ಸರ್ಕಾರದಿಂದ ಕಾಶಿ ಯಾತ್ರಾರ್ಥಿಗಳಿಗೆ 9 ದಿನಗಳ ಪ್ಯಾಕೇಜ್ – 5,000 ರೂಪಾಯಿ ಇದ್ದ ಸಹಾಯಧನ 7,500ಕ್ಕೆ ಹೆಚ್ಚಳ
ಕರ್ನಾಟಕದ ಕಾಶಿಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮೂರು ಯಾತ್ರಾ ಸ್ಥಳಗಳ ಜತೆಗೆ ಈಗ ಮತ್ತೊಂದು ಯಾತ್ರಾ ಸ್ಥಳವನ್ನೂ ಸೇರ್ಪಡೆ ಮಾಡಲಾಗಿದೆ. ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ರೈಲು ಯಾತ್ರೆ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಗೆ ಈ ಬಾರಿ ಬಿಹಾರದ ಗಯಾ ಕ್ಷೇತ್ರವನ್ನೂ ಸೇರಿಸಿದೆ. ಜೊತೆಗೆ 5,000 ರೂಪಾಯಿ ಇದ್ದ ಸಹಾಯಧನವನ್ನು 7,500 ರೂಪಾಯಿಗೆ ಏರಿಸಿದೆ.
ಇದನ್ನೂ ಓದಿ: ಕಾಶಿಯಾತ್ರೆ ಯೋಜನೆ ಮುಂದುವರೆಸಿದ ಕಾಂಗ್ರೆಸ್ ಸರ್ಕಾರ – ಎಲ್ಲಿಂದ ಹೊರಡಲಿದೆ ನಾಲ್ಕನೇ ಟ್ರಿಪ್?
ಈ ಕುರಿತಂತೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಿ, 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
8 ದಿನಗಳಿದ್ದ ಪ್ರವಾಸದ ಅವಧಿ 9 ದಿನಗಳವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಹಿಂದೆ 20 ಸಾವಿರ ರೂ. ಇದ್ದ ಪ್ಯಾಕೇಜ್ ಯಾತ್ರಾ ದರವನ್ನು 22,500 ರೂ.ಗೆ ಏರಿಕೆ ಮಾಡಲಾಗಿದೆ. ಆದರೆ, ಯಾತ್ರಾರ್ಥಿಗಳು ಈ ಹಿಂದೆ ನೀಡಿದಂತೆಯೇ 15 ಸಾವಿರ ರೂ. ಭರಿಸಬೇಕು. ಉಳಿದ 7,500 ರೂ.ಗಳನ್ನು ಸರಕಾರ ಭರಿಸಲಿದೆ. ಈ ವಿಸ್ತರಣೆಯು ಆ.29ರಂದು ಯಾತ್ರೆಗೆ ತೆರಳುವವರಿಂದಲೇ ಆರಂಭವಾಗಲಿದೆ ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಪ್ಯಾಕೇಜ್ ಯೋಜನೆಯಡಿ ಹೊಸದಾಗಿ ಎಲ್‌ಹೆಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜತೆಯಲ್ಲಿ ಸೇವಾ ನಿರತರಾಗಿರುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ತಿಂಗಳ 29 ರಂದು ಹೊರಡಲಿರುವ 5ನೇ ಟ್ರಿಪ್ ಸೆಪ್ಟೆಂಬರ್ 6ರಂದು ವಾಪಸ್ಸಾಗಲಿದೆ. ಅಂತೆಯೇ ಸೆ.23ರಂದು ಹೊರಡಲಿರುವ 6ನೇ ಟ್ರಿಪ್ ಅಕ್ಟೋಬರ್ 2ರಂದು ವಾಪಸ್ಸಾಗಲಿದೆ. ಈ ಯಾತ್ರೆಗೆ ಈವರೆಗೂ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ನಿಲ್ದಾಣಗಳಲ್ಲಿ ಪ್ರಯಾಣಿಕರ ಹತ್ತುವುದಕ್ಕೆ ಇಳಿಯುವುದಕ್ಕೆ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿದೆ.
ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನದ ವಸತಿ ಸಂಕೀರ್ಣ ನಿರ್ಮಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರಿಗೆ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆದು ಕೋರಲಾಗುವುದು. ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆರವರು ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ನಡುವೆ, ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯಗಳಿಗಾಗಿ ಸರಕಾರ ಬಿಡುಗಡೆ ಮಾಡುವ ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.