ಕಟೀಲ್ ರಾಜೀನಾಮೆ ಕೊಟ್ಟಿಲ್ಲ ಅಂದ್ರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕರ ತೆರೆಮರೆ ಕಸರತ್ತು

ಕಟೀಲ್ ರಾಜೀನಾಮೆ ಕೊಟ್ಟಿಲ್ಲ ಅಂದ್ರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕರ ತೆರೆಮರೆ ಕಸರತ್ತು

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಬಿಜೆಪಿಯಲ್ಲಿ ಸೋಲಿನ ಹೊಣೆಗಾರಿಕೆ ಚರ್ಚೆ ಶುರುವಾಗಿತ್ತು. ಹಾಗೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ರನ್ನ ಕೆಳಗಿಳಿಸಲಾಗುತ್ತೆ ಎನ್ನುವ ಸುದ್ದಿ ಹರಿದಾಡಿತ್ತು. ಇವತ್ತು ಕೂಡ ಕಟೀಲ್ ರಾಜೀನಾಮೆ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇದಾದ ಬಳಿಕ ಕಟೀಲು ನಾನು ರಾಜೀನಾಮೆ ಕೊಡೋದಾಗಿ ಹೇಳಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ರು. ಅದರ ಹೊರತಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ತೆರೆಮರೆಯಲ್ಲಿ ಪೈಪೋಟಿ ನಡೆಯಲಾರಂಭಿಸಿದೆ. ಈ ಪ್ರಮುಖ ಸ್ಥಾನಕ್ಕೆ ಮಾಜಿ ಸಚಿವರಾದ ಸಿಎನ್ ಅಶ್ವತ್ಥ ನಾರಾಯಣ, ಆರ್. ಅಶೋಕ್, ಬಿ. ಶ್ರೀರಾಮುಲು ಮುಂತಾದವರ ಹೆಸರುಗಳು ಕೇಳಿಬಂದಿವೆ.

ಇದನ್ನೂ ಓದಿ : ‘ಹೆಚ್ಚಿನ ಸ್ಥಾನಮಾನದ ಭರವಸೆ ನೀಡಿದ್ದರು’ – ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್

ರಾಜಕೀಯದಲ್ಲಿ ಯಾರಿಗೆ ಯಾವ ಸ್ಥಾನ ನೀಡಬೇಕಾದರೂ ಅಲ್ಲಿ ಜಾತಿ ರಾಜಕೀಯ ಇದ್ದೇ ಇರುತ್ತದೆ. ಇದೀಗ ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿಯೂ ಜಾತಿ ಲೆಕ್ಕಾಚಾರಗಳು ಕೆಲಸ ಮಾಡಲಾರಂಭಿಸಿವೆ. ಈ ಬಾರಿ, ಬಿಜೆಪಿಗೆ ಲಿಂಗಾಯತ ಮುಖಂಡರೊಬ್ಬರಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬ ಬೇಡಿಕೆ ಕೇಳಿಬಂದಿದೆ ಎಂದು ಹೇಳಲಾಗಿದೆ. ಅದೇ ವಿಚಾರದಡಿ ಮಾಜಿ ಸಚಿವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಒಕ್ಕಲಿಗ ಕೋಟಾದಿಂದ ಮಾಜಿ ಸಚಿವರಾಜ ಅಶ್ವತ್ಥ ನಾರಾಯಣ, ಆರ್. ಅಶೋಕ್ ಅವರ ಹೆಸರುಗಳು ಕೇಳಿರುತ್ತಿವೆ. ಇವರಿಬ್ಬರ ನಾಯಕತ್ವ ಗುಣಗಳು, ಸಂಘಟನಾತ್ಮಕ ಗುಣವಿರುವುದರ ಬಗ್ಗೆಯೂ ಚರ್ಚೆಗಳಾಗಿವೆ. ಒಕ್ಕಲಿಗ ಸಮುದಾಯದವರಿಗೆ ಪಕ್ಷದ ಪ್ರಮುಖ ಸ್ಥಾನ ಕೊಟ್ಟರೆ ಅದು ಮೈಸೂರು, ಮಂಡ್ಯ, ಹಾಸನ ಭಾಗಗದಲ್ಲಿ ಬಿಜೆಪಿ ಪರವಾಗಿ ಒಂದಿಷ್ಟು ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವಿದೆ. ಒಕ್ಕಲಿಗರನ್ನು ಪಕ್ಷದ ಅಧ್ಯಕ್ಷರನ್ನಾಗಿಸುವುದಾದರೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಿ.ಟಿ. ರವಿ ಅವರ ಹೆಸರುಗಳೂ ಕೇಳಿಬಂದಿವೆ.

ಅಷ್ಟೇ ಅಲ್ಲದೆ ಒಬಿಸಿ ಸಮುದಾಯದ ಸುನೀಲ್ ಕುಮಾರ್, ಪರಿಶಿಷ್ಟ ವರ್ಗಕ್ಕೆ ಸೇರಿದ ಬಿ. ಶ್ರೀರಾಮುಲು ಅವರ ಹೆಸರು ಕೇಳಿಬಂದಿವೆ. ಇವರಲ್ಲಿ ಸುನಿಲ್ ಕುಮಾರ್ ಅವರು ಕಾರ್ಕಳದವರು. ಈಗಾಗಲೇ ಅದೇ ಭಾಗದ ನಳಿನ್ ಕುಮಾರ್ ಅವರಿಗೆ ಈ ಸ್ಥಾನ ನೀಡಲಾಗಿದೆ, ಮೇಲಾಗಿ ದಕ್ಷಿಣ ಕನ್ನಡದಲ್ಲಿ ಪುನಃ ಅವರಿಗೇ ಆ ಸ್ಥಾನ ಕೊಡಲು ಪಕ್ಷದ ಹೈಕಮಾಂಡ್ ಗೆ ಮನಸ್ಸಿನಲ್ಲ. ಅವರಿಗಿಂತ ಶ್ರೀರಾಮುಲು ಅವರಿಗೆ ಪಕ್ಷದ ಜವಾಬ್ದಾರಿ ಕೊಟ್ಟರೆ ಅದು ಬಯಲು ಸೀಮೆಯಲ್ಲಿ ಹಾಗೂ ಬಳ್ಳಾರಿ, ರಾಯಚೂರಿನಲ್ಲಿ ಬಿಜೆಪಿಯನ್ನು ಪುನಃ ಸಂಘಟಿಸಲು ಅನುಕೂಲವಾಗಬಹುದು ಎಂಬ ಅಂದಾಜಿದೆ.

ಲಿಂಗಾಯತ ಸಮುದಾಯದವರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ಕೊಡಬೇಕು ಎಂಬ ವಾದಕ್ಕೆ ಮಣೆ ಹಾಕುವುದಾದರೆ, ಪಕ್ಷದ ಲಿಂಗಾಯತ ನಾಯಕರ ಪೈಕಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಇದೇ ವೇಳೆ, ಮಾಜಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಅಧ್ಯಕ್ಷರ ಸ್ಥಾನವನ್ನು ಬಹಿರಂಗವಾಗಿಯೇ ಕೇಳಿದ್ದಾರೆ. ಅದಕ್ಕೆ ಮತ್ತೊಬ್ಬ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು, ಟಾಂಗ್ ಕೊಟ್ಟಿದ್ದೂ ಆಗಿದೆ. ಕಂಡಕಂಡವರಿಗೆಲ್ಲಾ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯನ್ನು ಕೊಡಲಾಗದು ಎಂದು ಹೇಳಿದ್ದಾರೆ. ಆದರೆ, ಸೋಮಣ್ಣನವರ ಮೇಲೆ ಹೈಕಮಾಂಡ್ ಗೆ ಅನುಕಂಪವಿರುವುದರಿಂದ ಅದು ವರ್ಕೌಟ್ ಆಗಬಹುದೇನೋ ನೋಡಬೇಕಿದೆ.

ಇದೆಲ್ಲದರ ನಡುವೆಯೇ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಮಾಜಿ ಸಿಎಂ ಬೊಮ್ಮಾಯಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೆ, ಬಿಎಸ್ ವೈ ಹಾದಿ ಸುಗಮವಾಗಲಿದೆ. ಜೊತೆಗೆ, ಹೈಕಮಾಂಡ್ ನಲ್ಲಿ ಯಡಿಯೂರಪ್ಪನವರ ಮಾತು ನಡೆಯುತ್ತದೆ. ಇಷ್ಟಾದರೂ, ವಿಜಯೇಂದ್ರ ಅವರಿಗೆ ವಯಸ್ಸು ಚಿಕ್ಕದಿರುವುದು ಹಾಗೂ ಅವರಿಗಿಂತ ಹಿರಿಯರು ಇದ್ದರೂ ಅವರ ಮುಂದೆ ಚಿಕ್ಕವರಿಗೆ ಮಣೆ ಹಾಕುವುದು ಎಷ್ಟು ಸರಿ ಎಂಬ ಚರ್ಚೆಗಳೂ ಹೈಕಮಾಂಡ್ ನಲ್ಲಿ ನಡೆಯುತ್ತಿವೆ ಎಂದು ಹೇಳಲಾಗಿದೆ. ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಅದು ಲಿಂಗಾಯತ ಎಂಬ ಕಾರಣಕ್ಕಾಗಿಯೇ ಕೊಡಬೇಕಷ್ಟೇ ಎಂದು ಹೇಳಲಾಗುತ್ತಿದೆ.

suddiyaana