ಮೊಟ್ಟೆಯೇ ಬೇಕೆಂದು ಪಟ್ಟು ಹಿಡಿದ ಮಕ್ಕಳು – ಸಮೀಕ್ಷೆಯಲ್ಲಿ ಸತ್ಯ ಬಹಿರಂಗ!

ಮೊಟ್ಟೆಯೇ ಬೇಕೆಂದು ಪಟ್ಟು ಹಿಡಿದ ಮಕ್ಕಳು – ಸಮೀಕ್ಷೆಯಲ್ಲಿ ಸತ್ಯ ಬಹಿರಂಗ!

ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆಯೇ ಇಷ್ಟ ಅನ್ನೋದು ಸಮೀಕ್ಷೆಯಲ್ಲಿ ಬಯಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸುಮಾರು ಶೇ. 80ರಷ್ಟು ವಿದ್ಯಾರ್ಥಿಗಳು ಮೊಟ್ಟೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೋಳಿಮೊಟ್ಟೆ ವಿತರಣೆ ಯೋಜನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಮೊಟ್ಟೆ ವಿತರಣೆ ಮಾಡದಂತೆ ವಿರೋಧ ಮಾಡಿದ್ದರು. ಇನ್ನೂ ಕೆಲವರು ಮೊಟ್ಟೆಯನ್ನೇ ವಿತರಿಸುವಂತೆ ಬೆಂಬಲ ನೀಡಿದ್ದರು. ಈ ಎಲ್ಲಾ ಕಾರಣಗಳಿಂದ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಪ್ರಕಾರ ಅತೀಹೆಚ್ಚು ಮಕ್ಕಳಿಗೆ ಕೋಳಿಮೊಟ್ಟೆಯೇ ಇಷ್ಟ ಅನ್ನೋದು ಬಹಿರಂಗವಾಗಿದೆ. ಅಲ್ಲದೆ ಮಕ್ಕಳಿಗೆ  ಅವರಿಷ್ಟದ ಆಹಾರವನ್ನೇ ಕೊಡಬೇಕೇ ಹೊರತು ಒತ್ತಾಯಪಡಿಸಬಾರದೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ : ‘ಒನ್ ಮೋರ್ ಪೆಗ್’ ಅನ್ನಂಗಿಲ್ಲ – ‘ಬ್ಯಾಲೆನ್ಸ್’ ತಪ್ಪಿದ್ರೆ ವಿಮಾನದಿಂದ್ಲೇ ಕಿಕ್ ಔಟ್!

ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.80 ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಚಿಕ್ಕಿ, ಬಾಳೆಹಣ್ಣು ಬೇಡ ಮೊಟ್ಟೆಯನ್ನೇ ಕೊಡಿ ಎಂದಿದ್ದಾರೆ. ಹಾಗೇ ಮೊಟ್ಟೆ ಬೇಡವೆನ್ನುವ ಮಕ್ಕಳಿಗೆ ಪರ್ಯಾಯವಾಗಿ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುತ್ತಿದೆ. ಆದ್ರೆ ಯೋಜನೆಗೆ ಪರವಿರೋಧ ಕೇಳಿ ಬಂದಿದ್ದರಿಂದ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ 47.97 ಲಕ್ಷ ವಿದ್ಯಾರ್ಥಿಗಳ ಪೈಕಿ 38.37 ಲಕ್ಷ ವಿದ್ಯಾರ್ಥಿಗಳು ಮೊಟ್ಟೆ ಬೇಕು ಎಂದಿದ್ದಾರೆ. ಉಳಿದ 3.37 ಲಕ್ಷ ವಿದ್ಯಾರ್ಥಿಗಳು ಬಾಳೆಹಣ್ಣು ಮತ್ತು 2.27 ಲಕ್ಷ ವಿದ್ಯಾರ್ಥಿಗಳು ಚಿಕ್ಕಿಗೆ ಆದ್ಯತೆ ನೀಡಿರುವುದು ಬಹಿರಂಗವಾಗಿದೆ. ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸಿಕೊಡಲು ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆ ಆರಂಭವಾದ ಬಳಿಕ ಪರವಿರೋಧ ಕೇಳಿ ಬಂದ್ರೂ ಸರ್ಕಾರ ಮೊಟ್ಟೆ ವಿತರಣೆ ನಿಲ್ಲಿಸಿರಲಿಲ್ಲ. ಮತ್ತೊಂದು ವಿಚಾರ ಅಂದ್ರೆ ರಾಜ್ಯದಲ್ಲಿ ಮೊಟ್ಟೆ ಆಯ್ಕೆ ಮಾಡಿದ 38.37 ಲಕ್ಷ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಇಲ್ಲಿ15.67 ಲಕ್ಷ ವಿದ್ಯಾರ್ಥಿಗಳು ಮೊಟ್ಟೆ ಬೇಕು ಎಂದಿದ್ದಾರೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಟ್ಟೆ ಕೇಳಿದರೆ ಅದನ್ನೇ ನೀಡಬೇಕು. ಬದಲಾಗಿ ಚಿಕ್ಕಿ, ಬಾಳೆಹಣ್ಣನ್ನು ಪರ್ಯಾಯವಾಗಿ ನೀಡುವಂತಿಲ್ಲ. ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲಾಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಸ್ತುವಾರಿ ವಹಿಸಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಒಂದು ವೇಳೆ ಮೊಟ್ಟೆ ತಿನ್ನಲು ಬಯಸದ ವಿದ್ಯಾರ್ಥಿಗಳಿಗೆ ಮಾತ್ರ ಪರ್ಯಾಯವಾಗಿ ಚಿಕ್ಕಿ, ಬಾಳೆಹಣ್ಣು ನೀಡಬೇಕಿದೆ. ಆದರೆ, ಕೆಲವೆಡೆ ಮಕ್ಕಳು ಮೊಟ್ಟೆ ಆಯ್ಕೆ ಮಾಡಿದ್ದರೂ ಬಲವಂತವಾಗಿ ಮೊಟ್ಟೆ ಬದಲು, ಚಿಕ್ಕಿ, ಬಾಳೆಹಣ್ಣು ನೀಡುತ್ತಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಹೀಗಾಗಿ, ಇಲಾಖೆಯು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಠಿಕಾಂಶದಿಂದ ಬಳಲುತ್ತಿರುವುದನ್ನು ಕಂಡು ಆರೋಗ್ಯ ಇಲಾಖೆಯ ಶಿಫಾರಸಿನ ಪ್ರಕಾರ ಮೊಟ್ಟೆ ವಿತರಣೆ ಮಾಡಲು ಸರ್ಕಾರ ಮುಂದಾಗಿತ್ತು.  ಮೊಟ್ಟೆ ವಿತರಣೆ ಮಾಡಿದ ಮೇಲೆ ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶ ಹೆಚ್ಚಾಗಿರುವುದು ತಪಾಸಣೆ ಮೂಲಕ ದೃಢಪಟ್ಟಿದೆ.

suddiyaana