ಸರ್ಕಾರದ ವೈಫಲ್ಯಗಳಿಂದಾಗಿ ರಾಜ್ಯದ ಅಭಿವೃದ್ಧಿ ರಿವರ್ಸ್ ಗೇರ್‌ನಲ್ಲಿದೆ – ಬಿಜೆಪಿ ಕಿಡಿ
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಕುರ್ಚಿ ತಿಕ್ಕಾಟ, ಒಳಜಗಳಗಳು ಮುಗಿಯುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಸಾಲು ಸಾಲು ವೈಫಲ್ಯಗಳು ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಮತ್ತೆ ಶುರುವಾಯ್ತು ವ್ಯಾಪಾರ ಧರ್ಮ ದಂಗಲ್! – ಅನ್ಯಧರ್ಮೀಯರಿಗೆ ಜಾತ್ರೆಗಳಲ್ಲಿ ವಹಿವಾಟು ನಿಷೇಧ?
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಎಟಿಎಂ ಸರ್ಕಾರದಲ್ಲಿ ಶಾಸಕ-ಸಚಿವರ ಒಳಜಗಳಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸ್ವಪಕ್ಷೀಯ ಶಾಸಕರನ್ನೇ ನಿರ್ಲಕ್ಷಿಸುವ ಸಚಿವರುಗಳು, ಇನ್ನು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೆಯೇ..? ಭ್ರಷ್ಟಾಚಾರ, ವರ್ಗಾವಣೆ ದಂಧೆ, ಒಳಜಗಳ, ಕುರ್ಚಿ ತಿಕ್ಕಾಟ, ಹೀಗೆ ಕಾಂಗ್ರೆಸ್ ಸರ್ಕಾರದ ಸಾಲು ಸಾಲು ವೈಫಲ್ಯಗಳು ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದೆ ಎಂದು ಟೀಕಿಸಿದೆ.
ಭ್ರಷ್ಟಾಚಾರದ ಆರೋಪದಡಿ ಸೂಕ್ತ ಸಾಕ್ಷಿಗಳು ದೊರೆತರೂ, ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಎಟಿಎಂ ಸರ್ಕಾರ, ತನ್ನ ತಪ್ಪುಗಳ ಬಗ್ಗೆ ಪ್ರಶ್ನಿಸುವವರನ್ನು ಶಿಕ್ಷಿಸಲು ಸದಾ “ಸಿದ್ದ”ವಾಗಿರುತ್ತದೆ. ಸರ್ಕಾರದ ಜನವಿರೋಧಿ ನೀತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವವರ ಮೇಲೆ ಎಫ್.ಐ.ಆರ್ ಮಾಡಿದ್ದಾಯ್ತು. ಈಗ ಸರ್ಕಾರದ ಲಂಚಗುಳಿತನವನ್ನು ಬಹಿರಂಗಪಡಿಸಿದರು ಎಂಬ ಕಾರಣಕ್ಕೆ ಗುತ್ತಿಗೆದಾರರ ವಿರುದ್ಧ ಸಹ ಎಫ್.ಐ.ಆರ್ ದಾಖಲಿಸಿ ತನ್ನ ದ್ವೇಷದ ರಾಜಕಾರಣವನ್ನು ಪ್ರದರ್ಶಿಸುತ್ತಿದೆ. ಸರ್ಕಾರದ ಈ ಭಂಡತನಕ್ಕೆ ಕೊನೆ ಎಂದು..? ಎಂದು ಪ್ರಶ್ನಿಸಿ, ಬಾಕಿ ಬಿಲ್ ಪಾವತಿಸಲು ಒತ್ತಾಯಿಸಿದ ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ವಿಚಾರದ ಬಗ್ಗೆ ಬಿಜೆಪಿ ಪ್ರಶ್ನಿಸಿದೆ.