ಸಂತೋಷ್ ರಾವ್ ನಿರಪರಾಧಿ!!!! – ಸೌಜನ್ಯಳಿಗೆ ನ್ಯಾಯ ಸಿಗಲ್ವಾ?
ಹೈಕೋರ್ಟ್ ಆದೇಶ.. ಏನು ಸಂದೇಶ?

ಸಂತೋಷ್ ರಾವ್ ನಿರಪರಾಧಿ!!!! – ಸೌಜನ್ಯಳಿಗೆ ನ್ಯಾಯ ಸಿಗಲ್ವಾ?ಹೈಕೋರ್ಟ್ ಆದೇಶ.. ಏನು ಸಂದೇಶ?

ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಕೇಸ್‌ನಲ್ಲಿ ರಾಜ್ಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಮೂರು ಅರ್ಜಿಗಳನ್ನು ದ್ವಿಸದಸ್ಯ ಪೀಠ ವಜಾಗೊಳಿಸಿದೆ.. ಅದರಲ್ಲಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯೂ ಇತ್ತು. ಅಂದರೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನ ಮೊರೆಯಿಟ್ಟಿತ್ತು.. ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನು ಸಂತೋಷ್‌ ರಾವ್‌ ಎಂದೇ ಸಿಬಿಐ ವಾದಿಸಿತ್ತು.. ಆದ್ರೆ ಕೋರ್ಟ್‌ ಈ ಮೇಲ್ಮನವಿಯನ್ನು ಮಾನ್ಯ ಮಾಡಲಿಲ್ಲ.. ಅಲ್ಲಿಗೆ ಸಂತೋಷ್‌ ರಾವ್‌ ನಿರಪರಾಧಿ ಎಂಬ ಸೆಷನ್ಸ್‌ ಕೋರ್ಟ್‌ನ ತೀರ್ಪನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿದೆ.. ಉಳಿದಂತೆ ಸೌಜನ್ಯಳ ಅಪ್ಪ-ಅಮ್ಮ ಸಲ್ಲಿಸಿದ್ದ ಪ್ರಕರಣದ ಮರು ತನಿಖೆಯ ಅರ್ಜಿ ಹಾಗೂ ಸಂತೋಷ್ ರಾವ್‌ ತನ್ನನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿತ್ತು ಎಂಬ ಕಾರಣಕ್ಕೆ ಪರಿಹಾರ ಕೇಳಿ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್‌ನ ದ್ವಿಸದಸ್ಯ ಪೀಠ ವಜಾಗೊಳಿಸಿದೆ.. ಇದು ಸೌಜನ್ಯ ಪರ ಹೋರಾಟಕ್ಕೆ ಹಿನ್ನಡೆಯೋ? ಸೌಜನ್ಯಳನ್ನು ಸಂತೋಷ್ ರಾವ್‌ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದವರಿಗೆ ಹಿನ್ನಡೆಯೋ? ಸೌಜನ್ಯ ಪ್ರಕರಣದಲ್ಲಿ ನ್ಯಾಯ ಮರೀಚಿಕೆ ಆಗಿದೆಯೇ ಎಂಬುದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಸೌಜನ್ಯ ಎಂಬ ಮುಗ್ದ ಹುಡುಗಿಯ ಮೇಲೆ ನರರಾಕ್ಷಸರು ಎರಗಿ, ಅತ್ಯಾಚಾರ ಎಸಗಿ ಕೊಂದು ಮುಗಿಸಿದ ಘಟನೆಗೆ ಬರೋಬ್ಬರಿ 12 ವರ್ಷ ತುಂಬುತ್ತಾ ಬಂತು.. ಆದರೆ ಶವವಾಗೋದಿಕ್ಕೂ ಮೊದಲು ಆ ಹೆಣ್ಣು ಮಗಳ ಮಾಡಿರಬಹುದಾದ ಆರ್ತನಾದ ಇನ್ನೂ ಕರಾವಳಿಯನ್ನು ದಾಟಿ ಕರ್ನಾಟಕದಾದ್ಯಂತ ಹೃದಯ ಇರುವವರಿಗೆ ಕೇಳಿಸುತ್ತಲೇ ಇದೆ.. ಅತ್ಯಾಚಾರದ ವಿಚಾರದಲ್ಲಿ ಹೋಲಿಕೆಗಳು ಸರಿಯಲ್ಲ..  ಹಾಗಿದ್ದರೂ ದೆಹಲಿ, ಕೊಲ್ಕೊತ್ತಾದಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಪುಂಖಾನುಪುಂಖವಾಗಿ ಮಾತಾಡ್ತಿದ್ದಾರೆ.. ಬಹುತೇಕ ಅದೇ ಮಾದರಿಯಲ್ಲಿ ಸೌಜನ್ಯಳ ಅತ್ಯಾಚಾರ ನಡೆದಿತ್ತು.. ಕಾಲೇಜಿನಿಂದ ಹೊರಟು ಬಂದವಳು, ನೇತ್ರಾವತಿ ಸ್ನಾನಘಟ್ಟದ ಬಳಿ ಬಸ್ಸಿಳಿದು, ನಡೆದುಕೊಂಡು ಹೋಗುತ್ತಿದ್ದುದನ್ನು ಕಡೆಯ ಬಾರಿ ಕಂಡವರಿದ್ದಾರೆ.. ಅಲ್ಲಿವರೆಗೂ ಮುಂದಿನ ಭೀಕರತೆಯ ಬಗ್ಗೆ ಅರಿವಿಲ್ಲದ ಹುಡುಗಿ, ಮುಂದೆ ಸಿಕ್ಕಿದ್ದು ಅನಾಥ ಶವವಾಗಿ.. ಅಷ್ಟಾದರೂ ನಮ್ಮ ವ್ಯವಸ್ಥೆಗೆ ಇದೊಂದು ಸಾಮಾನ್ಯ ಕೇಸ್‌.. ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಒಂದು ವಿಷಯ ಉಲ್ಲೇಖ ಮಾಡಿದ್ದರು..

ಹೈಕೋರ್ಟ್ ಹೇಳಿಕೆ

(ಸಂಪೂರ್ಣವಾಗಿ, ಈ ಅಪರಾಧವನ್ನು ಆರೋಪಿ ಎಸಗಿದ್ದಾನೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಆರೋಪಿ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಬೇಕಾದ ಸಾಂದರ್ಭಿಕ ಸಾಕ್ಷ್ಯಗಳು ಕೂಡ ಇಲ್ಲ. ಇಲ್ಲಿ ಮಾಡಿರುವ ಆರೋಪಗಳು ಸಾಬೀತಾಗದೆ ಉಳಿದಿವೆ. ಪ್ರಕರಣ ನಡೆದ ಗೋಲ್ಡನ್‌ ಅವರ್‌ನಲ್ಲಿ ಸರಿಯಾಗಿ ತನಿಖೆ ನಡೆದಿಲ್ಲ. ವಾಸ್ತವವಾಗಿ ವಜೈನಲ್‌ ಸ್ವಾಬ್‌ ಸಂಗ್ರಹಿಸಿದ ವೈದ್ಯರು, ಪ್ರಾಸಿಕ್ಯೂಷನ್‌ನ ಪ್ರಕರಣವನ್ನು ಕೆಡವಿ ಹಾಕಿದರು.)

ಇದರ ಅರ್ಥ ಎಂಥವರಿಗೂ ಗೊತ್ತಾಗಿಬಿಡುತ್ತದೆ.. ಸೌಜನ್ಯಳ ಶವ ಸಿಕ್ಕ ನಂತರ, ಗೋಲ್ಡನ್‌ ಅವರ್‌ನಲ್ಲಿ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ ಎನ್ನುವುದನ್ನು ನ್ಯಾಯಾಧೀಶರೇ ಹೇಳಿದ್ದರು.. ಅಷ್ಟರ ಮಟ್ಟಿಗಿನ ನಿರ್ಲಕ್ಷ್ಯ ಈ ಪ್ರಕರಣದ ತನಿಖೆಯ ವೇಳೆ ನಮ್ಮ ವ್ಯವಸ್ಥೆಗಿತ್ತು.. ಗೋಲ್ಡನ್‌ ಅವರ್‌ನಲ್ಲೇ ಸೌಜನ್ಯಳಿಗೆ ನ್ಯಾಯ ಸಿಗದಂತೆ ಹಳ್ಳ ಹಿಡಿಸುವ ಪ್ರಯತ್ನವೊಂದು ಸಾಗಿತ್ತು.. ಇಲ್ಲದೇ ಹೋಗಿದ್ದರೆ ಒಬ್ಬಳು ಹದಿಹರೆಯದ ಯುವತಿಯ ಅತ್ಯಾಚಾರ ಮತ್ತು ಕೊಲೆಯಾಗಿದೆ ಅಂದಾಗ, ಮನುಷ್ಯತ್ವ ಇರುವ ಯಾರಿಗೇ ಆದರೂ ಇಲ್ಲಿ ನ್ಯಾಯ ಸಿಗಬೇಕು.. ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂಬ ಹಠ ಬರದಿರಲು ಸಾಧ್ಯವೇ ಇರಲಿಲ್ಲ.. ಯಾಕಂದರೆ ನಮ್ಮ ದೇಶ ಹೆಣ್ಣುಮಕ್ಕಳನ್ನು ಗೌರವಿಸುವ ದೇಶ.. ಪೂಜಿಸುವ ದೇಶ.. ಆದರೆ ಅದೇ ಹೆಣ್ಣಿಗೆ ಅನ್ಯಾಯವಾದಾಗ ಅದಕ್ಕೆ ಬೆಪ್ಪರಂತೆ ಸುಮ್ಮನಿರುವ ಹೇಡಿಗಳ ದೇಶ ಅಲ್ಲವೇ ಅಲ್ಲ.. ಅಷ್ಟಿದ್ದರೂ ಸೌಜನ್ಯಳ ಮೇಲೆ ಅತ್ಯಾಚಾರವಾಗಿದೆ ಎನ್ನುವುದು ಸಾಬೀತಾಗಿದ್ದರೂ, ಆಕೆಯ ಕೊಲೆಯಾಗಿದೆ ಎನ್ನುವುದಕ್ಕೆ ಶವ ಸಿಕ್ಕಿದ್ದರೂ.. ಆಕೆಯನ್ನು ಕೊಂದು ಮುಗಿಸಿದ ಮನುಷ್ಯ ಪ್ರಾಣಿ ಯಾವುದು ಎನ್ನುವುದೇ ಗೊತ್ತಿಲ್ಲ ಅಂತಾದ್ರೆ ಈ ವ್ಯವಸ್ಥೆಯ ಬಗ್ಗೆ ನಗಬೇಕೋ.. ಅಳಬೇಕೋ.. ಎನ್ನುವುದೇ ನಾಗರಿಕ ಸಮಾಜಕ್ಕೆ ಅರ್ಥವಾಗುತ್ತಿಲ್ಲ..

 

ಹೈಕೋರ್ಟ್‌ ಈಗ ಸಿಬಿಐನ ಮೇಲ್ಮನವಿಯನ್ನು ವಜಾಗೊಳಿಸಿದ್ದರಿಂದ, ಸಂತೋಷ್‌ ರಾವ್‌ ನಿರಪರಾಧಿ ಎನ್ನುವುದು ಸಾಬೀತಾಗಿದೆ.. ಅಲ್ಲಿಗೆ ಸೌಜನ್ಯಳನ್ನು ಸಂತೋಷ್‌ ರಾವ್‌ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ.. ಇಷ್ಟಕ್ಕೂ ಸೌಜನ್ಯಳ ಪೋಷಕರು ಆರಂಭದಿಂದಲೂ ಸಂತೋಷ್‌ ರಾವ್‌ ಅಪರಾಧಿ ಆಗಿರಲು ಸಾಧ್ಯವೇ ಇಲ್ಲ ಎಂದಿದ್ದರು.. ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೂ ಸಂತೋಷ್‌ ರಾವ್‌, ಅತ್ಯಾಚಾರ ಎಸಗಿದ್ದರ ಬಗ್ಗೆ, ಸೌಜನ್ಯಳ ದೇಹದ ಮೇಲೆ ಸಂತೋಷ್‌ ರಾವ್‌ಗೆ ಸಂಬಂಧಿಸಿದ ಯಾವುದೇ ವೈಜ್ಞಾನಿಕ ಸಾಕ್ಷ್ಯ ಸಿಕ್ಕಿರಲಿಲ್ಲ.. ಇದರಿಂದಾಗಿಯೇ ಆರೋಪಿ ಖುಲಾಸೆ ಆಗಿದ್ದು ಮಾತ್ರವಲ್ಲ.. ನಿಜವಾದ ಅತ್ಯಾಚಾರಿ ಯಾರು ಎಂಬುದನ್ನು ದೃಢಪಡಿಸಲು ಬೇಕಿದ್ದ ಎಫ್‌ಎಸ್‌ಎಲ್‌ ಸಾಕ್ಷ್ಯವನ್ನೂ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.. ಯಾಕಂದ್ರೆ ಸೌಜನ್ಯಳ ಮೃತದೇಹದಿಂದ ಸಂಗ್ರಹಿಸಿದ್ದ ಸ್ವಾಬ್‌, ಫಂಗಸ್‌ ಹಿಡಿದು, ಎಫ್‌ಎಸ್‌ಎಲ್‌ ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು.. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ವೈದ್ಯಕೀಯ ಮ್ಯಾನ್ಯುವಲ್‌ನಲ್ಲಿರುವ ಸಾಮಾನ್ಯ ಪ್ರಕ್ರಿಯೆಯಾಗಿರುವ ಸ್ವಾಬ್‌ ಅನ್ನು ಒಣಗಿಸಿ ಇಡಬೇಕು ಎನ್ನುವ ಅತ್ಯಂತ ಸಾಮಾನ್ಯ ವಿಚಾರದಲ್ಲೂ ನಿರ್ಲಕ್ಷ್ಯವಹಿಸಿದ್ದರು.. ಅಂದರೆ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ನಡೆದ ಅತ್ಯಾಚಾರ.. ಆಕೆಯ ಬರ್ಬರ ಕೊಲೆ.. ಇದ್ಯಾವುದೂ ಆ ವೈದ್ಯರಿಗೆ ತನ್ನ ವೃತ್ತಿಧರ್ಮ ಪಾಲನೆ ಮಾಡಿ, ಆಕೆಗೆ ನ್ಯಾಯ ಒದಗಿಸಬೇಕು ಎನ್ನುವ ಆತ್ಮಪ್ರಜ್ಞೆಯೇ ಇಲ್ಲದಂತೆ ಮಾಡಿದ್ದು ಅಚ್ಚರಿ ಮಾತ್ರವಲ್ಲ, ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನರಿಗೆ ಭ್ರಮನಿರಸನ ಆಗುವಂತೆ ಮಾಡುತ್ತದೆ.. ಇದೆಲ್ಲಾ ಸರ್ವೇ ಸಾಮಾನ್ಯ ಅಂತ ಹೇಳಿಕೊಳ್ಳುವವರು ನಮ್ಮ ನಡುವೆ ಇದ್ದಾರೆ.. ಆದರೆ ಇದು ಸರ್ವೇ ಸಾಮಾನ್ಯ ಅಲ್ಲ.. ಕೊಲೆ ಯಾರದ್ದೇ ಆದರೂ.. ಅತ್ಯಾಚಾರ ಯಾರ ಮೇಲೆಯೇ ಆದರೂ.. ಅದು ಕಡುಬಡವರ ಮನೆಯ ಹುಡುಗಿಯೇ ಆಗಿರಲಿ.. ಆಗರ್ಭ ಶ್ರೀಮಂತರ ಮನೆಯಿಂದ ಬಂದವರೇ ಆಗಿರಲಿ.. ನ್ಯಾಯ ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು.. ತನಿಖೆಯ ವ್ಯವಸ್ಥೆ ಒಂದೇ ರೀತಿಯಲ್ಲಿರಬೇಕು. ತನಿಖೆಯ ಸ್ಟ್ಯಾಂಡರ್ಡ್‌ ಒಂದಿಂಚೂ ಬದಲಾಗಬಾರದು.. ಅಂತದ್ದೊಂದು ವ್ಯವಸ್ಥೆಯನ್ನು ಮುಂದೆಯಾದರೂ ರೂಪಿಸುವುದಕ್ಕೆ ಸೌಜನ್ಯ ಪ್ರಕರಣ ಪ್ರೇರಣೆಯಾಗಬೇಕು.. ಸೌಜನ್ಯಳದ್ದು ಕೇವಲ ಅತ್ಯಾಚಾರ ಮತ್ತು ಕೊಲೆಯಿಂದ ಆದ ಸಾವಲ್ಲ.. ಆಕೆ ವ್ಯವಸ್ಥೆಯನ್ನು ಸುಧಾರಿಸಲು ಹುತಾತ್ಮಳಾಗಿದ್ದಾಳೆ..  ಇದೇ ಕಾರಣಕ್ಕೆ ಆಕೆಯ ಮೇಲೆ ಎರಗಿದ ದುರಾತ್ಮರಿಗೆ ಶಿಕ್ಷೆ ಆಗಲೇಬೇಕು.. ಜೊತೆಗೆ ಇನ್ನು ಮುಂದೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವ ನರರಾಕ್ಷಸರ ಮೇಲಿನ ತನಿಖೆಗೊಂದು ನಿರ್ದಿಷ್ಟ ವ್ಯವಸ್ಥೆ ರೂಪಿಸಲು ಸೌಜನ್ಯ ಪ್ರಕರಣ ದಾರಿತೋರಿಸಬೇಕು.. ಹಾಗಿದ್ದಾಗ ಮಾತ್ರ, ಮತ್ತೊಬ್ಬಳು ಸೌಜನ್ಯಳ ಸಾವನ್ನು ತಡೆಯಲು ಸಾಧ್ಯವಿದೆ.. ಈಗ ಹೈಕೋರ್ಟ್‌ ತೀರ್ಪಿನ ನಂತರವೂ ಸೌಜನ್ಯ ಪರ ಹೋರಾಟಗಾರರು ತಮ್ಮ ಹೋರಾಟವನ್ನು ಜೀವಂತವಿಡುವ ನಿರ್ಧಾರಕ್ಕೆ ಬಂದಿದ್ದಾರೆ.. ಇದು ಕೇವಲ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಮಾತ್ರವಲ್ಲ.. ಇದು ವ್ಯವಸ್ಥೆಯ ಬದಲಾವಣೆಗೆ.. ಮತ್ತೊಂದು ಅತ್ಯಾಚಾರ ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಡೆಯುತ್ತಿರುವ ಜಾಗೃತಿಯ ಹೋರಾಟ..

suddiyaana