IPL 2025ಕ್ಕೆ 10 ಜನ ನಿವೃತ್ತಿ? – ಧೋನಿ, ಡಿಕೆ, ಧವನ್.. ಮತ್ಯಾರು?
RCBಯ ಯಾರಿಗೆಲ್ಲಾ ಕೊನೇ ಸೀಸನ್?

IPL 2025ಕ್ಕೆ 10 ಜನ ನಿವೃತ್ತಿ? – ಧೋನಿ, ಡಿಕೆ, ಧವನ್.. ಮತ್ಯಾರು?RCBಯ ಯಾರಿಗೆಲ್ಲಾ ಕೊನೇ ಸೀಸನ್?

2024ರ ಐಪಿಎಲ್ ಟೂರ್ನಿಗೆ ತೆರೆ ಬಿದ್ದಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಮಣಿಸುವ ಮೂಲಕ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಈ ಮೂಲಕ 2 ತಿಂಗಳ ಭರ್ಜರಿ ಮನರಂಜನೆಗೆ ತೆರೆ ಬಿದ್ದಿದೆ. ಮತ್ತೊಂದೆಡೆ ಸೋತ ತಂಡಗಳು ಈ ಸಲ ಅಲ್ದಿದ್ರೂ ಮುಂದಿನ ಸಲ ಕಪ್ ಗೆಲ್ಲೋಣ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ ಮುಂದಿನ ವರ್ಷದ ಐಪಿಎಲ್​ಗೆ ಹಲವು ಆಟಗಾರರು ವಿದಾಯ ಹೇಳೋ ಸಾಧ್ಯತೆ ಇದೆ. 10ಕ್ಕೂ ಹೆಚ್ಚು ಪ್ಲೇಯರ್ಸ್​ಗೆ ಇದೇ ಕೊನೆಯ ಐಪಿಎಲ್ ಸೀಸನ್ ಆಗಿದೆ ಎನ್ನಲಾಗಿದೆ. ಅಷ್ಟಕ್ಕೂ 2025ರ ಟೂರ್ನಿಗೆ ಯಾವೆಲ್ಲಾ ನಾಯಕರು ನಿವೃತ್ತಿ ಆಗ್ತಾರೆ..? ರೇಸ್​ನಲ್ಲಿರೋ ಘಟಾನುಘಟಿ ಆಟಗಾರರು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಹೈಯೆಸ್ಟ್ ಸ್ಕೋರ್, ಹೈಯೆಸ್ಟ್ ಸಿಕ್ಸ್, ಹೈಯೆಸ್ಟ್ ಚೇಸ್, ಹೈಯಸ್ಟ್ 200+ ರನ್ಸ್.. ಅಬ್ಬಬ್ಬಾ ಒಂದಾ ಎರಡಾ.. ಐಪಿಎಲ್ 2024 ರ ಟೂರ್ನಿ ಹತ್ತಾರು ವಿಶೇಷತೆಗಳಿಗೆ ಕಾರಣವಾಗಿದೆ. ಅನೇಕ ಅಪರೂಪದ ದಾಖಲೆಗಳು ಸೇರಿದಂತೆ, ಫೈನಲ್ ಪಂದ್ಯ ಕೆಟ್ಟ ದಾಖಲೆಗೂ ಕಾರಣವಾಗಿದೆ. ಆದರೆ ಐಪಿಎಲ್ 2024ರ ಸೀಸನ್ ಕ್ರಿಕೆಟ್ ಲೋಕದ ಅನೇಕ ಲೆಜೆಂಡ್‌ಗಳಿಗೆ ಕೊನೆಯ ಸೀಸನ್ ಆಗಿರಲಿದೆ. ಎಂಎಸ್ ಧೋನಿ, ದಿನೇಶ್ ಕಾರ್ತಿಕ್ ಸೇರಿದಂತೆ ಹಲವು ಆಟಗಾರರು ಮುಂದಿನ ಸೀಸನ್‌ಗೂ ಮುನ್ನ ನಿವೃತ್ತಿ ಹೊಂದುವ ಸಾಧ್ಯತೆ ಇದೆ. ಅದ್ರಲ್ಲೂ ಕಳೆದ ಎರಡ್ಮೂರು ವರ್ಷಗಳಿಂದ ರಿಟೈರ್ಡ್​ಮೆಂಟ್ ರೇಸ್​ನಲ್ಲಿ ಫಸ್ಟ್ ಇರೋ ಹೆಸ್ರೇ ಕ್ರಿಕೆಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ.

  • ಮಹೇಂದ್ರ ಸಿಂಗ್ ಧೋನಿಚೆನ್ನೈ ಸೂಪರ್ ಕಿಂಗ್ಸ್

ಟೀಂ ಇಂಡಿಯಾ ಹಾಗೂ ಐಪಿಎಲ್​ ಕಂಡ ಶ್ರೇಷ್ಠ ಆಟಗಾರ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವ್ರಿಗೆ ಇದೇ ಲಾಸ್ಟ್ ಐಪಿಎಲ್ ಎನ್ನಲಾಗಿದೆ. 42 ವರ್ಷದ ಮಾಹಿ ನಿವೃತ್ತಿ ಕಾರಣಕ್ಕೆ ಈ ಬಾರಿ ರುತುರಾಜ್​ ಗಾಯಕ್ವಾಡ್​ಗೆ ಚೆನ್ನೈ ಸಾರಥ್ಯವನ್ನ ವಹಿಸಿದ್ರು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಚೆನ್ನೈ ತಂಡ ಬ್ಯಾನ್ ಆಗಿದ್ದ 2 ವರ್ಷಗಳನ್ನ ಹೊರತುಪಡಿಸಿ ಉಳಿದೆಲ್ಲಾ ಸೀಸನ್​ನಲ್ಲಿ ಚೆನ್ನೈ ಪರವಾಗಿ ಆಡಿರುವ ಧೋನಿ ಮುಂದಿನ ಸೀಸನ್​ನಿಂದ ಐಪಿಎಲ್​ನಲ್ಲಿ ಆಡೋದು ಡೌಟ್. 2023ರಲ್ಲಿ ನಾಯಕನಾಗಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಐದನೇ ಐಪಿಎಲ್‌ ಟ್ರೋಫಿಯನ್ನು ಗೆದ್ದುಕೊಟ್ಟಿದ್ದರು. ಈ ಸಲ ಕ್ಯಾಪ್ಟನ್ಸಿಯಿಂದ ಇಳಿದು ಆಡಿದ್ದ ಧೋನಿ, 220.55 ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಗಳಿಸಿದ್ರು. ಇದುವರೆಗೆ 264 ಐಪಿಎಲ್ ಪಂದ್ಯಗಳನ್ನ ಆಡಿರುವ ಧೋನಿ,  5,243 ರನ್ ಕಲೆ ಹಾಕಿದ್ದಾರೆ.

  • ದಿನೇಶ್ ಕಾರ್ತಿಕ್ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್‌ಸಿಬಿಯ ಬೆಸ್ಟ್ ಫಿನಿಶರ್ ದಿನೇಶ್ ಕಾರ್ತಿಕ್ ಅವರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ 2024 ಸೀಸನ್ ಆರಂಭಕ್ಕೂ ಮುನ್ನವೇ ಅವರು ಇದು ತನ್ನ ಕೊನೆಯ ಐಪಿಎಲ್ ಪಂದ್ಯ ಎಂದು ಹೇಳಿದ್ದರು. ಐಪಿಎಲ್ 2024ರ 15 ಪಂದ್ಯಗಳಲ್ಲಿ ಡಿಕೆ ಬಾಸ್ 326 ರನ್ ಗಳಿಸಿದ್ದರು. ಈ ಅವಧಿಯಲ್ಲಿ 2 ಅರ್ಧಶತಕಗಳನ್ನು ಗಳಿಸಿದ್ದಾರೆ. 2008ರಿಂದಲೂ ಐಪಿಎಲ್​ನಲ್ಲಿ ಆಡ್ತಿರುವ ಡಿಕೆ ಹಲವು ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. 2008ರಿಂದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಡಿಕೆ, 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಸೇರಿಕೊಂಡಿದ್ದರು. ಬಳಿಕ 2012-13ರಲ್ಲಿ ಮುಂಬೈ ಇಂಡಿಯನ್ಸ್, 2015ರ ಆರ್​ಸಿಬಿ, 2016-17ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. 2018ರಿಂದ 21ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ.  2022ರಿಂದ ಮತ್ತೆ ಆರ್​ಸಿಬಿ ಸೇರಿಕೊಂಡ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದಲ್ಲೇ ಉಳಿದಿದ್ದಾರೆ. ಒಟ್ಟಾರೆ ಐಪಿಎಲ್ ಕರಿಯರ್​ನಲ್ಲಿ ಈವರೆಗೂ 257 ಪಂದ್ಯ ಆಡಿರುವ ಡಿಕೆ 4842 ರನ್ ಬಾರಿಸಿದ್ದಾರೆ.

  • ಆರ್.ಅಶ್ವಿನ್ರಾಜಸ್ಥಾನ ರಾಯಲ್ಸ್

ರಾಜಸ್ಥಾನ್ ರಾಯಲ್ಸ್ ನ ಹಿರಿಯ ಆಟಗಾರ ಆರ್. ಅಶ್ವಿನ್ ಕೂಡ ಐಪಿಎಲ್ ಕೂಟಕ್ಕೆ ವಿದಾಯ ಹೇಳಬಹುದು. ಈ ಸೀಸನ್‌ನಲ್ಲಿ ಅಶ್ವಿನ್ ಬ್ಯಾಟಿಂಗ್‌ನಲ್ಲಿ 86 ರನ್ ಗಳಿಸಿದ್ದರು. ಅದೇ ಸಮಯದಲ್ಲಿ, ಅವರು 15 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದರು.

  • ಶಿಖರ್ ಧವನ್ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಆಗಿರುವ ಶಿಖರ್ ಧವನ್​ಗೆ ಈ ಬಾರಿ ಹೆಚ್ಚು ಆಡುವ ಅವಕಾಶ ಸಿಗಲಿಲ್ಲ. ಈ ಸೀಸನ್‌ನಲ್ಲಿ ಅವರು 5 ಪಂದ್ಯಗಳನ್ನ ಆಡಿದ್ದು,152 ರನ್‌ಗಳನ್ನು ಗಳಿಸಿದರು. ಈ ಸೀಸನ್ ಅವರ ಕೊನೆಯ ಸೀಸನ್ ಆಗಿರಬಹುದು ಎಂಬ ಮಾತುಗಳು ಕೇಳಿ ಬರ್ತಿವೆ.

  • ಡೇವಿಡ್ ವಾರ್ನರ್ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿರುವ ಡೇವಿಡ್ ವಾರ್ನರ್​ಗೆ ಕೂಡ ಈ ಬಾರಿ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ವರ್ಷ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

  • ಮೋಹಿತ್ ಶರ್ಮಾಗುಜರಾತ್ ಟೈಟನ್ಸ್

35 ವರ್ಷದ ಮೋಹಿತ್ ಶರ್ಮಾ ಗುಜರಾತ್ ಟೈಟನ್ಸ್ ತಂಡದಲ್ಲಿದ್ದು, ಮುಂದಿನ ಸೀಸನ್​ಗೆ ನಿವೃತ್ತಿ ಪಡೆಯಬಹುದು. ಸದ್ಯ ಈ ವರ್ಷ 12 ಪಂದ್ಯಗಳನ್ನ ಆಡಿದ್ದು 13 ವಿಕೆಟ್​ಗಳನ್ನ ಪಡೆದಿದ್ದಾರೆ.

  • ಪಿಯೂಷ್ ಚಾವ್ಲಾಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್​ನಲ್ಲಿ ಆಡ್ತಿರುವ ಪಿಯೂಷ್ ಚಾವ್ಲಾ ಈ ಸೀಸನ್​ನಲ್ಲಿ 11 ಪಂದ್ಯಗಳನ್ನ ಆಡಿದ್ದು, 13 ವಿಕೆಟ್ ಕಬಳಿಸಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಐಪಿಎಲ್​ನಲ್ಲಿ ಕಾಣಿಸಿಕೊಳ್ಳೋದು ಅನುಮಾನ ಎನ್ನಲಾಗಿದೆ.

  • ವೃದ್ಧಿಮಾನ್ ಸಹಾ – ಗುಜರಾತ್ ಟೈಟನ್ಸ್

ಗುಜರಾತ್ ಟೈಟಾನ್ಸ್‌ ತಂಡದ ಆಟಗಾರ ವೃದ್ಧಿಮಾನ್ ಸಹಾ ಅವರಿಗೂ ಕೂಡ ಇದು ಕೊನೆಯ ಸೀಸನ್‌ ಆಗಿರಬಹುದು. 39 ವರ್ಷದ ಸಹಾ ಈ ವರ್ಷ 9 ಪಂದ್ಯಗಳನ್ನ ಆಡಿದ್ದು 136 ರನ್​ಗಳನ್ನ ಕಲೆ ಹಾಕಿದ್ದಾರೆ.

ಹೀಗೆ 2025ರ ಟೂರ್ನಿಗೆ ಹಲವು ಅಟಗಾರರು ನಿವೃತ್ತಿ ಹೇಳುವ ಸಾಧ್ಯತೆ ಇದೆ. ಹಾಗೇ ಹಲವು ತಂಡಗಳ ನಾಯಕತ್ವ ಕೂಡ ಬದಲಾವಣೆ ಮಾಡುವ ನಿರೀಕ್ಷೆ ಇದೆ.

Shwetha M