ನೇಪಾಳದಲ್ಲಿ ಕನ್ನಡಿಗರ ನೆರವಿಗೆ ತಂಡ ರಚಿಸಿದ ರಾಜ್ಯಸರ್ಕಾರ – ಪ್ರವಾಸಕ್ಕೆ ತೆರಳಿದ ಕನ್ನಡಿಗರು ಶೀಘ್ರದಲ್ಲೇ ವಾಪಸ್

ನೇಪಾಳದಲ್ಲಿ ಕನ್ನಡಿಗರ ನೆರವಿಗೆ ತಂಡ ರಚಿಸಿದ ರಾಜ್ಯಸರ್ಕಾರ – ಪ್ರವಾಸಕ್ಕೆ ತೆರಳಿದ ಕನ್ನಡಿಗರು ಶೀಘ್ರದಲ್ಲೇ ವಾಪಸ್

ನೇಪಾಳ ಹೊತ್ತಿ ಉರಿಯುತ್ತಿದೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಕನ್ನಡಿಗರ ಪಾಡು ಹೇಳತೀರದಾಗಿದೆ. ಕರ್ನಾಟಕ ಸರ್ಕಾರ ಕೂಡಾ ಕನ್ನಡಿಗರ ರಕ್ಷಣೆಗೆ ಧಾವಿಸಿದ್ದು, ಪ್ರವಾಸಕ್ಕೆ ಹೋದವರು ಶೀಘ್ರದಲ್ಲೇ ತವರಿಗೆ ವಾಪಸ್ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ:ಭುಗಿಲೆದ್ದ ಜನರ ಆಕ್ರೋಶ – ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ

ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಜನರ ಬದುಕು ದುಸ್ತರವಾಗಿದೆ. ಅದರಲ್ಲೂ ಪ್ರವಾಸಿಗರ ಪಾಡಂತು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಯಾಕೆಂದರೆ, ಸೆಪ್ಟೆಂಬರ್ 9ರ ರಾತ್ರಿ ಉದ್ರಿಕ್ತರು ಪ್ರವಾಸಿಗರು ಉಳಿದುಕೊಂಡಿರವು ಕಟ್ಟಡಗಳಿಗೂ ಬೆಂಕಿ ಹಚ್ಚಿದ್ದಾರೆ. ಇದಲ್ಲದೇ, ಕಠ್ಮಂಡು ವಿಮಾನ ನಿಲ್ದಾಣದಲ್ಲಿ 39 ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದಾರೆ. ಸದ್ಯ ಕನ್ನಡಿಗರು ನೇಪಾಳದಲ್ಲಿ ಸಿಲುಕಿರುವ ಸುರಕ್ಷಿತವಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇನ್ನು ಕಠ್ಮಂಡು ನಗರವನ್ನ ನೇಪಾಳಿ ಸೇನೆ ಸುತ್ತುವರಿದಿದ್ದು, ರಾಜಧಾನಿಯಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ. ಪ್ರವಾಸಿಗರು ಉಳಿದುಕೊಂಡಿರುವ ಹೊಟೇಲ್, ಲಾಡ್ಜ್ ಆವರಣದ ಗೇಟ್‌ಗಳನ್ನ ಬಂದ್‌ ಮಾಡುವಂತೆ ಸೂಚನೆ ನೀಡಿದೆ. ಟ್ರಾವೆಲ್ಸ್‌ ಮೂಲಕ ಪ್ರವಾಸ ಹೊರಟಿದ್ದ ಕನ್ನಡಿಗರ ತಂಡ ಶನಿವಾರ ವಾಪಸ್‌ ಬರುವ ನಿರೀಕ್ಷೆಯಲ್ಲಿದೆ. ಇವರಲ್ಲಿ ಇಶಾ ಫೌಂಡೇಶನ್‌ನಿಂದ 130 ಜನರೊಂದಿಗೆ ಬೆಂಗಳೂರಿನ ರಜನಿ ಮಸ್ಕಿ ಮತ್ತು ರಘುವೀರ್ ಯಾವಗಲ್ ದಂಪತಿ ಮಾನಸಸರೋವರಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಸದ್ಯ ನೇಪಾಳದಲ್ಲಿ ಭುಗಿಲೆದ್ದಿರುವ ಉದ್ವೇಗದಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಳ್ಳುವಂತಾಗಿದೆ. ಸದ್ಯ ಈ ಪ್ರವಾಸಿ ತಂಡದೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್‌ ಸಿಂಗ್ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆತರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಈ 39 ಮಂದಿ ಕನ್ನಡಿಗರಲ್ಲದೇ, 300ಕ್ಕೂ ಹೆಚ್ಚು ಮಂದಿ ಕನ್ನಡಿಗರು ನೇಪಾಳದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಕರ್ನಾಟಕ ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ.

Sulekha