ಪುತ್ತಿಲ Vs ಬಿಜೆಪಿ ಸಮರದಲ್ಲಿ ‘ಕೈ’ಗೆ ಲಕ್? – ಪುತ್ತೂರು ಕ್ಷೇತ್ರದಲ್ಲಿ ಜೋರಾಯ್ತು ಬೆಟ್ಟಿಂಗ್!

ಪುತ್ತಿಲ Vs ಬಿಜೆಪಿ ಸಮರದಲ್ಲಿ ‘ಕೈ’ಗೆ ಲಕ್? – ಪುತ್ತೂರು ಕ್ಷೇತ್ರದಲ್ಲಿ ಜೋರಾಯ್ತು ಬೆಟ್ಟಿಂಗ್!

ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಪೈಕಿ ಪುತ್ತೂರು ವಿಧಾನಸಭಾ ಕ್ಷೇತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹಿಂದುತ್ವದ ಪ್ರಯೋಗಶಾಲೆಯೆಂದೇ ಪರಿಗಣಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಕ್ಷೇತ್ರ ಈ ಬಾರಿ ಆಡಳಿತಾರೂಢ ಬಿಜೆಪಿಗೆ ಕಬ್ಬಿಣದ ಕಡಲೆಯಾಗುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಕಾರಣ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಹಿಂದೂಪರ ಮುಖಂಡ ಅರುಣ್ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿದಿರುವುದು. ಅವರಿಗೆ ಕ್ಷೇತ್ರದಲ್ಲಿ ಸಿಗುತ್ತಿರುವ ಜನಬೆಂಬಲ ನೋಡಿ ಕಮಲ ಪಾಳಯ ದಂಗು ಬಡಿದಿದ್ದರೆ, ಕಾಂಗ್ರೆಸಿಗರ ಮುಖದಲ್ಲಿ ನಗು ಅರಳಿದೆ.

ಇದನ್ನೂ ಓದಿ : ‘ಅವನೊಬ್ಬ ಮೋಸಗಾರ.. ಮೊದಲೇ ಗೊತ್ತಿದ್ದರೆ ಟಿಕೆಟ್ ಕೊಡ್ತಿರಲಿಲ್ಲ’ – ಚಾಮುಂಡೇಶ್ವರಿ ಕ್ಷೇತ್ರದ ‘ಕೈ’ ಅಭ್ಯರ್ಥಿ ವಿರುದ್ಧ ಸಿದ್ದು ಕಿಡಿ!

ಬಿಜೆಪಿಯ ಡಿ.ವಿ.ಸದಾನಂದ ಗೌಡ 1994ರಲ್ಲಿ ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆಯ ವಿರುದ್ಧ ಗೆಲುವು ಸಾಧಿಸಿದ ಬಳಿಕ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ. 2013ರಲ್ಲಿ ಬಿಜೆಪಿಯ ಮೇಲಿನ ಅಸಮಾಧಾನ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಕುಂತಲಾ ಶೆಟ್ಟಿ ಅವರಿಗೆ ವರವಾಗಿ ಪರಿಣಮಿಸಿದ್ದು ಬಿಟ್ಟರೆ ಉಳಿದಂತೆ ಪ್ರತಿಬಾರಿಯೂ ಗೆದ್ದಿದ್ದು ಬಿಜೆಪಿ ಅಭ್ಯರ್ಥಿಯೇ. ಲೋಕಸಭಾ ಚುನಾವಣೆಯಲ್ಲೂ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ತಾಲೂಕುಗಳ ಮತಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದ ಕಾಂಗ್ರೆಸ್ ಪಕ್ಷ ಪುತ್ತೂರು ಮತ್ತು ಸುಳ್ಯ ತಾಲೂಕಿನ ಮತಎಣಿಕೆ ವೇಳೆ ಸಂಪೂರ್ಣ ನೆಲಕಚ್ಚುತ್ತಿತ್ತು. ಅಂತಿಮವಾಗಿ ಗೆಲುವಿನ ನಗು ಬಿಜೆಪಿಯದ್ದಾಗುತ್ತಿತ್ತು. 1991ರಲ್ಲಿ ಧನಂಜಯ್ ಕುಮಾರ್ ವಿರುದ್ಧ ಜನಾರ್ದನ ಪೂಜಾರಿ ಪರಾಭವಗೊಂಡ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಸಂಸದನನ್ನು ಕಂಡಿಲ್ಲ. ಅದರಲ್ಲಿ ಪುತ್ತೂರು ಮತ್ತು ಸುಳ್ಯ ಕ್ಷೇತ್ರದ ಕೊಡುಗೆ ಬಹುದೊಡ್ಡದಿದೆ. ಅಷ್ಟರ ಮಟ್ಟಿಗೆ ಇಲ್ಲಿ ಬಿಜೆಪಿ ಬಲಿಷ್ಠ. ಅಭ್ಯರ್ಥಿ ಯಾರೇ ಇರಲಿ, ಬಿಜೆಪಿಗೆ ಗೆಲುವು ಶತಸಿದ್ಧ.

ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ತೆಗೆದುಕೊಂಡ ನಿಲುವು ಅದಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರವಾಗುತ್ತಿವೆ. ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಮತ್ತೆ ಟಿಕೆಟ್ ನೀಡುವುದಕ್ಕೆ ಕಾರ್ಯಕರ್ತರ ವಲಯದಿಂದ ಭಾರೀ ವಿರೋಧವಿತ್ತು. ಹೀಗಾಗಿ ಕಳೆದ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂಪರ ಮುಖಂಡ ಅರುಣ ಪುತ್ತಿಲ ಸೇರಿದಂತೆ ಮೂರು ನಾಲ್ಕು ಹೆಸರುಗಳು ಸ್ಪರ್ಧೆಯಲ್ಲಿದ್ದವು. ಆದರೆ ಬಿಜೆಪಿ ಹೈಕಮಾಂಡ್ ಯಾರ ಹೆಸರನ್ನೂ ಗಣನೆಗೆ ತೆಗೆದುಕೊಳ್ಳದೆ ಅಂತಿಮವಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಆಶಾ ತಿಮ್ಮಪ್ಪಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿತು. ಆದರೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಇದನ್ನು ನಿರೀಕ್ಷಿಸಿರಲಿಲ್ಲ. ತಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದಕ್ಕೆ ಇದೀಗ ಪಕ್ಷದ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಪುತ್ತಿಲ ಬೆಂಬಲಿಗರ ನಡುವಿನ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆಲ್ಲಬಹುದು ಎನ್ನಲಾಗುತ್ತಿದೆ. ಈಗಾಗಲೇ ಪುತ್ತೂರು ಕ್ಷೇತ್ರದಲ್ಲಿ ಗೆಲುವಿನ ವಿಚಾರವಾಗಿ ಸಾಕಷ್ಟು ಬೆಟ್ಟಿಂಗ್ ಕೂಡ ನಡೆಯುತ್ತಿದೆ.

suddiyaana