ಕುಮಾರಸ್ವಾಮಿ ಬುಡ ಗಡಗಡ ! ಕಾಂಗ್ರೆಸ್ ತಂತ್ರನಾ? JDS ಕೈವಾಡನಾ?
ಸ್ಟಿಂಗ್ KING ಯಾರು?

ಕುಮಾರಸ್ವಾಮಿ ಬುಡ ಗಡಗಡ !  ಕಾಂಗ್ರೆಸ್ ತಂತ್ರನಾ? JDS ಕೈವಾಡನಾ?ಸ್ಟಿಂಗ್ KING ಯಾರು?

ಕರ್ನಾಟಕ ರಾಜಕಾರಣದಲ್ಲಿ ಈಗ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ ದೊಡ್ಡ ಚರ್ಚೆಯಾಗಿದೆ. ಈ ಪ್ರಕರಣದಲ್ಲಿ ರಾಕೇಶ್ ಶೆಟ್ಟಿ, ಕೃಪಾ ಆಳ್ವಾ ಹೆಸರುಗಳನ್ನು ನೇರಾ ನೇರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಸಚಿ ಡಾ.ಯತೀಂದ್ರ ಸಿದ್ದರಾಮಯ್ಯ ಉಲ್ಲೇಖ ಮಾಡಿದ್ದಾರೆ. ಆದರೆ ಮೇಲಿಂದ ಮೇಲಿಂದ ಪ್ರೇಸ್‌ಮೀಟ್ ಮಾಡಿ ಇದರ ಸೂತ್ರದಾರಿ ಸಿಎಂ ಡಿಕೆ ಶಿವಕುಮಾರ್ ಅನ್ನೋ ಆರೋಪ ಮಾಡುತ್ತಿದ್ದ ಹೆಚ್‌ಡಿಕೆ ಬುಡಕ್ಕೆ ಈಗ ಸ್ಟಿಂಗ್‌ ಆಪರೇಷನ್‌ ಬಂದು ಕುಳಿತಂತಿದೆ..

ಸ್ಟಿಂಗ್ ಆಪರೇಷನ್ ಶುರುವಾಗಿದ್ದು ಹೇಗೆ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ 2011ರ ಘಟನೆಯೊಂದಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎನ್ನಲಾದ ವಿಡಿಯೋವೊಂದು ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಣವಾಗಿತ್ತು .ಈ ವಿಡಿಯೋದಲ್ಲಿ ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥ ರಾಕೇಶ್ ಶೆಟ್ಟಿ ಮತ್ತು ಕಾಂಗ್ರೆಸ್ ನಾಯಕಿಯಾಗಿದ್ದ ಕೃಪಾ ಆಳ್ವಾ ಕಾಣಿಸಿಕೊಂಡಿದ್ದರು. ಕೇರಳ ಮೂಲದ ಮಹಿಳೆಯೊಬ್ಬರನ್ನು ಮಾತನಾಡಿಸಿ, ಸಿದ್ದರಾಮಯ್ಯ ಅವರ ಜೊತೆಗಿನ ಸಂಬಂಧದ ಬಗ್ಗೆ ಹೇಳಿಕೆ ಪಡೆಯುವ ಪ್ರಯತ್ನ ನಡೆದಿತ್ತು. ಆದ್ರೆ ಇಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಹುಡುಗಿ ಜೊತೆ ಕಾಣಿಸಿಕೊಂಡಿರಲಿಲ್ಲ.. ಬದಲಿಗೆ ಇದು ಹಿಂದೆ ನಡೆದು ಹೋದ ಘಟನೆ ಎಂಬಂತೆ ಬಿಂಬಿಸಲಾಗಿತ್ತು.ಈ ಮೂಲಕ ಸಿದ್ದರಾಮಯ್ಯ ಹೆಸರನ್ನ ಎಳೆದುತರಲಾಗಿತ್ತು.

ಇನ್ನೂ ಈ ವಿಡಿಯೋ 2023ರಲ್ಲಿ ರೆಕಾರ್ಡ್ ಆಗಿದ್ರೂ ಎಲ್ಲೂ ಬಹಿರಂಗಗೊಂಡಿರಲಿಲ್ಲ.. ಆ ವೀಡಿಯೋ ರೆಕಾರ್ಡ್‌ ಮಾಡಿದವರು ತಮ್ಮ ಚಾನೆಲ್‌ನಲ್ಲಿ ಪ್ರಸಾರ ಮಾಡಿರಲಿಲ್ಲ. ಹಾಗಿದ್ದರೂ 2026ರ ಸೆಪ್ಟೆಂಬರ್ 27ರಂದು ಒಂದು ಯುಟ್ಯೂಬ್‌ ಖಾತೆಯ ಮೂಲಕ ಮೊದಲ ಬಾರಿಗೆ ಅಪ್‌ಲೋಡ್‌ ಆಗುತ್ತೆ.. ಅಷ್ಟೊತ್ತಿಗಾಗಲೇ ವೀಡಿಯೋ ಸಿದ್ದರಾಮಯ್ಯ ಅವರ ಬಳಿಗೂ ತಲುಪಿ, ಅವರು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿದ್ದರು ಮತ್ತು ವೀಡಿಯೋ ಪ್ರಸಾರ ಆಗದಂತೆ ತಡೆಯಲು ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದು ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ್ರು. ಇದರ ನಡುವೆ ಅಕ್ಟೋಬರ್‌ 6ರಂದು ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌, ತಮ್ಮ ಸಂಪುಟದ ಸಚಿವರಿಗೆ ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ಸಂಚು ನಡೆಯುತ್ತಿದೆ.. ನಿಮ್ಮಲ್ಲಿ ಕೆಲವರು ಟಾರ್ಗೆಟ್‌ ಆಗಬಹುದು.. ಹಾಗೆಯೇ ನನ್ನನ್ನೂ ಟಾರ್ಗೆಟ್‌ ಮಾಡಿದ್ದಾರೆ ಎಂದು ಎಚ್ಚರಿಕೆ ಕೊಟ್ಟಿದ್ದರು.. ಯಾವಾಗ ಡಿ.ಕೆ.ಶಿವಕುಮಾರ್‌ ಇಂತದ್ದೊಂದು ಎಚ್ಚರಿಕೆ ಕೊಟ್ಟರೋ, ಆಗ ಇದ್ದಕ್ಕಿದ್ದಂತೆ ಅಲರ್ಟ್‌ ಆದ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ಬಿಜೆಪಿ ನಾಯಕರು ಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ತಿರುಗಿಬಿದ್ದರು.. ಅಲ್ಲದೆ ಅದೇ ಹೊತ್ತಲ್ಲೇ,  ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್‌ ಆರೋಪದ ವೀಡಿಯೋ ವೈರಲ್‌ ಆಗತೊಡಗಿತು ಮತ್ತು ಇದೆಲ್ಲಾ ಡಿ.ಕೆ.ಶಿವಕುಮಾರ್‌ ಮಾಡಿಸಿದ್ದು ಎಂದು ಕೇಂದ್ರ ಸಚಿವ ಹೆಚ್‌ಡಿಕೆ ಆರೋಪಗಳ ಸುರಿಮಳೆ ಆರಂಭಿಸಿದ್ರು..

ಸುಳ್ಳ ಆರೋಪವೆಂದ ಸಿದ್ದರಾಮಯ್ಯ, ಯತೀಂದ್ರ

ಈ ವಿಡಿಯೋವನ್ನು ಸಂಪೂರ್ಣ ಸುಳ್ಳು ಮತ್ತು ತಮ್ಮ ವಿರುದ್ಧದ ಬ್ಲ್ಯಾಕ್‌ಮೇಲ್ ಪ್ರಯತ್ನ ಎಂದು ಸಿದ್ದರಾಮಯ್ಯ ಆರೋಪಿಸಿದರು. ವೀಡಿಯೋ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದು, ತಮ್ಮ ರಾಜಕೀಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ವಿಡಿಯೋ ಸೃಷ್ಟಿಸಿ ಹರಿಬಿಡಲಾಗಿದೆ. ಇದರ ಹಿಂದಿರುವವರನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು. ಇನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿ, ಇದೆಲ್ಲಾ ಸುಳ್ಳು ಅಂತ ಹೇಳಿದ್ರು..

ಸಿದ್ದರಾಮಯ್ಯ ಕೂಡ ರಾಕೇಶ್ ಶೆಟ್ಟಿ ಈ ಸ್ಟಿಂಗ್ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ, ಆದರೆ ಅದರಲ್ಲಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದರು..

ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವಾ ಪಾತ್ರವೇನು?

ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳೇ ರಾಕೇಶ್ ಶೆಟ್ಟಿ ಮತ್ತು ಕೃಪಾ ಆಳ್ವಾ.  2023ರಲ್ಲಿ ಈ ಸ್ಟಿಂಗ್ ಕಾರ್ಯಾಚರಣೆ ನಡೆಸಿದ್ದಾಗಿ ಸಿದ್ದರಾಮಯ್ಯ ಆರೋಪಿಸಿದ್ರು. ರಾಕೇಶ್ ಶೆಟ್ಟಿ ಈ ಸಂಬಂಧ ಪೊಲೀಸರ ವಿಚಾರಣೆಗೆ ಹಾಜರಾಗಿ , ಅಕ್ಟೋಬರ್ 23ರಂದು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಕೃಪಾ ಆಳ್ವಾ ಅವರು ಹಿಂದೆ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಪೊಲೀಸರ ವಿಚಾರಣೆಯಲ್ಲಿ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಕೆಲವು ವಿಚಾರಗಳನ್ನು ಬಹಿರಂಗಪಡಿಸಲು ಹೊರಟಿದ್ದಾರೆ ಎಂದು ಹೇಳಿದ್ದರಿಂದ ಅವರೊಂದಿಗೆ ಹೋಗಿದ್ದೆ. ಆದರೆ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ರು ಅನ್ನೋ ಮಾಹಿತಿ ಕೂಡ ಹೊರ ಬಂದಿತ್ತು.

ನಾನು ಸಿದ್ದರಾಮಯ್ಯರನ್ನ ಭೇಟಿ ಆಗಿಲ್ಲ ಎಂದಿದ್ದ ಮಹಿಳೆ

ಇನ್ನೊಂದೆಡೆ ವಿಡಿಯೋದಲ್ಲಿದ್ದ ಮಹಿಳೆ ಪೊಲೀಸರಿಗೆ ನೀಡಿರುವ ಹೇಳಿಕೆ ಇನ್ನಷ್ಟು ಕುತೂಹಲ ಮೂಡಿಸಿದೆ. ತಾನು ಸಿದ್ದರಾಮಯ್ಯ ಅವರನ್ನು ಎಂದಿಗೂ ಭೇಟಿಯಾಗಿಲ್ಲ. 2023ರಲ್ಲಿ ಕೆಲವರು ತನ್ನನ್ನು ಸಂಪರ್ಕಿಸಿ ಹಣ ನೀಡಿ, ಏನು ಮಾತನಾಡಬೇಕು ಎಂದು ಹೇಳಿಕೊಟ್ಟಿದ್ದರು ಎಂದು ಆಕೆ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ. Flow.. ಈ ಬೆಳವಣಿಗೆಯ ಬೆನ್ನಲ್ಲೇ ಅಕ್ಟೋಬರ್ 27ರಂದು ಕಾಂಗ್ರೆಸ್ ಪಕ್ಷ ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.

ಸಿಸಿಬಿ ತನಿಖೆಯಲ್ಲಿ ಸಿಕ್ಕಿದ್ದೇನು?

ಈ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದು ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗವಾದ ಸಿಸಿಬಿ. ಅಕ್ಟೋಬರ್ 29ರಂದು ಸಿಸಿಬಿ ನೀಡಿದ ಹೇಳಿಕೆಯ ಪ್ರಕಾರ, ವಿಡಿಯೋದಲ್ಲಿ ತೋರಿಸಿರುವ ದೌರ್ಜನ್ಯದ ಆರೋಪಗಳಿಗೆ ಇದುವರೆಗಿನ ತನಿಖೆಯಲ್ಲಿ ಯಾವುದೇ ಆಧಾರ ಸಿಕ್ಕಿಲ್ಲ. ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಸುಳ್ಳು ಆರೋಪ ಆಗಿರೋ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ರು..

ಹಾಗೇ ವಿಡಿಯೋದಲ್ಲಿರುವ ಎಲ್ಲರನ್ನೂ ಗುರುತಿಸಿ ವಿಚಾರಣೆ ನಡೆಸಲಾಗಿದೆ. ವಿಡಿಯೋ ಚಿತ್ರೀಕರಣಕ್ಕೆ ಬಳಸಿದ ಮೂಲ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಸಿಬಿ ಹೇಳಿತ್ತು. ಇನ್ನೊಂದು ಪ್ರಮುಖ ವಿಚಾರವೆಂದರೆ, ವಿಡಿಯೋ 2023ರಲ್ಲಿ ಚಿತ್ರೀಕರಣಗೊಂಡಿದ್ದರೂ, ಅದು 2011ರ ಘಟನೆಯ ಬಗ್ಗೆ ಮಾತನಾಡುತ್ತದೆ. ಅಂದರೆ ಸುಮಾರು 12 ವರ್ಷಗಳ ನಂತರ ಇಂತಹ ವಿಡಿಯೋ ಚಿತ್ರೀಕರಣ ಮಾಡಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ಯಾರು ಯೋಜನೆ ರೂಪಿಸಿದ್ದರು? ಈ ಕಟ್ಟುಕಥೆಯ ಸೃಷ್ಟಿಕರ್ತ ಯಾರು? ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ದೆಹಲಿಯಿಂದ ಕುಮಾರಸ್ವಾಮಿ ಮನೆವರೆಗೆ ತಲುಪಿದ ಮೊಬೈಲ್!

ಇಲ್ಲಿಂದಲೇ ಪ್ರಕರಣಕ್ಕೆ ಮತ್ತೊಂದು ದೊಡ್ಡ ರಾಜಕೀಯ ತಿರುವು ಸಿಕ್ಕಿದ್ದು. ವಿಡಿಯೋ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ದೆಹಲಿಯ ರಿತೇಶ್ ಪಾಂಡೆಯನ್ನು ಅಕ್ಟೋಬರ್ 24ರಂದು ಸಿಸಿಬಿ ಬಂಧಿಸಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆತ ನೀಡಿದ ಮಾಹಿತಿಯ ಪ್ರಕಾರ, ವಿನೋದ್ ಶರ್ಮಾ ಜೊತೆಗೂಡಿ ದೆಹಲಿಯ ಕರೋಲ್ ಬಾಗ್‌ನ ಮೊಬೈಲ್ ಅಂಗಡಿಯೊಂದರಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಲಾಗಿತ್ತು. ಆ ಮೊಬೈಲ್ ಅನ್ನು ನಂತರ ದೆಹಲಿಯ ಕುಶಕ್ ರಸ್ತೆಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಇದ್ದ ಜೆಡಿಎಸ್ ಸಾಮಾಜಿಕ ಜಾಲತಾಣ ತಂಡದ ಪ್ರಜ್ವಲ್ ಪ್ರಸಾದ್ ಅವರಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಇದು ರಿತೇಶ್ ಪಾಂಡೆ ಪೊಲೀಸರಿಗೆ ನೀಡಿರುವ ಹೇಳಿಕೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಡಿಕೆಶಿ ಮೇಲೆ ಆರೋಪ ಮಾಡುತ್ತಿದ್ದ ಹೆಚ್‌ಡಿಕೆ ಕಡೆ ಈಗ ಇಡೀ ಪ್ರಕರಣ ತಿರುಗಿದೆ.

 ನನ್ನ ಟಚ್‌ ಮಾಡೋಕೆ ಆಗಲ್ಲ ಎಂದ HDK

ಕನ್ನಡ ರಾಜ್ಯೋತ್ಸವದ ದಿನ HDK ದೆಹಲಿ ನಿವಾಸದಲ್ಲೇ ಸ್ಟಿಂಗ್‌ ಆಪರೇಷನ್‌ನಲ್ಲಿ ಬಳಸಿದ ಮೊಬೈಲ್‌ ಫೋನ್‌ ಎಕ್ಸ್‌ಚೇಂಜ್‌ ಆಗಿದೆ ಎಂದು ಸೀಮಂತ್‌ಕುಮಾರ್‌ ಸಿಂಗ್ ಹೇಳುತ್ತಿದ್ದಂತೆ ಎಚ್ಡಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೇಲರ್ ಅಷ್ಟೇ ಎಂದ ಪ್ರಿಯಾಂಕ್ ಖರ್ಗೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ಮತ್ತಷ್ಟು ರಾಜಕೀಯ ಕಿಡಿ ಹೊತ್ತಿಸಿದೆ.ಕುಮಾರಸ್ವಾಮಿ ಅವರ ನಿವಾಸಕ್ಕೆ ಮೊಬೈಲ್ ಫೋನ್ ತಲುಪಿರುವುದಕ್ಕೆ ಪೊಲೀಸರ ಬಳಿ ತಾಂತ್ರಿಕ ಸಾಕ್ಷ್ಯಗಳಿವೆ. ಇದು ಕೇವಲ ಊಹಾಪೋಹವಲ್ಲ, ಗಟ್ಟಿಯಾದ ಸಾಕ್ಷ್ಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಅತಿ ಹೆಚ್ಚು ವಿರೋಧಿಸಿದವರು ಕುಮಾರಸ್ವಾಮಿಯವರೇ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದನ್ನು ತಡೆದವರೂ ಅವರೇ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಪ್ರಿಯಾಂಕ್ ಖರ್ಗೆ ಇದೆಲ್ಲಾ ಟ್ರೇಲರ್ ಅಷ್ಟೇ ಎಂದು ಚುಚ್ಚುವ ಕೆಲಸ ಮಾಡಿದ್ದರು..

ಸುದ್ದಿಗೋಷ್ಟಿಯಲ್ಲಿ ಬಾಂಬ್ ಸಿಡಿಸಿದ HDK

ತಮ್ಮ ಮನೆಯಲ್ಲಿ ಮೊಬೈಲ್ ಎಕ್ಸಚೇಂಜ್ ಅನ್ನೋ ಆರೋಪ ಕೇಳಿಬರುತ್ತಿದ್ದಂತೆ ಇವತ್ತು ಸುದ್ದಿಘೋಷ್ಠಿ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ.. ನಮ್ಮ ಮನೆ ಬಾಗಿಲು ಓಪನ್ ಇರುತ್ತೆ, ಸರ್ಚ್‌ ವಾರೆಂಟ್ ಇದ್ರೆ ಬಂದು ಸರ್ಚ್ ಮಾಡಿ ಎಂದು  ಸವಾಲು ಹಾಕಿದ್ದಾರೆ. ಹಾಗೇ ಕಮಿಷನರ್‌ಗೆ ಕೂಡ ಎಚ್ಚರಿಕೆ ನೀಡಿದ್ದಾರೆ.

ಹೆಚ್‌ಡಿಕೆ ವಿರುದ್ಧ ಕ್ರಮಕ್ಕೆ ಯತೀಂದ್ರ ಆಗ್ರಹ

ತಂದೆಯವರ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿರುವ ಕುಮಾರಸ್ವಾಮಿಯವರ ಮೇಲೆ ಕಾನೂನಿನಂತೆ ಕ್ರಮವಾಗಲಿ ಎಂದು ಯತೀಂದ್ರ ಸಿದ್ದರಾಮಯ್ಯ ಟ್ವಿಟ್ ಮಾಡಿ ಆಗ್ರಹಿಸಿದ್ದಾರೆ.

ಒಂದು ಕಡೆ ಕಾಂಗ್ರೆಸ್ ಒಳಗಿನವರೇ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿಸಿದ್ದಾರೆ ಎಂಬ ಅನುಮಾನವಿದೆ.. ಯಾಕಂದ್ರೆ, ಕಟ್ಟುಕಥೆ ಎಂದು ಪೊಲೀಸರ ತನಿಖೆಯಿಂದ ಹೊರಬಿದ್ದಿರುವ ವೀಡಿಯೋದಲ್ಲಿ ಕಾಂಗ್ರೆಸ್‌ ನಾಯಕಿ ಕೃಪಾ ಆಳ್ವಾ ಇದ್ದರು.. ಹೀಗಾಗಿ ಕಟ್ಟುಕಥೆಯನ್ನು ಸೃಷ್ಟಿಸುವ ಉದ್ದೇಶ ಯಾರಿಗಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಆದರೆ ಈ ಕಟ್ಟುಕಥೆಯನ್ನು ಪ್ರಸಾರ ಮಾಡುವ ಮತ್ತು ಆ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ದೊಡ್ಡ ಬಿರುಕು ಮೂಡಿಸುವ ಪ್ರಯತ್ನಕ್ಕೆ ಜೆಡಿಎಸ್‌ ನಾಯಕರು ಕೈ ಹಾಕಿದ್ರಾ ಎಂಬ ಅನುಮಾನ ದಟ್ಟವಾಗುತ್ತಿದೆ. . ಯಾಕಂದ್ರೆ, ಇದುವರೆಗೆ ವೀಡಿಯೋ ಅಪ್‌ಲೋಡ್‌ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಆರೋಪಗಳು ಜೆಡಿಎಸ್‌ ಕಡೆಗೇ ಬೆರಳು ತೋರಿಸುತ್ತಿವೆ. ಅಲ್ಲದೆ ಜೆಡಿಎಸ್ ನಾಯಕರ ಮನೆಗೆ ಮೊಬೈಲ್ ತಲುಪಿದೆ ಎಂಬ ಪೊಲೀಸ್ ತನಿಖೆಯ ಮಾಹಿತಿಯೂ ಇದೆ.. ಆದರೆ ನಾನು ಇದ್ಯಾವುದಕ್ಕೂ ಹೆದರೋದಿಲ್ಲ ಎಂದು ಕುಮಾರಸ್ವಾಮಿ ಅಬ್ಬರಿಸುತ್ತಿದ್ದಾರೆ.. ಅಂತಿಮವಾಗಿಇಲ್ಲಿ ಕೆಲವು ಪ್ರಶ್ನೆಗಳು ಉಳಿದಿವೆ.. ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆಯನ್ನು ರೂಪಿಸಿದ್ದು ಯಾರು? ಅದನ್ನು ವೈರಲ್ ಮಾಡಿಸಿದ್ದು ಯಾರು? ಮತ್ತು ಇದರ ಹಿಂದೆ ನಿಜವಾಗಿಯೂ ರಾಜಕೀಯ ಸಂಚು ಇದೆಯೇ? ಅನ್ನೋದು.

Kishor KV

Leave a Reply

Your email address will not be published. Required fields are marked *