ರಾಜ್ಯ ವಿಧಾನಸಭೆ ಚುನಾವಣೆ: ಇಂದಿನಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭ
ಬೆಂಗಳೂರು: ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಪ್ರಚಾರದ ಭರಾಟೆ ಹೆಚ್ಚಾಗಿದೆ. 2023ನೇ ಸಾಲಿನ ಸಾರ್ವತ್ರಿಕ ಚುನಾವಣೆಗೆ ಇಂದಿನಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದೆ.
ಇಂದಿನಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭವಾಗಲಿದ್ದು ಮೇ 6 ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬ್ಯಾಲೆಟ್ ಪೇಪರ್ ವೋಟಿಂಗ್ ಗೆ ಅವಕಾಶ ನೀಡಲಾಗಿದೆ. ಬ್ಯಾಲೆಟ್ ಪೇಪರ್ ವೋಟಿಂಗ್ ನಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲ ಚೇತನರಿಗೆ ಹಾಗೂ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿರುವ ಪೊಲೀಸ್, ಚುನಾವಣೆ ಸಿಬ್ಬಂದಿಗೆ ಇಂದಿನಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಮೇ 10 ರಂದು ಪ್ರವಾಸಿ ತಾಣಗಳು ಬಂದ್! – ಕಾರಣವೇನು ಗೊತ್ತಾ?
80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ಮತ ಚಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚುನಾವಣಾ ಅಯೋಗದ ಸಿಬ್ಬಂದಿಗಳು ಅವರ ಮನೆ ಬಾಗಿಲಿನಲ್ಲಿಯೇ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಗೌಪ್ಯ ಮತ ಚಲಾಯಿಸುವಾಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಹಾಜರಾಗಲಿದ್ದಾರೆ. ಮನೆಯಲ್ಲೇ ಮತದಾನ ಮಾಡುವಾಗ ವಿಡಿಯೋ ರೆಕಾರ್ಡಿಂಗ್ ಮಾಡಲಿದ್ದು, ಮತದಾನದ ನಂತರ ಸ್ಟ್ರಾಂಗ್ ರೂಮ್ ಗೆ ಮತ ಪೆಟ್ಟಿಗೆ ಶಿಫ್ಟ್ ಆಗಲಿದೆ.