ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ ದಿನದಂದೇ ಸಿಇಟಿ ಪರೀಕ್ಷೆ – ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಭೀತಿ

ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ ದಿನದಂದೇ ಸಿಇಟಿ ಪರೀಕ್ಷೆ – ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಭೀತಿ

ಬೆಂಗಳೂರು: ಮೇ 20 ರಂದು ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಮಧ್ಯಾಹ್ನ 12. 30ಕ್ಕೆ ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೇ 20, 21 ರಂದು ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೇ 20 ರಂದೇ ಪ್ರಮಾಣ ವಚನ ಕಾರ್ಯಕ್ರಮ ಇರುವುದರಿಂದ ಪರೀಕ್ಷಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆ ಭೀತಿ ಶುರುವಾಗಿದೆ.

ಇದನ್ನೂ ಓದಿ: ‘ಕಾಂಗ್ರೆಸ್ ನವರ ಮಧ್ಯರಾತ್ರಿ ಮ್ಯಾಜಿಕ್ ನಿಂದ ನನಗೆ ಸೋಲು’ – ನಿಖಿಲ್ ಕುಮಾರಸ್ವಾಮಿ ಹೀಗೆಂದಿದ್ದೇಕೆ?

ಶನಿವಾರ ಗಣಿತ ಮತ್ತು ಜೀವಶಾಸ್ತ್ರದ ಪರೀಕ್ಷೆ ಇದ್ದು, ಬೆಳಗ್ಗೆ 10.30ಕ್ಕೆ ಸಿಟಿಇ ಪರೀಕ್ಷೆಗಳು ಆರಂಭವಾಗಲಿವೆ. ಇದೇ ದಿನ ಮಧ್ಯಾಹ್ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು, ಜನರು ಸಹಸ್ರಾರು ಸಂಖ್ಯೆಯಲ್ಲಿ ಸಮಾರಂಭಕ್ಕೆ ಬೆಳಗ್ಗೆಯಿಂದಲೇ ಆಗಮಿಸಲಿದ್ದಾರೆ. ಹೀಗಾಗಿ ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಬಹುತೇಕ ಎಲ್ಲ ಭಾಗಗಳ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಪ್ರಮಾಣ ವಚನ ಸಮಾರಂಭ ನಡೆಯಲಿರುವ ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲ ಕೆಲ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಹಾಗಾಗಿ ಈ ವಿದ್ಯಾರ್ಥಿಗಳು ಭಾರೀ ಸಂಚಾರ ದಟ್ಟಣೆ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗದಿರಬಹುದು ಎಂಬ ಆತಂಕಕ್ಕೀಡಾಗಿದ್ದಾರೆ. ಈ ಮಧ್ಯೆ, ಪ್ರಮಾಣ ವಚನ ಸಮಾರಂಭದಿಂದ ಸಿಇಟಿ ವಿದ್ಯಾರ್ಥಿಗಳಿಗೆ ಸಂಚಾರ ದಟ್ಟಣೆಯ ಸಮಸ್ಯೆಯಾಗಲಿದೆಯಾ ಎಂಬ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಪತ್ರ ಬರೆದು ಸಲಹೆ ಕೇಳಿದೆ.

2023 ನೇ ಸಾಲಿನಲ್ಲಿ ಸಿಇಟಿ ಪರೀಕ್ಷೆಗೆ 2.61 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ರಾಜ್ಯಾದ್ಯಂತ 562 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ ಬೆಂಗಳೂರಿನಲ್ಲೇ 121 ಕೇಂದ್ರಗಳಿದ್ದು ನಗರದ ಹೃದಯ ಭಾಗದ ವಿವಿಧ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಸುಮಾರು 85 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿನಲ್ಲೇ ಪರೀಕ್ಷೆ ಬರೆಯಲಿದ್ದಾರೆ.

suddiyaana