ಕನ್ನಡಿಗರ ಬೆನ್ನಿಗೆ ನಿಂತ ಸ್ಟಾರ್ಸ್! – ಗೋಯೆಂಕಾ ವಿರುದ್ಧ ಆಕ್ರೋಶ!
ಲಕ್ನೋ ಮತ್ತು ಹೈದ್ರಾಬಾದ್ ವಿರುದ್ಧದ ಮ್ಯಾಚ್ ಮುಗಿದು ಮೂರು ದಿನ ಕಳೆದ್ರೂ ಅದ್ರ ಬಿಸಿ ಮಾತ್ರ ಆರಿಲ್ಲ. ಸೋಶಿಯಲ್ ಮೀಡಿಯಾಗಳಲ್ಲೂ ಆಕ್ರೋಶ ತಣಿದಿಲ್ಲ. ಅದಕ್ಕೆ ಕಾರಣ ಎಲ್ಎಸ್ಜಿ ಫ್ರಾಂಚೈಸಿ ಮಾಲೀಕನ ದರ್ಪ. ತಂಡ ಸೋತಿದ್ದಕ್ಕೆ ನಾಯಕ ಕೆ.ಎಲ್ ರಾಹುಲ್ರನ್ನ ಹೀನಾಯವಾಗಿ ನಡೆಸಿಕೊಂಡ ಸಂಜೀವ್ ಗೋಯೆಂಕಾ ವಿರುದ್ಧ ಇದೀಗ ದೇಶವ್ಯಾಪಿ ಆಕ್ರೋಶ ಭುಗಿಲೆದ್ದಿದೆ. ಬಾಲಿವುಡ್ ಸ್ಟಾರ್ಸ್, ಕ್ರಿಕೆಟರ್ಸ್, ಫ್ಯಾನ್ಸ್ ಎಲ್ರೂ ಕೂಡ ಗೋಯೆಂಕಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ರಾಹುಲ್ ಬೆನ್ನಿಗೆ ನಿಂತಿರೋ ಕೋಟ್ಯಂತರ ಜನ ಬಾಯ್ಕಾಟ್ ಎಲ್ಎಸ್ಜಿ ಟ್ರೆಂಡ್ ಆರಂಭಿಸಿದ್ದಾರೆ. ಗೋಯೆಂಕಾ ಹುಚ್ಚಾಟಕ್ಕೆ ಇಡೀ ತಂಡವೇ ಬ್ಯಾನ್ ಆಗುತ್ತಾ..? ಕೆ.ಎಲ್ ರಾಹುಲ್ ಬೆನ್ನಿಗೆ ನಿಂತವರ್ಯಾರು? ಎಲ್ಎಸ್ಜಿ ಪ್ಲೇ ಆಫ್ಗೆ ಹೋಗೋದೇ ಇಲ್ವಾ..? ಈ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: 4 ಪಂದ್ಯ ಗೆಲುವು.. 2 ಸವಾಲು – RCB ಪ್ಲೇ ಆಫ್ ಹಾದಿ ತೆರೆಯಿತಾ?
ಕೆ.ಎಲ್ ರಾಹುಲ್. ಕರ್ನಾಟಕದ ಕ್ರಿಕೆಟಿಗ. ಟೀಂ ಇಂಡಿಯಾ ಕಂಡ ದಿಗ್ಗಜ ಆಟಗಾರರ ಪೈಕಿ ರಾಹುಲ್ ಕೂಡ ಒಬ್ರು. ಅದೆಷ್ಟೋ ಸಂದರ್ಭಗಳಲ್ಲಿ ಏಕಾಂಗಿಯಾಗಿ ನಿಂತು ಟೀಂ ಇಂಡಿಯಾ ಪರ ರನ್ ಮಳೆ ಹರಿಸಿ ತಂಡವನ್ನ ಗೆಲ್ಲಿಸಿದ್ದಾರೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಎಲ್ಎಸ್ಜಿ ತಂಡವನ್ನ ಮುನ್ನಡೆಸುತ್ತಿದ್ದಾರೆ. 2022ನೇ ಆವೃತ್ತಿಯಲ್ಲಿ ಐಪಿಎಲ್ ಸೇರಿದ್ದ ಈ ತಂಡವನ್ನ ಎರಡು ಬಾರಿ ಪ್ಲೇಆಫ್ಗೆ ಕೊಂಡೊಯ್ದಿದ್ದಾರೆ. ಹಾಗೇ ಈ ವರ್ಷ ಕೂಡ ಪ್ಲೇಆಫ್ ರೇಸ್ನಿಂದ ಇನ್ನೂ ಹೊರ ಬಿದ್ದಿಲ್ಲ. ಆದ್ರೂ ಮೇ 8ರಂದು ಹೈದ್ರಾಬಾದ್ ವಿರುದ್ಧ ಲಕ್ನೋದ ಸೋಲನ್ನ ಅರಗಿಸಿಕೊಳ್ಳಲಾಗದ ಮಾಲೀಕ ಸಂಜೀವ್ ಗೋಯೆಂಕಾ ನಾಲಗೆ ಹರಿಬಿಟ್ಟಿದ್ದರು. ಗ್ರೌಂಡ್ನಲ್ಲೇ ಕೂಗಾಡಿದ್ದರು. ಗೋಯೆಂಕಾ ವರ್ತನೆಗೆ ದೊಡ್ಡ ಮಟ್ಟದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಎಲ್ಎಸ್ಜಿ ಫ್ರಾಂಚೈಸಿ ಮಾಲೀಕನ ಮೊಂಡಾಟಕ್ಕೆ ತಲೆ ತಗ್ಗಿಸಿ ನಿಂತಿದ್ದ ನಾಯಕ ಕೆ.ಎಲ್ ರಾಹುಲ್ ಪರ ಇಡೀ ಕರುನಾಡೇ ನಿಂತಿದೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ಮೇರು ನಟರು, ಕ್ರಿಕೆಟ್ ಲೋಕದ ದಿಗ್ಗಜರು ಸಪೋರ್ಟ್ ಮಾಡ್ತಿದ್ದಾರೆ.
ಕನ್ನಡಿಗರ ಬೆನ್ನಿಗೆ ನಿಂತ ಸ್ಟಾರ್ಸ್!
ಲಕ್ನೋ ತಂಡದ ಮಾಜಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಕೆ.ಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಅದೂ ಕೂಡ ಗೋಯೆಂಕಾ ಹೆಸರನ್ನೂ ಪ್ರಸ್ತಾಪಿಸದೇ ಹಾಲಿ ತಂಡದ ಮಾಲೀಕ ಶಾರುಖ್ ಖಾನ್ ಅವರನ್ನು ಉದಾಹರಣೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ದೇಶದಲ್ಲಿ ತಜ್ಞರು ಮತ್ತು ತಂಡದ ಮಾಲೀಕರು ಕೇವಲ ಒಂದು ನಿಮಿಷ ಪಂದ್ಯವನ್ನು ವೀಕ್ಷಿಸಿದ ನಂತರ ಟೀಕೆ ಮಾಡ್ತಾರೆ. ಆದ್ರೆ ಅಂತಹ ಪ್ರೆಶರ್ ಅನ್ನ ಅನುಭವಿಸಿದಾಗ್ಲೇ ಈ ರೀತಿಯ ಟೀಕೆ ಬರಬೇಕು. ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಅವರಿಗೆ ಈ ವಿಷಯಗಳು ತಿಳಿದಿವೆ. ಹೋರಾಟ ಮತ್ತು ಒತ್ತಡ ಏನು ಎಂದು ಅವರಿಗೆ ತಿಳಿದಿದೆ. ಗೆದ್ದಾಗ ಮತ್ತು ಸೋತಾಗಲೂ ತಂಡದ ಪರ ನಿಲ್ಲುತ್ತಾರೆ ಎಂದು ಸಂಜೀವ್ ಗೋಯೆಂಕಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಹಾಗೇ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಗೋಯೆಂಕಾ ವಿರುದ್ಧ ಕಿಡಿ ಕಾರಿದ್ದರು. ಎಲ್ಲರ ಮುಂದೆ ಈ ರೀತಿ ಮಾತನಾಡುವುದು ನಾಚಿಕೆಗೇಡಿನ ಸಂಗತಿ, ಡ್ರೆಸ್ಸಿಂಗ್ ರೂಮ್‌ನಲ್ಲೇ ಇದೆಲ್ಲಾ ನಡೆಯಬೇಕು ಎಂದಿದ್ದರು.
ಅಸಲಿಗೆ ಗಂಭೀರ್ ಮಾತು ಅಕ್ಷರಶಃ ನಿಜ. ಕೆಕೆಆರ್ ಈ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ಚಾಂಪಿಯನ್ ಆಗಲು ದೊಡ್ಡ ಸ್ಪರ್ಧಿಯಾಗಿದೆ. ಆದರೆ ಕಳೆದ ಕೆಲವು ಸೀಸನ್ನಲ್ಲಿ ಈ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಇದರ ಹೊರತಾಗಿಯೂ, ಶಾರುಖ್ ಖಾನ್ ತಮ್ಮ ತಂಡವನ್ನು ಬೆಂಬಲಿಸಿದ್ದರು. ಸೋಲಿನ ನಡುವೆಯೂ ತನ್ನ ಆಟಗಾರರನ್ನು ಮಾತ್ರವಲ್ಲದೆ ಎದುರಾಳಿಯ ಆಟಗಾರರನ್ನೂ ಅಪ್ಪಿಕೊಂಡು ಪ್ರೋತ್ಸಾಹ ನೀಡುತ್ತಿದ್ದರು. ಹಾಗೇ ನಮ್ಮ ಆರ್ಸಿಬಿ ಬಗ್ಗೆ ಅಂತೂ ಹೇಳಲೇಬೇಕು. 17 ಸೀಸನ್ನಿಂದ ಒಂದು ಸಲವೂ ಕಪ್ ಗೆಲ್ಲದಿದ್ರೂ ಫ್ರಾಂಚೈಸಿ ಮಾಲೀಕರು ಯಾವತ್ತೂ ಇಷ್ಟು ಕೀಳಾಗಿ ನಡೆದುಕೊಂಡಿಲ್ಲ. ಆಟಗಾರರನ್ನ ಕೆಳಮಟ್ಟದಲ್ಲಿ ನಡೆಸಿಕೊಂಡಿಲ್ಲ.
ಗೋಯೆಂಕಾ ವಿರುದ್ಧ ಆಕ್ರೋಶ!
ಲಕ್ನೋ ಮತ್ತು ಹೈದ್ರಾಬಾದ್ ನಡುವಣ ಪಂದ್ಯ ಮೇ 8ರಂದು ನಡೆದಿದ್ದೇ ಆದ್ರೂ ಸೋಶಿಯಲ್ ಮೀಡಿಯಾಗಳಲ್ಲಿ ಇಂದಿಗೂ ಸಹ ಸಂಜೀವ್ ಗೋಯಾಂಕರ ದರ್ಪದ ವಿಡಿಯೋಗಳು ಟ್ರೆಂಡಿಂಗ್ನಲ್ಲಿವೆ. ಕೆ.ಎಲ್ ರಾಹುಲ್ ಪರ ಟ್ರೆಂಡ್ ಶುರುವಾಗಿದೆ. ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್ ಪಂಡಿತರು ಕೂಡ ಸಂಜೀವ್ ಗೋಯೆಂಕಾ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ರಾಹುಲ್ರನ್ನು ಕೂಡಲೇ ತಂಡ ತೊರೆಯುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಈ ಘಟನೆಯಿಂದ ರಾಹುಲ್ ಕೂಡ ಸಾಕಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಲಕ್ನೋ ತಂಡದ ನಾಯಕತ್ವಕ್ಕೆ ಕೆ.ಎಲ್.ರಾಹುಲ್ ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ 2025ರ ಹರಾಜಿಗೂ ಫ್ರಾಂಚೈಸಿಯು ರಾಹುಲ್ರನ್ನ ತಂಡದಿಂದ ಕೈಬಿಡುವ ಬಗ್ಗೆ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ವರ್ಷಗಳಿಂದ್ಲೂ ಐಪಿಎಲ್ನಲ್ಲಿ ಆಡ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. 2022ರ ಹರಾಜಿಗೂ ಮುನ್ನ ರಾಹುಲ್ ರನ್ನು 17 ಕೋಟಿ ನೀಡಿ ಲಖನೌ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಸದ್ಯ ಐಪಿಎಲ್ ಸೀಸನ್ನಲ್ಲಿ ಭಾರತೀಯ ಕ್ರೀಡಾಪಟುಗಳಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರ ಅಂದ್ರೆ ಅದು ಕೆ.ಎಲ್ ರಾಹುಲ್. ಆದ್ರೆ ಎಲ್ಲೂ ಕೂಡ ಫ್ರಾಂಚೈಸಿಗಳ ಮಾಲೀಕರು ಈ ರೀತಿ ನಡೆದುಕೊಂಡಿರಲಿಲ್ಲ. ಅಷ್ಟೇ ಯಾಕೆ. ಐಪಿಎಲ್ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ತಂಡದ ನಾಯಕ ಕೆ ಎಲ್ ರಾಹುಲ್ 12 ಪಂದ್ಯಗಳನ್ನಾಡಿ 136ರ ಸ್ಟ್ರೈಕ್‌ರೇಟ್‌ನಲ್ಲಿ 460 ರನ್ ಸಿಡಿಸಿದ್ದಾರೆ. ಹೀಗಿದ್ರೂ ಒಂದೇ ಒಂದು ಸೋಲಿಗೆ ಕೆ.ಎಲ್ ರಾಹುಲ್ ತಲೆ ತಗ್ಗಿಸಬೇಕಾಗಿದೆ. ಕನ್ನಡಿಗ ರಾಹುಲ್ಗೆ ಆದ ಅವಮಾನಕ್ಕೆ ಸಿಟ್ಟಾಗಿರೋ ಕರ್ನಾಟಕದ ಜನ ಆರ್ಸಿಬಿಗೆ ಬರುವಂತೆ ಮನವಿ ಮಾಡ್ತಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಎಲ್ಎಸ್ಜಿ ಟ್ರೆಂಡ್ ಶುರು ಮಾಡಿದ್ದಾರೆ.