ಮಂಡ್ಯಕ್ಕೆ ಸ್ಟಾರ್ ಚಂದ್ರು ಅಭ್ಯರ್ಥಿ? – ಮಂಡ್ಯ ಕಾಂಗ್ರೆಸ್ ಶಾಸಕರಿಂದ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್

ಮಂಡ್ಯಕ್ಕೆ ಸ್ಟಾರ್ ಚಂದ್ರು ಅಭ್ಯರ್ಥಿ? – ಮಂಡ್ಯ ಕಾಂಗ್ರೆಸ್ ಶಾಸಕರಿಂದ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್

ಮಂಡ್ಯ ರಾಜಕಾರಣ ಅಂದರೆ ಇಂಡಿಯಾನೇ ತಿರುಗಿ ನೋಡುತ್ತೆ. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡಲು ಮೈತ್ರಿ ಮಾಡಿಕೊಂಡಿದ್ದಾರೆ. ಆದ್ರೆ ಮಂಡ್ಯ ಕ್ಷೇತ್ರ ಜೆಡಿಎಸ್​ಗೋ ಅಥವಾ ಬಿಜೆಪಿಗೋ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಇದ್ರ ನಡುವೆ ಮಂಡ್ಯದಿಂದ ಈ ಬಾರೀ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಸುಮಲತಾ ಕೂಡ ಮಂಡ್ಯದಿಂದಲೇ ಸ್ಪರ್ಧಿಸೋದಾಗಿ ಹೇಳ್ತಿದ್ದಾರೆ. ಆದ್ರೆ ಈ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್ ಮಂಡ್ಯ ಅಭ್ಯರ್ಥಿಯನ್ನ ಫೈನಲ್ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಮಂಡ್ಯ, ಹಾಸನದ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ರೆಬೆಲ್ – ದಳಪತಿಗಳಿಗೆ ಶುರುವಾಯ್ತು ಆತಂಕ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟಿ ರಮ್ಯಾ, ಸಚಿವ ಚಲುವರಾಯಸ್ವಾಮಿ, ಚಲುವರಾಯಸ್ವಾಮಿ ಪತ್ನಿ, ಕೊನೆಗೆ ಸುಮಲತಾ ಅಂಬರೀಶ್ ಸ್ಪರ್ಧಿಸಲಿದ್ದಾರೆ ಎಂದು ಚರ್ಚೆ ನಡೆದಿತ್ತು. ಆದರೆ, ಇದೀಗ ಕೊನೆಗೆ ಸದ್ದಿಲ್ಲದೇ ಕಾಂಗ್ರೆಸ್​​ ಅಭ್ಯರ್ಥಿಯ ಆಯ್ಕೆ ಆಗಿದೆಯಂತೆ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಎಂದೇ ಫೇಮಸ್ ಆಗಿರೋ ಗುತ್ತಿಗೆದಾರ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅಭ್ಯರ್ಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಡ್ಯ ಭಾಗದಲ್ಲಿ ಸ್ಟಾರ್​ ಚಂದ್ರು ಎಂದು ಫೇಮಸ್. ಸ್ಟಾರ್ ಚಂದ್ರು ಮೂಲ ಹೆಸರು ವೆಂಕಟರಮಣೇಗೌಡ, ಎಲ್ಲಾ ಪಕ್ಷದ ನಾಯಕರಿಗೂ ಚಿರಪರಿಚಿತ. ಇನ್ನೂ ಮಂಡ್ಯ ಉಸ್ತುವಾರಿಯಾಗಿರುವ ಸಚಿವ ಚಲುವರಾಯಸ್ಚಾಮಿ ಹಾಗೂ ಮಂಡ್ಯ ಕಾಂಗ್ರೆಸ್ ಶಾಸಕರು ಸ್ಟಾರ್ ಚಂದ್ರುಗೆ ಟಿಕೆಟ್ ಕೊಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಅಲ್ಲದೆ ಚಂದ್ರು ಅವರಿಗೆ ಕಾಂಗ್ರೆಸ್‌ ನ ಹಿರಿಯ ನಾಯಕರಿಂದಲೇ ಕ್ಷೇತ್ರ ಸುತ್ತುವಂತೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಮಂಡ್ಯ ವಿಚಾರದಲ್ಲಿ ಕಾಂಗ್ರೆಸ್ ಗೆ ಇನ್ನೂ ಸ್ಪಷ್ಟವಾದ ನಿಲುವು ಇದ್ದಂತೆ ಇಲ್ಲ. ಚೆಲುವರಾಯ ಸ್ವಾಮಿ ಅವರನ್ನ ಹೊರತು ಪಡಿಸಿದರೆ, ಕಾಂಗ್ರೆಸ್ ಗೂ ಬೇರೆ ಆಯ್ಕೆಗಳಿಲ್ಲ.  ಇದೇ ಕಾರಣಕ್ಕಾಗಿ ಮಾಜಿ ಸಂಸದೆ ರಮ್ಯಾ ಅವರ ಮನವೊಲಿಕೆಗೆ ಪ್ರಯತ್ನಗಳು ನಡೆದಿವೆ ಎನ್ನಲಾಗ್ತಿದೆ.  ಆದರೆ ರಾಜಕೀಯದಲ್ಲಿ ರಮ್ಯಾ ಅವರಿಗೆ ಮೊದಲಿದ್ದ ಆಸಕ್ತಿ ಈಗಿದ್ದಂತೆ ಇಲ್ಲ. ಇದಕ್ಕೆ ಪುರಾವೆ ಎಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವಂತೆ ಆಹ್ವಾನ ಬಂದರೂ ಕೂಡ ರಮ್ಯಾ ತಿರಸ್ಕರಿಸಿದ್ದರು.   ಇದೇ ಕಾರಣಕ್ಕೆ ಮಂಡ್ಯಕ್ಕೆ ಅಚ್ಚರಿಯ ಅಭ್ಯರ್ಥಿಯಾಗಿ ಸ್ಟಾರ್ ಬಿಲ್ಡರ್ ಮಂಜು ಹೆಸರು ಕೇಳಿ ಬರ್ತಿದೆ. ಹಾಗೇನಾದ್ರೂ ಕುಮಾರಸ್ವಾಮಿ ಕಣಕ್ಕಿಳಿದರೆ ಮಾತ್ರ ಮರುಪರಿಶೀಲನೆ ಮಾಡುವ ಬಗ್ಗೆ ಪಕ್ಷ ತೀರ್ಮಾನ ಕೈಗೊಂಡಿದೆ. ಅಷ್ಟಕ್ಕೂ ಯಾರು ಈ ಚಂದ್ರು ಅನ್ನೋದನ್ನ ನೋಡೋದಾದ್ರೆ..

ಸ್ಟಾರ್ ಚಂದ್ರು ಯಾರು? 

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಕನ್ನಾಘಟ್ಟ ಗ್ರಾಮದ ನಿವಾಸಿ ಸ್ಟಾರ್ ಚಂದ್ರು. ಸ್ಟಾರ್ ಗ್ರೂಪ್‌ನ ಮಾಲೀಕರಾಗಿರುವ ಇವರು ಸಚಿವ ಚೆಲುವರಾಯಸ್ವಾಮಿಗೆ ಆಪ್ತರಾಗಿದ್ದಾರೆ. ಚಂದ್ರು ಅವರ ಸೋದರ ಬೇರಾರು ಅಲ್ಲ. ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಅವರು. ಪುಟ್ಟಸ್ವಾಮಿಗೌಡ ಅವರ ಅಳಿಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ. ಈ ಮೂಲಕ ಸ್ಟಾರ್ ಚಂದ್ರು ಅವರಿಗೆ ರಾಜಕೀಯ ಹಿನ್ನೆಲೆಯೂ ಸಹ ಇದೆ. ರಾಜಕೀಯ ಹಿನ್ನೆಲೆ ಹಾಗೂ ಯಶಸ್ವಿ ಉದ್ಯಮಿಯಾಗಿರುವ ಸ್ಟಾರ್ ಚಂದ್ರು ಚುನಾವಣೆಯ ಎಲ್ಲಾ ತಂತ್ರಗಳಿಗೂ ಸೂಕ್ತರು ಎಂದು ಸಚಿವ ಚಲುವರಾಯಸ್ವಾಮಿ ನೇತೃತ್ವದ ಕಾಂಗ್ರೆಸ್ ನಾಯಕರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮಂಡ್ಯದ ಮಹಾಯುದ್ಧದಲ್ಲಿ ಕಣಕ್ಕಿಳಿಯಲಿರುವ ಬಾಹುಬಲಿ ಯಾರು ಎಂಬ ಚರ್ಚೆ ಮೂರು ಪಕ್ಷದಲ್ಲಿಯೂ ನಡೆಯುತ್ತಿದೆ. ಆದ್ರೆ ಅಂತಿಮವಾಗಿ ಯಾರೇ ಕಣಕ್ಕೆ ಇಳಿದ್ರೂ ಮಂಡ್ಯ ಹೈವೋಲ್ಟೇಜ್ ಅಖಾಡವಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

 

Sulekha