ಶಾಸಕರ ವಿರುದ್ಧ ವರ್ಗಾವಣೆ ಆರೋಪ ಮಾಡಿ ವಾಟ್ಸಾಪ್ ನಲ್ಲಿ ಸ್ಟೇಟಸ್ – ಮಹಿಳಾ ಪೇದೆಯನ್ನ ಅಮಾನತು ಮಾಡಿದ ಎಸ್ ಪಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳಾಗುತ್ತಿದೆ. ಈಗಾಗಲೇ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡಲಾಗುತ್ತಿದೆ. ಅದರಲ್ಲೂ ವರ್ಗಾವಣೆ ದಂಧೆ ಮತ್ತು ಕಮಿಷನ್ ಆರೋಪ ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ರಾಜಕೀಯ ದ್ವೇಷದ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿ ಕೆಎಸ್ ಆರ್ ಟಿಸಿ ಚಾಲಕ ಜಗದೀಶ್ ಎಂಬುವವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಲತಾ ಎಂಬ ಪೊಲೀಸ್ ಪೇದೆಯೊಬ್ಬರು ಕಡೂರಿನ ಶಾಸಕರಾದ ಕೆ.ಎಸ್ ಆನಂದ್ ಅವರು ತಮ್ಮನ್ನು ದ್ವೇಷ ರಾಜಕಾರಣದ ಮೇರೆಗೆ ವರ್ಗಾವಣೆ ಮಾಡಿಸಿದ್ದಾರೆ ಎಂದು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿ ಆರೋಪಿಸಿದ್ದಾರೆ. ಅದರ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : BBMP ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ – ಮೂವರು ಡಿ ಗ್ರೂಪ್ ನೌಕರರು ವಶಕ್ಕೆ
ಸಚಿವ ಚಲುವರಾಯಸ್ವಾಮಿ ಬಳಿಕ ಈ ಬಾರಿ ಈ ಆರೋಪಕ್ಕೆ ಒಳಗಾಗಿರುವುದು ಕಡೂರಿನ ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್. ಅವರ ಮೇಲೆ ದ್ವೇಷ ರಾಜಕಾರಣದ ಆರೋಪ ಮಾಡಿರುವುದು ಕಡೂರು ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬುವರು. ಇತ್ತೀಚೆಗೆ ಅವರನ್ನು ಕಡೂರು ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೊಂದು ದ್ವೇಷ ರಾಜಕಾರಣದ ವರ್ಗಾವಣೆ ಎಂದು ಆರೋಪಿಸಿ, ಲತಾ ಅವರು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ್ದಾರೆ. ಇದು ವೈರಲ್ ಆಗುತ್ತಲೇ, ಜಿಲ್ಲಾ ಪೊಲೀಸ್ ಆ ಮಹಿಳಾ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ವಾಟ್ಸ್ ಆ್ಯಪ್ ಸ್ಟೇಟಸ್ ಹಾಕುವುದಕ್ಕೂ ಮೊದಲು ಲತಾ ಅವರು ಕಡೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಜೊತೆಗೆ ವರ್ಗಾವಣೆ ಕುರಿತಂತೆ ಮಾತಿನ ಚಕಮಕಿ ನಡೆಸಿದ್ದರು ಎನ್ನಲಾಗಿದೆ. ಆನಂತರ, ಶಾಸಕರ ನಿವಾಸಕ್ಕೂ ತೆರಳಿ ಅಲ್ಲಿಯೂ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಅದೆಲ್ಲಾ ಆದ ನಂತರ ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ, ಕಡೂರು ಎಂ.ಎಲ್.ಎ.ಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದ್ರು ತೊಂದರೆ ಆದ್ರೆ ಎಂ.ಎಲ್.ಎ.ನೇ ಕಾರಣ ಎಂದು ಹಾಕುವ ಮೂಲಕ ಶಾಸಕರ ವಿರುದ್ಧ ನೇರವಾಗಿ ಸಮರಕ್ಕಿಳಿದಿದ್ದರು. ಆದರೆ, ಇದು ವೈರಲ್ ಆಗುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಉಮಾ ಪ್ರಶಾಂತ್ ಅವರು, ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ಎರ ಚುನಾವಣೆ ಸಂದರ್ಭದಲ್ಲಿ, ಕಡೂರಿನಲ್ಲಿ ಬೈಕ್ ನ ಮೇಲೆ ಹೆಲ್ಮೆಟ್ ಇಲ್ಲದೆ ತಿರುಗಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆ ಲತಾ ಅವರು ನಿಲ್ಲಿಸಿ, ಅವರಿಗೆ ದಂಡ ಹಾಕಿದ್ದರು ಎನ್ನಲಾಗಿದೆ. ಇದಾದ ನಂತರ, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆನಂದ್ ಅವರು, ಠಾಣೆಗೆ ಹೋಗಿ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಇದೀಗ ಶಾಸಕರಾಗಿ ಗೆದ್ದು ಬಂದ ನಂತರ ಪೇದೆ ಲತಾ ಅವರನ್ನು ಕಡೂರು ಪೊಲೀಸ್ ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದು ಇದೇ ಈ ಪ್ರಕರಣಕ್ಕೆ ಮೂಲ ಕಾರಣ ಎಂದು ಮೂಲಗಳು ತಿಳಿಸಿವೆ.