ಜಸ್ಟೀಸ್ ಫಾರ್ ನಿಖಿತಾ ಅಭಿಯಾನಕ್ಕೆ ವ್ಯಾಪಕ ಬೆಂಬಲ – ಉಡುಪಿಯಲ್ಲಿ ಎಬಿವಿಪಿ ಸಂಘಟನೆಯಿಂದ ಬೃಹತ್ ಪ್ರತಿಭಟನೆ
ಉಡುಪಿಯ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟೀಸ್ ಫಾರ್ ನಿಖಿತಾ ಎಂಬ ಅಭಿಯಾನ ಆರಂಭವಾಗಿತ್ತು. ಜೂನ್ 23ರಂದು ನಿಖಿತಾ ಸಾವಿಗೆ ನ್ಯಾಯಬೇಕು. ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆ ಬೃಹತ್ ಪ್ರತಿಭಟನೆ ಕೂಡಾ ನಡೆಸಿದೆ. ಇದೀಗ ವಿದ್ಯಾರ್ಥಿನಿ ಸಾವಿನ ಬಗ್ಗೆ ಕರಾವಳಿಯ ಅನೇಕ ಮಂದಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ಯುಎಸ್ ವೀಸಾಗೆ ಚೆನ್ನೈಗೆ ಹೋಗಬೇಕೆಂದಿಲ್ಲ! – ಬೆಂಗಳೂರಿನಲ್ಲೇ ಅಮೆರಿಕಾ ರಾಯಭಾರ ಕಚೇರಿ?
ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ, ವಿದ್ಯಾರ್ಥಿನಿ 20 ವರ್ಷದ ನಿಕಿತಾ, ಹೊಟ್ಟೆ ನೋವು ಎಂಬ ಕಾರಣಕ್ಕೆ ಕಳೆದ ಬುಧವಾರ ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದಳು. ಸ್ಕ್ಯಾನಿಂಗ್ ಎಂಡೋಸ್ಕೋಪಿ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಸರಿಯಾದ ಮಾಹಿತಿ ನೀಡದೆ ಆಪರೇಷನ್ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಪೆಂಡಿಕ್ಸ್ ಆಗಿದೆ ಎಂದು ಆಪರೇಷನ್ ಮಾಡಿದ್ದು, ಶಸ್ತ್ರಚಿಕಿತ್ಸೆ ನಡೆದ ಬಳಿಕ ಲಂಗ್ಸ್‌ನಲ್ಲಿ ನೀರು ತುಂಬಿದ ಪರಿಣಾಮ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಕಂಡು ಪೋಷಕರು ಆತಂಕಗೊಂಡಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ನಾವೇ ಚಿಕಿತ್ಸೆ ನೀಡುತ್ತೇವೆ ಎಂದು ಆ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಭಾನುವಾರ ಮುಂಜಾನೆ ಯುವತಿ ಸಾವನ್ನಪ್ಪಿದ್ದಾಳೆ. ಸಾವಿಗೆ ಹೃದಯಘಾತ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಮಣಿಪಾಲಗೆ ಶಿಫ್ಟ್ ಮಾಡಲು ಒಪ್ಪದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗಳೇ ಇಲ್ಲದ ಮೇಲೆ ದೂರು ನೀಡುವುದು ಯಾಕೆ ಎಂದು ಪೋಷಕರು ಪೊಲೀಸ್ ಕಂಪ್ಲೇಂಟ್ ಮಾಡಿಲ್ಲ. ಮಂಗಳೂರಿನ ಕೆಪಿಟಿಯಲ್ಲಿ ನಿಕಿತಾ ಡಿಪ್ಲೋಮೋ ಮಾಡುತ್ತಿದ್ದರು. ಸದ್ಯ ವೈದ್ಯರ ನಿರ್ಲಕ್ಷದಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದು ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟೀರ್ ಫಾರ್ ನಿಖಿತಾ ಎಂಬ ಅಭಿಯಾನ ಶುರುವಾಗಿದೆ. ಅಷ್ಟೇ ಅಲ್ಲದೇ, ಇವತ್ತು ಉಡುಪಿಯಲ್ಲಿ ವಿದ್ಯಾರ್ಥಿನಿ ಸಾವಿಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೂಡಾ ನಡೆದಿದೆ. ಪ್ರತಿಭಟನಾಕಾರರು, ಸಿಟಿ ಆಸ್ಪತ್ರೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ.