ಕಳ್ಳತನ ಕಲಿಸಿದ ಗೆಳೆಯನಿಗೆ ಗುರುದಕ್ಷಿಣೆ ನೀಡಲು ಬೈಕ್ ಕದ್ದ – ದುಬಾರಿ ಗಿಫ್ಟ್ ನೀಡಲು ಹೋಗಿ ಖಾಕಿ ಬಲೆಗೆ ಬಿದ್ದ..!
ಅವರಿಬ್ಬರು ಪ್ರಾಣಸ್ನೇಹಿತರು. ಈಗಿನ್ನೂ ಹದಿಹರೆಯವಷ್ಟೇ. ಒಬ್ಬನಿಗೆ 17. ಮತ್ತೊಬ್ಬನಿಗೆ 18 ತುಂಬಿ ಎರಡು ದಿನಗಳಾಗಿತ್ತಷ್ಟೇ. ಇದರಲ್ಲಿ 18 ತುಂಬಿದ ಯುವಕ ಮತ್ತೊಬ್ಬನಿಗೆ ಗುರುವಾಗಿದ್ದ. ಗೆಳೆಯನಿಗೆ ಕಳ್ಳತನ ಮಾಡುವುದು ಹೇಗೆ ಎಂಬ ಕ್ಲಾಸ್ ಚೆನ್ನಾಗಿಯೇ ನೀಡುತ್ತಿದ್ದ. ಕದಿಯುವುದನ್ನು ಹೇಳಿಕೊಟ್ಟ ಗೆಳೆಯನಿಗೆ ಏನಾದರೂ ಗುರುದಕ್ಷಿಣೆ ಕೊಡಲೇಬೇಕು ಎಂಬ ಆಸೆ ಹುಡುಗನಿಗೂ ಬಂದಿದೆ. ಹೀಗಾಗಿ ಫೀಲ್ಡಿಗೆ ಇಳಿದೇ ಬಿಟ್ಟಿದ್ದ. ಅದು ಕೂಡಾ ದುಬಾರಿ ಗುರುದಕ್ಷಿಣೆ ನೀಡಲು ಪ್ಲಾನ್ ಮಾಡಿದ್ದ.
ಇದನ್ನೂ ಓದಿ: ಫ್ರೆಂಡ್‌ಗಾಗಿ ಪ್ರೇಯಸಿಯನ್ನೇ ಗಿಫ್ಟ್ ನೀಡಿದ – ಸಿನಿಮಾ ಸ್ಟೋರಿಗೂ ಮೀರಿಸುವಂತಿದೆ ತ್ಯಾಗಮಯಿ ಸ್ನೇಹಿತನ ಕಥೆ..!
ಉತ್ತರ ಪ್ರದೇಶದಲ್ಲಿ ಒಂದು ವಿಚಿತ್ರ ಕಳ್ಳತನ ಘಟನೆ ನಡೆದಿದೆ. ಅದು ಕೂಡಾ 17 ವರ್ಷದ ಹುಡುಗನೊಬ್ಬ ತನಗೆ ಕಳ್ಳತನ ಕಲಿಸಿದ ಗೆಳೆಯನಿಗೆ ಗುರುದಕ್ಷಿಣೆ ನೀಡಲು ಬೈಕ್ ಕದಿಯಲು ಹೋಗಿದ್ದಾನೆ. ಜೊತೆಗೆ ಕದಿಯಲು ಹೇಳಿಕೊಟ್ಟ ಗುರುವಿನ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ನೀಡಲು ಪ್ಲಾನ್ ಬೇರೆ ಮಾಡಿದ್ದಾನೆ. ಹೀಗಾಗಿ ಬೈಕ್ ಕದ್ದು ಗೆಳೆಯನಿಗೆ ಗಿಫ್ಟ್ ಆಗಿ ನೀಡಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದಾರೆ. ಬಾಲಾಪರಾಧ ಕಾಯ್ದೆಯಡಿ ಈ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಸ್ಎಚ್ಒ ವಿಕ್ರಮ್ ಸಿಂಗ್ ಮಾಹಿತಿ ನೀಡಿದ್ದಾರೆ. ತನ್ನ ಆತ್ಮೀಯ ಗೆಳೆಯನ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ಖರೀದಿಸಲು ಬೈಕ್ ಕದ್ದಿರುವುದಾಗಿ ಬಂಧಿತ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯ ಸ್ನೇಹಿತನ ವಿರುದ್ಧವೂ ಕಳ್ಳತನ ಪ್ರಕರಣವಿದ್ದು, ಆತನಿಗೂ ಎರಡು ದಿನಗಳ ಹಿಂದಷ್ಟೇ 18 ವರ್ಷ ತುಂಬಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈತನ ಸ್ನೇಹಿತನೇ ಕಳ್ಳತನದ ಬಗ್ಗೆ ಈತನಿಗೆ ತರಬೇತಿ ನೀಡಿದ್ದ, ಕಳ್ಳತನದ ಬಗ್ಗೆ ತನಗೆ ತಿಳಿದಿದ್ದ ಎಲ್ಲಾ ತಂತ್ರಗಳನ್ನು ತನಗಿಂತ ಸಣ್ಣವನಾದ ಅಪ್ರಾಪ್ತ ಬಾಲಕನಿಗೆ ಸ್ನೇಹಿತ ಹೇಳಿಕೊಟ್ಟಿದ್ದ. ಆತನ ಪಾಲಿಗೆ ಈ ಗೆಳೆಯ ಕಳ್ಳತನದ ವಿಚಾರದಲ್ಲಿ ಗುರುವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.