ಶಾಲೆಗಳಲ್ಲಿ ವಾರಕ್ಕೆ 2 ದಿನ ನೀಡುತ್ತಿದ್ದ ಮೊಟ್ಟೆ-ಬಾಳೆಹಣ್ಣು ಇನ್ನು ಒಂದೇ ದಿನ!
ಬೆಂಗಳೂರು: ಪ್ರಧಾನ ಮಂತ್ರಿ ಪೋಷಣ ಅಭಿಯಾನದಡಿ ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದಲ್ಲಿ ಎರಡು ದಿನ ನೀಡುತ್ತಿದ್ದ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಚಿಕ್ಕಿ ಅಥವಾ ಬಾಳೆ ಹಣ್ಣನ್ನು ವಾರದಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಬಿಸಿಯೂಟ ಯೋಜನೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು – ಸಿಎಂ ದೆಹಲಿ ಪ್ರವಾಸ ಸಮಯದಲ್ಲಿ ಬದಲಾವಣೆ
ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು / ಶೇಂಗಾ ಚಿಕ್ಕಿಯನ್ನು ವಾರದಲ್ಲಿ ಒಂದೇ ದಿನ ವಿತರಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆಯಂತೆ ಜೂ.20ರಿಂದ ಜು.15ರ ವರೆಗೆ ಮೊದಲ ಹಂತದಲ್ಲಿ ಅಥವಾ ಸರ್ಕಾರದ ಮುಂದಿನ ಆದೇಶ ಬರುವ ತನಕ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಯೋಜನೆಯನ್ನು ಮುಂದುವರಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇಲಾಖೆಯಲ್ಲಿರುವ ಅನುದಾನದ ಆಧಾರದಲ್ಲಿ ಸದ್ಯದ ಮಟ್ಟಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಹೊಸ ಸರ್ಕಾರವು ಜು.7ರಂದು ಬಜೆಟ್ ಮಂಡಿಸಲಿದೆ. ಅದಾದ ನಂತರ ಬಜೆಟ್‌ನಲ್ಲಿ ಕೈಗೊಳ್ಳುವ ನಿರ್ಧಾರದಂತೆ ಇಲಾಖೆ ಮೊಟ್ಟೆ ವಿತರಣೆ ಮಾಡಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.