ಬೀದಿನಾಯಿಗಳು ಪಾರ್ಕ್‌ನಿಂದ ನಾಪತ್ತೆ! – ಹುಡುಕಿಕೊಟ್ಟವರಿಗೆ 35 ಸಾವಿರ ಬಹುಮಾನ ಘೋಷಣೆ!

ಬೀದಿನಾಯಿಗಳು ಪಾರ್ಕ್‌ನಿಂದ ನಾಪತ್ತೆ! – ಹುಡುಕಿಕೊಟ್ಟವರಿಗೆ 35 ಸಾವಿರ ಬಹುಮಾನ ಘೋಷಣೆ!

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ ಈಗ ಬೀದಿ ನಾಯಿಗಳಿಗೂ ಶುಕ್ರದೆಸೆ ಆರಂಭವಾಗಿದೆ. ವಾರಣಾಸಿಯ ಬೀದಿನಾಯಿಗೆ ವಿದೇಶಕ್ಕೆ ಹಾರುವ ಅವಕಾಶವೊಂದು ಒದಗಿಬಂದಿದೆ. ವಿದೇಶಿ ಮಹಿಳೆಯೊಬ್ಬಳು ಬೀದಿನಾಯಿಯೊಂದನ್ನು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿರುವ ವಿಚಾರ ಭಾರಿ ಸುದ್ದಿಯಾಗಿತ್ತು. ಇದೀಗ ಸಿಲಿಕಾನ್‌ ಸಿಟಿ ಬೆಂಗಳೂರಿನ ಮೂರು ಬೀದಿ ನಾಯಿಗಳು ನಾಪತ್ತೆಯಾಗಿದ್ದು, ಹುಡುಕಿಕೊಟ್ಟವರಿಗೆ ಬಂಪರ್‌ ಬಹುಮಾನವನ್ನು ಘೋಷಿಸಲಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನಂತಹ ಮಹಾನಗರದಲ್ಲಿ ಲೆಕ್ಕವಿಲ್ಲದಷ್ಟು ಬೀದಿನಾಯಿಗಳಿವೆ. ಹೆಜ್ಜೆ ಹೆಜ್ಜೆಗೂ ಬೀದಿ ನಾಯಿಗಳು ಸಿಗುತ್ತಿರುತ್ತವೆ. ಇವುಗಳು ಕೊಡೋ ಕಾಟಕ್ಕೆ ಬೀದಿನಾಯಿಗಳು ತೊಲಗಿದ್ರೆ ಸಾಕಪ್ಪ ಅಂತಾ ಹಿಡಿಶಾಪ ಹಾಕುತ್ತಿರುತ್ತಾರೆ. ಇವುಗಳಿಗೆ ಏನು ಆದರೂ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ದಿನಾ ಸಾಯೋರಿಗೆ ಅಳೋರಾರು ಎಂಬಂತೆ ಬೀದಿನಾಯಿಗಳ ಪಾಡು ಯಾರಿಗೂ ಬೇಕಿಲ್ಲ. ಹೀಗಿರುವಾಗ ಇಲ್ಲೊಬ್ಬ ಮೂರು ಬೀದಿನಾಯಿಗಳು ಇದ್ದಕ್ಕಿಂತೆ ನಾಪತ್ತೆಯಾಗಿರೋದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಷ್ಟೇ ಅಲ್ಲದೇ ಬೀದಿ ನಾಯಿಗಳನ್ನು ಹುಡುಕಿಕೊಟ್ಟವರಿಗೆ ಬಂಪರ್‌ ಬಹುಮಾನ ನೀಡಲಾಗುವುದಾಗಿ ಘೋಷಿಸಿದ್ದಾನೆ.

ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಪ್ರಾಣಿ ಸಾಕುವವರಿಗೆ ಹೊಸ ರೂಲ್ಸ್‌! – ಪ್ರಾಣಿಪ್ರಿಯರನ್ನು ಕೆರಳಿಸಿದ ಹೊಸ ನಿಯಮ!

ಕಳೆದ 9 ವರ್ಷಗಳಿಂದ ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಬಳಿ ಮೂರು ಬೀದಿನಾಯಿಗಳು ವಾಸವಾಗಿದ್ದವು. ಕುಮಾರ ಪಾರ್ಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ ಎಂಬಾತ ಮನೆ ನಾಯಿಗಳಂತೆ ಪ್ರತಿನಿತ್ಯ ಆಹಾರ ನೀಡಿ ಆರೈಕೆ ಮಾಡುತ್ತಿದ್ದರು.  ಕಳೆದ ಹತ್ತು ವರ್ಷಗಳಿಂದ ನಾಯಿಗಳಿಗೆ ಊಟ ಹಾಕಿ ನೋಡಿಕೊಳ್ಳುತ್ತಿದ್ದ ಆದರೆ ಅಕ್ಟೋಬರ್ 4 ರಿಂದ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ. ಹತ್ತು ವರ್ಷಗಳಿಂದ ಎಲ್ಲೂ ಕದಲಾದ ಬೀದಿನಾಯಿ ಈಗ ದಿಢೀರ್ ನಾಪತ್ತೆಯಾಗಿವೆ.

ಈತ ತನ್ನ ಅಚ್ಚುಮೆಚ್ಚಿನ ನಾಯಿಗಳಿಗಾಗಿ ಸುತ್ತಮುತ್ತ ಹುಡುಕಾಡಿದ್ದಾನೆ. ಎಷ್ಟು ಹುಡುಕಿದರೂ ನಾಯಿಗಳು ಪತ್ತೆಯಾಗಿಲ್ಲ. ಬೀದಿನಾಯಿಗಳನ್ನು ಸ್ಥಳೀಯ ದುಷ್ಕರ್ಮಿಗಳು ಬೇರೆಡೆ ಬಿಟ್ಟುಬಂದಿರೋ ಶಂಕೆ ವ್ಯಕ್ತಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಬೀದಿನಾಯಿಗಳನ್ನು ಪತ್ತೆಹಚ್ಚಿ ರಕ್ಷಿಸುವಂತೆ ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.  ದೂರು ದಾಖಲಿಸಿಕೊಂಡ ಪೊಲೀಸರು ಕಳೆದುಹೋದ ಬೀದಿನಾಯಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಹುಡುಕಿಕೊಟ್ಟವರಿ ಬಹುಮಾನ ಘೋಷಣೆ

ಕಳೆದ ಮೂರು ವಾರದಿಂದ ನಾಪತ್ತೆಯಾಗಿರುವ ಬೀದಿನಾಯಿಗಳನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ನಾಯಿ ಮಾಲೀಕ ಹೇಳಿದ್ದಾನೆ. ಒಂದು ನಾಯಿ ಹುಡುಕಿಕೊಟ್ಟರೆ 10 ಸಾವಿರ ರೂ., ಮೂರು ನಾಯಿಗಳನ್ನು ಹುಡುಕಿಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ಕೊಡುವುದಾಗಿ ಘೊಷಣೆ ಮಾಡಿದ್ದಾನೆ. ಈ ಬಗ್ಗೆ ಪಾಪ್ಲೆಟ್ ಮಾಡಿಸಿ ಎಲ್ಲ ಕಡೆ ಹಂಚಿ ಪ್ರಚಾರ ಮಾಡುತ್ತಿದ್ದಾನೆ.

Shwetha M