ರಣಜಿಗೆ ರೋಹಿತ್, ಪಂತ್, ಜೈಸ್ವಾಲ್ – ವರ್ಕೌಟ್ ಆಗುತ್ತಾ ಡೊಮೆಸ್ಟಿಕ್ ಫೈಟ್?

ಆಸ್ಟ್ರೇಲಿಯಾ ಸರಣಿ ವೇಳೆ ಟೀಂ ಇಂಡಿಯಾ ನೀಡಿದ ಕಳಪೆ ಪ್ರದರ್ಶನದ ಬಳಿಕ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ವು. ಮಾಜಿ ಕ್ರಿಕೆಟಿಗರೆಲ್ಲಾ ದೇಶೀ ಕ್ರಿಕೆಟ್‌ನಲ್ಲಿ ಆಡಿ ಕಮ್ ಬ್ಯಾಕ್ ಮಾಡಿ ಅಂತಾ ಸಲಹೆ ನೀಡಿದ್ರು. ಅಲ್ದೇ ಬಿಸಿಸಿಐ ಕೂಡ ಡೊಮೆಸ್ಟಿಕ್ ಕ್ರಿಕೆಟ್ ಆಡದೇ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋ ವಾರ್ನಿಂಗ್ ನೀಡಿತ್ತು. ಇದಾದ ಬೆನ್ನಲ್ಲೇ ತಮ್ಮ ಫ್ಲ್ಯಾಪ್ ಶೋವನ್ನ ಅರ್ಥ ಮಾಡ್ಕೊಂಡು ಕೆಲ ಸ್ಟಾರ್ ಪ್ಲೇಯರ್ಸ್ ರಣಜಿಯತ್ತ ಮುಖ ಮಾಡಿದ್ದಾರೆ. ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್ ಹಾಗೇ ಯಶಸ್ವಿ ಜೈಸ್ವಾಲ್ ದೇಶೀ ಕ್ರಿಕೆಟ್‌ನಲ್ಲಿ ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ.
ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೂ ಕುಳ್ಳ ಕ್ಯಾಪ್ಟನ್ – ಬವುಮಾ ಬಂದ ಮೇಲೆ ಲಕ್ ಬದಲಾಯ್ತಾ?
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮಂಗಳವಾರದಿಂದಲೇ ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ಶುರು ಮಾಡಿದ್ದಾರೆ. 37 ವರ್ಷದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಅವರು ಮೂರು ಪಂದ್ಯಗಳಿಂದ 31 ರನ್‌ಗಳನ್ನು ಮಾತ್ರ ಗಳಿಸಿದ್ರು. ಕೊನೆಯ ಪಂದ್ಯದಲ್ಲಿ ತಂಡದಿಂದಲೂ ಹೊರಗುಳಿಯಬೇಕಾಯಿತು. ಹೀಗಾಗಿ ತಮ್ಮ ಫಾರ್ಮ್ ಮರಳಿ ಪಡೆಯೋಕೆ ರಣಜಿ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ರೋಹಿತ್ ಅವರು 2015ರಲ್ಲಿ ರಣಜಿ ಪಂದ್ಯವನ್ನು ಉತ್ತರಪ್ರದೇಶ ವಿರುದ್ಧ ಆಡಿದ್ದರು. ನಂತರ ಇದುವರೆಗೆ ಆಡಿಲ್ಲ. ಇನ್ನು ಜನವರಿ 23ರಂದು ರಣಜಿ ಟ್ರೋಫಿ ಗುಂಪು ಹಂತದ ಪಂದ್ಯದಲ್ಲಿ ಮುಂಬೈ ತಂಡ ಆಡಲಿದೆ. ಎಂಸಿಎ-ಬಿಕೆಸಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ತಂಡ ಜಮ್ಮು ಕಾಶ್ಮೀರ ತಂಡವನ್ನ ಎದುರಿಸಲಿದೆ. ರಣಜಿ ಟೂರ್ನಿಯ ಲೀಗ್ ಹಂತದಲ್ಲಿ ಎರಡು ಪಂದ್ಯಗಳಷ್ಟೇ ಬಾಕಿ ಉಳಿಯಲಿದೆ.
ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೂಡ ರಣಜಿಗೆ ಕಾಲಿಟ್ಟಿದ್ದಾರೆ. ಜನವರಿ 23 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ 2ನೇ ಹಂತದ ಪಂದ್ಯಗಳಲ್ಲಿ ದೆಹಲಿ ಪರ ಕಣಕ್ಕಿಳಿಯಲು ರಿಷಭ್ ಪಂತ್ ನಿರ್ಧರಿಸಿದ್ದಾರೆ. ಅಚ್ಚರಿ ಅಂದ್ರೆ ರಿಷಭ್ ಪಂತ್ ರಣಜಿ ಪಂದ್ಯ ಆಡಿ ಬರೋಬ್ಬರಿ 7 ವರ್ಷಗಳೇ ಕಳೆದಿವೆ. ಅಂದರೆ 2017ರ ಬಳಿಕ ಅವರು ದೇಶೀಯ ಅಂಗಳದಲ್ಲಿ ಒಂದೇ ಒಂದು ರಣಜಿ ಪಂದ್ಯವಾಡಿಲ್ಲ. 2018 ರಲ್ಲಿ ಪಂತ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದು, ಇದಾದ ಬಳಿಕ ಅವರು ರಣಜಿ ಟೂರ್ನಿಯತ್ತ ತಿರುಗಿ ನೋಡಿಲ್ಲ. ಇದೀಗ ಬಿಸಿಸಿಐ ಖಡಕ್ ವಾರ್ನಿಂಗ್ ಬೆನ್ನಲ್ಲೇ ಮತ್ತೆ ದೆಹಲಿ ಪರ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಟೀಂ ಇಂಡಿಯಾದ ಯಂಗ್ ಪ್ರಿನ್ಸ್ ಅಂತಾನೇ ಕರೆಸಿಕೊಳ್ತಿದ್ದ ಶುಭ್ ಮನ್ ಗಿಲ್ ಕೂಡ ಇತ್ತೀಚೆಗೆ ಕಳಪೆ ಫಾರ್ಮ್ನಿಂದ ಒದ್ದಾಡ್ತಿದ್ದಾರೆ. ಹೀಗಾಗಿ ಕಮ್ ಬ್ಯಾಕ್ ಮಾಡೋಕೆ ಪಂಜಾಬ್ ರಣಜಿ ಟ್ರೋಫಿ ತಂಡವನ್ನು ಸೇರಿಕೊಂಡಿದ್ದಾರೆ. ಇದೇ ತಿಂಗಳ 23ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಎದುರಿನ ಪಂದ್ಯದಲ್ಲಿ ಗಿಲ್ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ರಾಷ್ಟ್ರೀಯ ತಂಡದಿಂದ ಬಿಡುವು ಸಿಕ್ಕಾಗ ದೇಶಿ ಟೂರ್ನಿಗಳಲ್ಲಿ ಆಟಗಾರರು ಆಡಬೇಕು ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದರು. ಹೀಗಾಗಿ ರಣಜಿಯತ್ತ ಮುಖ ಮಾಡಿರೋ ಗಿಲ್ಗೆ ವಾಸಿಂ ಜಾಫರ್ ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಸಿಗಲಿದೆ. ರಣಜಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇರುವ ವಾಸೀಂ ಜಾಫರ್ ಅವರು ಪಂಜಾಬ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ಇನ್ನು ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ತಂಡದ ಪರ ರಣಜಿ ಪಂದ್ಯ ಆಡಲು ಲಭ್ಯವಿದ್ದಾರೆ. ಮುಂಬೈ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಜೈಸ್ವಾಲ್ ಕಣಕ್ಕಿಳಿಯಲಿದ್ದಾರೆ. ಹೀಗೆ ಕಳಪೆ ಫಾರ್ಮ್ನಲ್ಲಿರೋ ಕೆಲ ಆಟಗಾರರು ಡೊಮೆಸ್ಟಿಕ್ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಮಾತ್ರ ರಣಜಿ ಆಡುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಈ ಬಗ್ಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ ಮಾಹಿತಿಯನ್ನೂ ನೀಡಿಲ್ಲ. ಕೊಹ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಆಡಿದ್ದು 2012ರಲ್ಲಿ. ವಿರಾಟ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್ ಗಳಿಸಿದ್ದರು. ಪರ್ತ್ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಆಫ್-ಸ್ಟಂಪ್ ಹೊರಗಿನ ಎಸೆತಗಳನ್ನು ಎದುರಿಸುವ ಸಂದರ್ಭದಲ್ಲಿ ಔಟಾಗುತ್ತಿದ್ದಾರೆ. ಹೀಗಿದ್ರೂ ಕೊಹ್ಲಿ ಡೊಮೆಸ್ಟಿಕ್ ಕ್ರಿಕೆಟ್ ಬಗ್ಗೆ ಇಂಟ್ರೆಸ್ಟ್ ತೋರಿಸ್ತಿಲ್ಲ.