಿಲ್ಲ. ಸಹಜ ನಟನೆಯಿಂದ ಅದು ಚಿಮ್ಮುತ್ತದೆ. ನಗುವಿನ ಮಧ್ಯೆಯೇ ಒಂದು ಆಳವಾದ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ.
ಇನ್ನು ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ರವಿ ಅಣ್ಣನಾಗಿ ಶನೀಲ್ ಗೌತಮ್ , ಶೋಕನಾಗಿ ಜೆಪಿ ತುಮಿನಾಡ ಇಷ್ಟ ಆಗುತ್ತಾರೆ. ಚಂದ್ರನಾಗಿ ಪ್ರಕಾಶ್ ತುಮಿನಾಡ, ಸತೀಶನಾಗಿ ದೀಪಕ್ ರೈ, ಯದುವಾಗಿ ಮೈಮ್ ರಾಮದಾಸ್, ಅರ್ಜುನ್ ಕಜೆ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ. ಇನ್ನೂ ಕೆಲವು ಪೋಷಕ ಪಾತ್ರಗಳು ನಗುವಿನ ಕಚಗುಳಿ ಇಡುತ್ತವೆ. ಮಧ್ಯಂತರದ ಬಳಿಕ ಬರುವ ಭಾನು (ಸಂಧ್ಯಾ ಅರೆಕೆರೆ) ಎಲ್ಲರನ್ನೂ ಹಿಂದಿಕ್ಕಿ ಭೇಷ್ ಎನಿಸಿಕೊಳ್ಳುತ್ತಾರೆ.

ನೋಡಿರಿ

