ಬಾಲ್ ಟ್ಯಾಂಪರಿಂಗ್ ಮಾಡಿದ PAK ಸ್ಟಾರ್ ಕ್ರಿಕೆಟಿಗ ಫಖರ್ ಜಮಾನ್‌ ಶಾಕ್ – PSLನಿಂದ ಎರಡು ಪಂದ್ಯ ನಿಷೇಧಿಸಿದ PCB

ಬಾಲ್ ಟ್ಯಾಂಪರಿಂಗ್ ಮಾಡಿದ  PAK ಸ್ಟಾರ್ ಕ್ರಿಕೆಟಿಗ ಫಖರ್ ಜಮಾನ್‌ ಶಾಕ್ –  PSLನಿಂದ ಎರಡು ಪಂದ್ಯ ನಿಷೇಧಿಸಿದ PCB

 ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಫಖರ್ ಜಮಾನ್  ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಲಿ (ಪಿಸಿಬಿ) ಎರಡು ಪಂದ್ಯಗಳ ನಿಷೇಧ ಹೇರಿದೆ. ಪಾಕಿಸ್ತಾನ ಪ್ರೀಮಿಯರ್‌ ಲೀಗ್‌ ನಲ್ಲಿ ಲಾಹೋರ್ ಖಲಂದರ್ಸ್ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯದ ಸಂದರ್ಭದಲ್ಲಿ ಚೆಂಡು ವಿರೂಪಗೊಳಿಸಿದ್ದಕ್ಕೆ ಎರಡು ಪಂದ್ಯಕ್ಕೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನ ಡೋರ್‌ ಏಕಾಏಕಿ ಓಪನ್!‌ – ರಸ್ತೆಗೆ ಬಿದ್ದ ಅಕ್ಕ-ತಂಗಿ!

“ಮಾರ್ಚ್ 29, ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ ಪಂದ್ಯದ ಸಂದರ್ಭದಲ್ಲಿ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗೆ ಅನ್ವಯವಾಗುವ ನೀತಿ ಸಂಹಿತೆಯ ಆರ್ಟಿಕಲ್ 2.14 ಅನ್ನು ಉಲ್ಲಂಘಿಸಿದ್ದಕ್ಕಾಗಿ ಲೆವೆಲ್ 3 ಅಪರಾಧದಲ್ಲಿ ಫಖರ್ ಜಮಾನ್ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರನ್ನು ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ” ಎಂದು ಪಿಸಿಬಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಆನ್‌ಫೀಲ್ಡ್‌ ಅಂಪೈರ್‌ಗಳಾದ ಶಾಹಿದ್ ಸೈಕತ್, ಫೈಸಲ್ ಖಾನ್ ಆಫ್ರೀದಿ, ಟಿವಿ ಅಂಪೈರ್ ಆಸಿಫ್ ಯಾಕೂಬ್ ಮತ್ತು ನಾಲ್ಕನೇ ಅಂಪೈರ್ ತಾರಿಕ್ ರಶೀದ್ ಅವರು ಫಖರ್‌ ವಿರುದ್ಧ ಆರೋಪ ಹೊರಿಸಿದರು. ಆದರೆ ಫಖರ್ ಆರಂಭದಲ್ಲಿ ಅಪರಾಧವನ್ನು ನಿರಾಕರಿಸಿದರು. ನಂತರ, ಪೂರ್ಣ ಶಿಸ್ತಿನ ವಿಚಾರಣೆಯನ್ನು ನಡೆಸಲಾಯಿತು ಮತ್ತು ನಂತರ, ಫಖರ್ ತಪ್ಪಿತಸ್ಥನೆಂದು ಕಂಡುಬಂದಿತು.

ಮುಂದಿನ 48 ಗಂಟೆಗಳಲ್ಲಿ ಫಖರ್ ಮತ್ತೊಮ್ಮೆ ಪಿಎಸ್ಎಲ್ ತಾಂತ್ರಿಕ ಸಮಿತಿಗೆ ಮನವಿ ಸಲ್ಲಿಸಬಹುದು. ಅದೇನೇ ಇರಲಿ, ಏಪ್ರಿಲ್ 3 ರಂದು ಗಡಾಫಿ ಕ್ರೀಡಾಂಗಣದಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಮತ್ತು ಏಪ್ರಿಲ್ 9 ರಂದು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ಪಂದ್ಯವನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ. ಪಂದ್ಯದ ವೇಳೆ ಫಖಾರ್ ಜಮಾನ್ ಚೆಂಡನ್ನು ಬಲವಾಗಿ ಬೆರಳಿಂದ ಒತ್ತುವುದು ಕಂಡು ಬಂದಿದೆ.  ತಕ್ಷಣ ಫೀಲ್ಡ್‌ ಅಂಪೈರ್‌ ಚೆಂಡನ್ನು ಪರಿಶೀಲನೆ ನಡೆಸಿ ಉದ್ದೇಶಪೂರ್ವಕವಾಗಿ ವಿರೂಪಗೊಳಿಸಲಾಗಿದೆ ಎಂದು ನಿರ್ಧರಿಸಿ ಕರಾಚಿಗೆ ಐದು ಪೆನಾಲ್ಟಿ ರನ್‌ಗಳನ್ನು ನೀಡಿದ್ದರು. ಮಾತ್ರವಲ್ಲದೆ ಚೆಂಡನ್ನು ಕೂಡ ಬದಲಾಯಿಸಿದ್ದರು.

Kishor KV