ಸಿಎಂ ನಿವಾಸದ ಮೇಲೆ ಕಲ್ಲೆಸೆದು ಎಸ್ಕೇಪ್ – ಬಂಧನದ ವೇಳೆ ಪೊಲೀಸರ ಮೇಲೆಯೂ ಹಲ್ಲೆ ಮಾಡಿ ಹುಚ್ಚಾಟ
ಇರಲಾರದೆ ಇರುವೆ ಬಿಟ್ಟುಕೊಂಡ್ರು ಎಂಬಂತಾಗಿದೆ ಈತನ ಕಥೆ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇರೋದು ಬಿಟ್ಟು ಮುಖ್ಯಮಂತ್ರಿಗಳ ನಿವಾಸದ ಮೇಲೆಯೇ ಕಲ್ಲೆಸೆದು ಲಾಕ್ ಆಗಿದ್ದಾನೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮೈಸೂರು ನಿವಾಸದ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಿದ್ದ ಕಿರಾತಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ : ಅತ್ತಿಬೆಲೆ ಅಗ್ನಿ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ! – ಇನ್ನು ಮುಂದೆ ಈ ಹಬ್ಬಗಳಲ್ಲಿ ಪಟಾಕಿ ನಿಷೇಧ!
ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಮೈಸೂರಿನ (Mysuru) ಟಿ.ಕೆ ಬಡಾವಣೆಯಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಕಲ್ಲೆಸೆದು ಪರಾರಿಯಾಗಿದ್ದ. ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತ ಪೊಲೀಸರು ಕಲ್ಲೆಸದವನ (Stone Pelting) ಪತ್ತೆಗೆ ಕಾರ್ಯಾಚರಣೆ ನಡೆಸಿದ್ರು. ಕೆಲವೇ ಗಂಟೆಗಳಲ್ಲಿ ಆತನನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಸತ್ಯಮೂರ್ತಿ ಎಂಬ ಕಿಡಿಗೇಡಿ ಸಿಎಂ ನಿವಾಸಕ್ಕೆ ಕಲ್ಲು ಎಸೆದ ಆರೋಪಿಯಾಗಿದ್ದು, ಈತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ (Saraswathipuram Police Station) ಎಫ್ಐಆರ್ ದಾಖಲು ಮಾಡಲಾಗಿದ್ದು, ನಿನ್ನೆಯೇ ಎಫ್‌ಐಆರ್ ದಾಖಲಿಸಿ 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಪೊಲೀಸರು ಹಾಜರುಪಡಿಸಿದ್ದಾರೆ. ಸದ್ಯ ಆರೋಪಿ ಸತ್ಯಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 427, 353 ಹಾಗೂ ಸೆಕ್ಷನ್ 504 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕಲ್ಲು ಎಸೆದು ಮೈಸೂರು ಹೊರವಲಯದಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದ. ಮುಖ್ಯಮಂತ್ರಿ ಮನೆಗೆ ಕಲ್ಲೆಸೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಸ್ವತಿಪುರಂ ಠಾಣೆ ಪೊಲೀಸರು ಇನ್ಸಪೆಕ್ಟರ್ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯ ಸುಳಿವು ಪತ್ತೆ ಹಚ್ಚಿದ ಪೊಲೀಸರ ತಂಡ ಆತನನ್ನು ವಶಕ್ಕೆ ಪಡೆಯಲು ಮುಂದಾಗಿದೆ. ಸತ್ಯಮುರ್ತಿಯನ್ನು ಬಂಧಿಸಲು ಹೋದಾಗ ತೀವ್ರ ಪ್ರತಿರೋಧ ಒಡ್ಡಿದ್ದಾನೆ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಹೇಂದ್ರ ಎನ್ನುವವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಸದ್ಯ ಕಲ್ಲೆಸೆಯಲು ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.