ಶಸ್ತ್ರಚಿಕಿತ್ಸೆಯಾದರೂ ಪರೀಕ್ಷೆಯದ್ದೇ ಚಿಂತೆ – ಆಂಬ್ಯುಲೆನ್ಸ್‌ನಲ್ಲೇ SSLC ಎಕ್ಸಾಂ ಬರೆದ ವಿದ್ಯಾರ್ಥಿನಿ

ಶಸ್ತ್ರಚಿಕಿತ್ಸೆಯಾದರೂ ಪರೀಕ್ಷೆಯದ್ದೇ ಚಿಂತೆ – ಆಂಬ್ಯುಲೆನ್ಸ್‌ನಲ್ಲೇ SSLC ಎಕ್ಸಾಂ ಬರೆದ ವಿದ್ಯಾರ್ಥಿನಿ

ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮೊದಲ ಪರೀಕ್ಷೆ ಮುಗಿಸಿ ಬರುವಾಗ ಅಪಘಾತಕ್ಕೀಡಾಗಿದ್ದಳು. ಆದರೆ, ಆ ವಿದ್ಯಾರ್ಥಿನಿಗೆ ತನಗಾಗಿರುವ ಗಾಯದ ನೋವಿಗಿಂತ ಜಾಸ್ತಿ ನೋವಾಗಿದ್ದು ಉಳಿದ ಪರೀಕ್ಷೆ ಬರೆಯಲು ಆಗುತ್ತಾ ಇಲ್ವೋ ಅನ್ನೋದು. ಆದರೆ, ಪ್ರತಿಭಾವಂತ ವಿದ್ಯಾರ್ಥಿನಿಗೆ ವೈದ್ಯರಿಂದ ಹಿಡಿದು ಆಕೆಯ ಹೈಸ್ಕೂಲ್ ಅಧ್ಯಾಪಕರು ಕೂಡಾ ಸಹಾಯಕ್ಕೆ ಬಂದಿದ್ದು, ಆಂಬ್ಯುಲೆನ್ಸ್‌ನಲ್ಲೇ ಪರೀಕ್ಷೆ ಬರೆದಿದ್ದಾಳೆ.

ಇದನ್ನೂ ಓದಿ:  ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಪಟ್ಟು – ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ!  

ಮುಂಬಯಿಯ ಬಾಂದ್ರಾದ ಅಂಜುಮನ್-ಐ-ಇಸ್ಲಾಂ ಶಾಲೆಯ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಯ್ಯದ್, ಶುಕ್ರವಾರ ಪರೀಕ್ಷೆ ಬರೆದು ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದಾಳೆ. ರಸ್ತೆ ದಾಟುತ್ತಿದ್ದಾಗ ಹಿಲ್ ರೋಡ್‌ನ ಸೇಂಟ್ ಜೋಸೆಫ್ ಕಾನ್ವೆಂಟ್ ಬಳಿ ಮುಬಾಶಿರಾಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಆಕೆಯ ಎಡ ಪಾದಕ್ಕೆ ಗಂಭೀರವಾದ ಗಾಯಗಳಾಗಿತ್ತು. ಅದೇ ದಿನವೇ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಮುಬಾಶಿರಾ ಶಸ್ತ್ರಚಿಕಿತ್ಸೆಗೂ ಮುನ್ನವೇ ಮುಂಬರುವ ಪರೀಕ್ಷೆಯನ್ನು ನಾನು ಬರೆಯಲೇ ಬೇಕು ಎಂದು ಹಠ ಹಿಡಿದಿದ್ದಳು. ಶಾಲೆಯ ಆಡಳಿತ ಮಂಡಳಿ ಕೂಡಾ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಎಲ್ಲರ ಸಹಕಾರದೊಂದಿಗೆ ಮುಬಾಶಿರಾ ಆಂಬ್ಯುಲೆನ್ಸ್‌ ನಲ್ಲೇ ಪರೀಕ್ಷೆ ಬರೆದಿದ್ದಾಳೆ.

ಪರೀಕ್ಷೆ ಬರೆದ ನಂತರ ಮಾತನಾಡಿದ ಮುಬಾಶಿರಾ, ‘ನನ್ನ ಶಿಕ್ಷಕರು ನನ್ನನ್ನು ಪರೀಕ್ಷೆಗೆ ಬರುವಂತೆ ಪ್ರೋತ್ಸಾಹಿಸಿದರು. ಅಲ್ಲದೆ, ನನ್ನ ಹೆತ್ತವರು ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ. ನನಗೆ ಸಹಾಯ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೆ ಮತ್ತು ನನಗೆ ಆಂಬ್ಯುಲೆನ್ಸ್ ಒದಗಿಸಿದ ಕ್ಯಾನ್ಸರ್ ನೆರವು ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ನಾನು ಧನ್ಯವಾದ ಹೇಳುತ್ತೇನೆ’ ಅಂತಾ ಹೇಳಿದ್ದಾಳೆ.

suddiyaana