Game Changer ಇಬ್ರಾಹಿಂ ಝದ್ರಾನ್ -ಅಫ್ಘಾನ್ ಗೆ ಬಂತಾ ಆನೆ ಬಲ?
ದಿಗ್ಗಜರ ದಾಖಲೆಗಳೇ ಚಿತ್ರಾನ್ನ

ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ರೋಚಕ ಜಯ ಸಾಧಿಸಿದೆ. ಈ ಪಂದ್ಯ ಗೆಲ್ಲೋಕೆ ಕಾರಣನೇ ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್. ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅಫ್ಘಾನಿಸ್ತಾನ್ ಬ್ಯಾಟರ್ ಇಬ್ರಾಹಿಂ ಝದ್ರಾನ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ 177 ರನ್ಗಳ ಮ್ಯಾರಥಾನ್ ಇನಿಂಗ್ಸ್ ಆಡುವ ಮೂಲಕ ಅನ್ನೋದೇ ವಿಶೇಷ..
ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಇಬ್ರಾಹಿಂ 106 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಆಕರ್ಷಕ ಶತಕದ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಇಬ್ರಾಹಿಂ ಝದ್ರಾನ್ ಸಿಕ್ಸ್ ಫೋರ್ ಗಳ ಸುರಿಮಳೆಗೈದರು. ಈ ಮೂಲಕ ಕೇವಲ 146 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ 177 ರನ್ ಬಾರಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲೇ ಅಧಿಕ ರನ್
ಈ 177 ರನ್ ಗಳೊಂದಿಗೆ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದ ವಿಶ್ವ ದಾಖಲೆ ಇಬ್ರಾಹಿಂ ಝದ್ರಾನ್ ಪಾಲಾಯಿತು. ಇದಕ್ಕೂ ಮುನ್ನ ಈ ರೆಕಾರ್ಡ್ ಇಂಗ್ಲೆಂಡಿನ ಬೆನ್ ಡಕೆಟ್ ಹೆಸರಿನಲ್ಲಿತ್ತು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆನ್ ಡಕೆಟ್ 143 ಎಸೆತಗಳಲ್ಲಿ 165 ರನ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಅಫ್ಘಾನಿಸ್ತಾನ್ ಬ್ಯಾಟರ್ ಯಶಸ್ವಿಯಾಗಿದ್ದಾನೆ. ಲಾಹೋರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನ್ ಬ್ಯಾಟರ್ 177 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 175+ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಬಲಗೈ ಬ್ಯಾಟ್ಸ್‌ಮನೆ ಆದ 23 ವರ್ಷದ ಇಬ್ರಾಹಿಂ ಝದ್ರಾನ್ 7 ಟೆಸ್ಟ್ ಮ್ಯಾಚ್‌ನಿಂದ 541 ರನ್ ಗಳಿಸಿದ್ದಾರೆ. ಇನ್ನೂ 35 ODI ಪಂದ್ಯದಿಂದ 1634 ರನ್ ಗಳಿಸಿದ್ದು, 44 T20 ಪಂದ್ಯಗಳಿಂದ 1105 ರನ್‌ಗಳಿಸಿದ್ದಾರೆ. 2019ರಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಇಬ್ರಾಹಿಂ, ಚಾಂಪಿಯನ್ಸ್ ಟ್ರೋಫಿಯಲ್ಲಿ 177 ರನ್ ಉಳಿಸೋ ಮೂಲಕ ಇಡಿ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮನೆಗೆ ಹೋಗಬೇಕಾದ ಅಪ್ಘಾನ್ ತಂಡವನ್ನ ಏಕಾಂಗಿಯಾಗಿ ಹೊರಾಡಿ ಗೆಲ್ಲಿಸಿದ ಕಿರ್ತಿ ಇಬ್ರಾಹಿಂಗೆ ಸಲ್ಲುತ್ತೆ.. ಇವರ ಈ ಸಾಧನೆ ಹೀಗೆ ಮುಂದುವರಿಯಲಿ..