ಮುಂದಿನ 20 ವರ್ಷಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳೇ ಕಾಣಲ್ಲ! – ವಿಜ್ಞಾನಿಗಳು ಹೀಗೆ ಹೇಳಿದ್ದೇಕೆ?
ನವದೆಹಲಿ: ಕತ್ತಲಾಗುತ್ತಿದ್ದಂತೆ ಶುಭ್ರ ಆಕಾಶದಲ್ಲಿ ಗೋಚರಿಸುವ ತಾರೆಗಳನ್ನು ನೋಡುವುದೇ ಚೆಂದ. ಈ ಸುಂದರ ದೃಶ್ಯವನ್ನು ನೋಡಿ ಬೆರಗಾಗದೇ ಇರುವವರು ಇಲ್ಲ. ಆದರೆ ಈಗ ವಿಜ್ಞಾನಿಗಳು ನಕ್ಷತ್ರಗಳ ಬಗ್ಗೆ ಆತಂಕಕಾರಿ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳೇ ಕಾಣಿಸುವುದಿಲ್ಲ ಎಂದು ಬ್ರಿಟಿಷ್ ಖಗೋಳಶಾಸ್ತ್ರಜ್ಞ, ರಾಯಲ್ ಮಾರ್ಟಿನ್ ರೀಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಭೂಮಿಯಿಂದ 2.1 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿ ನಕ್ಷತ್ರ ಸ್ಫೋಟ – ಹೇಗಿದೆ ಗೊತ್ತಾ ಚಿತ್ತಾಕರ್ಷಕ ದೃಶ್ಯ?
ವರ್ಷದಿಂದ ವರ್ಷಕ್ಕೆ ಬೆಳಕಿನ ಮಾಲಿನ್ಯ ಹೆಚ್ಚುತ್ತಿದೆ. ಇದರಿಂದಾಗಿ ಮುಂದಿನ 20 ವರ್ಷಗಳಲ್ಲಿ ಆಕಾಶದಲ್ಲಿನ ನಕ್ಷತ್ರಗಳು ಅಗೋಚರವಾಗಲಿವೆ. ಮಾಲಿನ್ಯದಿಂದ ಅವುಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭೂಮಿ ಮೇಲೆ ರಾತ್ರಿ ವೇಳೆ ಅತೀ ಹೆಚ್ಚು ಪ್ರಕಾಶಮಾನವಾದ ಬೆಳಕು ಅಥವಾ ಲೈಟ್ ಗಳನ್ನು ಉರಿಸಲಾಗುತ್ತಿದೆ. ಇದರಿಂದಾಗಿ ರಾತ್ರಿ ವೇಳೆಯೂ ಬೆಳಕು ತುಂಬಿರುತ್ತವೆ. ಹೀಗಾಗಿ ಹಗಲಿನ ಬೆಳಕಲ್ಲಿ ನಮಗೆ ಹೇಗೆ ನಕ್ಷತ್ರಗಳು ಗೋಚರವಾಗುವುದಿಲ್ಲವೋ ಅದೇ ಸ್ಥಿತಿ ರಾತ್ರಿಯೂ ಮುಂದುವರೆಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಕಳೆದ ಹಲಾವರು ವರ್ಷಗಳಲ್ಲಿ ಬೆಳಕಿನ ಮಾಲಿನ್ಯವು ತೀವ್ರವಾಗಿದೆ. 2016 ರಿಂದ ಕ್ಷೀರಪಥವು ಪ್ರಪಂಚದ ಮೂರನೇ ಒಂದು ಭಾಗದಷ್ಟು ಜನರಿಗೆ ಗೋಚರವಾಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞರು ವರದಿ ಮಾಡಿದ್ದರು. ಮುಂದಿನ ಪೀಳಿಗೆಯ ಮಕ್ಕಳು ರಾತ್ರಿ ಆಕಾಶವನ್ನು ಅದರ ಪ್ರಕಾಶತೆ ಮತ್ತು ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ ಎಂಬುದು ಗಂಭೀರ ವಿಷಯವಾಗಿದೆ’ ಎಂದು ರಾಯಲ್ ಮಾರ್ಟಿನ್ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬೆಳಕಿನ ಮಾಲಿನ್ಯ ತೀರಾ ಹದಗೆಡುತ್ತಿದೆ. 2016 ರಿಂದ ಮೂರನೇ ಒಂದು ಭಾಗದಷ್ಟು ಮಿಲ್ಕಿ ವೇ ಮನುಷ್ಯರಿಗೆ ಗೋಚರಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಎಲ್‌ಇಡಿ ಬಲ್ಬ್ ಗಳು. ಇದರಿಂದ ಹೊರಸೂಸುವ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಈ ಬೆಳಕಿನ ಮಾಲಿನ್ಯವು ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ ಎಂದು ಅವರು ಹೇಳಿದ್ದಾರೆ.