ಚಲಿಸುವ ಕಾರಿನ ಸನ್‌ರೂಫ್‌ನಿಂದ ಹೊರಗೆ ಇಣುಕಿ ನೋಡುತ್ತೀರಾ? ಎಚ್ಚರ.. ನಿಮಗೂ ಬೀಳುತ್ತೆ ಭಾರಿ ದಂಡ!

ಬೆಂಗಳೂರು: ಹಿಂದೆ ಫಾರಿನ್ ಕಾರುಗಳಲ್ಲಿ ಮಾತ್ರ ಸನ್‌ರೂಫ್ ಸೌಲಭ್ಯ ಇರುತ್ತಿತ್ತು. ಹೀಗಾಗಿ ಒಮ್ಮೆಯಾದ್ರೂ ಸನ್‌ರೂಫ್ ಇರುವ ಕಾರಿನಲ್ಲಿ ಓಡಾಡಬೇಕು, ಮೇಲೆನಿಂದ ನಿಂತು ನೋಡಿ ಎಂಜಾಯ್ ಮಾಡಬೇಕು ಅಂತಾ ಅನೇಕರು ಕನಸು ಕಾಣುತ್ತಾರೆ. ಆದ್ರೆ ಈಗ ಜಮಾನ ಬದಲಾಗಿದೆ.. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಕಾರುಗಳಲ್ಲಿ ಸನ್ ರೂಫ್ ಸೌಲಭ್ಯ ಇದೆ. ಕೇವಲ 8 ಲಕ್ಷ ರೂ. ಎಕ್ಸ್ ಶೋ ರೂಂ ಬೆಲೆ ಇರುವ ಕಾರುಗಳಲ್ಲೂ ಸನ್ ರೂಫ್ ಸೌಲಭ್ಯ ನೀಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರಿನಲ್ಲಿ ಇರುವ ಸನ್ ರೂಫ್‌ಗಳ ದುರ್ಬಳಕೆ ಹೆಚ್ಚಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ಕಟ್ಟುನಿಟ್ಟಿನ ನಿಯಮ ಜಾರಿ ತಂದಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದ್ರೆ ಭಾರಿ ದಂಡ ವಿಧಿಸಲು ಮುಂದಾಗಿದ್ದಾರೆ.
ಕಾರು ಅತಿ ವೇಗವಾಗಿ ಚಲಿಸುವಾಗ ಜನರು ತಮ್ಮ ಕಾರ್‌ನ ಸನ್ ರೂಫ್‌ನಿಂದ ತಲೆಯನ್ನು ಹೊರಗೆ ಹಾಕುತ್ತಿದ್ದಾರೆ. ಕಾರಿನ ಒಳಗಿನಿಂದ ಹೊರಗೆ ತಲೆ ಎತ್ತಿ ನಿಲ್ಲುವ ಪರಿಪಾಠ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳು ಈ ರೀತಿ ಸನ್ ರೂಫ್‌ನ ಹೊರಗೆ ನಿಲ್ಲುತ್ತಿದ್ದಾರೆ. ಇದರಿಂದಾಗಿ ಅಪಾಯಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪೊಲೀಸರು ಪ್ರಯಾಣಿಕರ ಇಂತಹ ವರ್ತನೆಯನ್ನು ತಡೆಯಲು ದಂಡ ಹಾಕಲು ಮುಂದಾಗುತ್ತಿದ್ದಾರೆ. ಈ ರೀತಿಯ ದುರ್ವರ್ತನೆಗೆ 100 ರೂ. ನಿಂದ 300 ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಜಿಡಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ ಫೈನಲ್ ಪಂದ್ಯ ಸ್ಥಳ ಬದಲಾವಣೆ ಸಾಧ್ಯತೆ – ಕೊಲಂಬೋದಲ್ಲಿ ಬದಲು ಕ್ಯಾಂಡಿಯಲ್ಲಿ ನಡೆಯಲಿದೆ ಫೈನಲ್ ಮ್ಯಾಚ್
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಜಿಡಿಪಿ ಅಲೋಕ್ ಕುಮಾರ್, ಸನ್ ರೂಫ್‌ನಿಂದ ಹೊರಗೆ ನಿಲ್ಲೋದು ಕಾನೂನು ಪ್ರಕಾರ ತಪ್ಪು ಮಾತ್ರವಲ್ಲ, ಇದು ಅಪಾಯಕಾರಿ ಪ್ರವೃತ್ತಿ. ಹಾಗೆ ನೋಡಿದ್ರೆ ಕಾರಿನ ಒಳಗೆ ಕೂತವರು ಸನ್ ರೂಫ್‌ನಿಂದ ತಲೆಯನ್ನು ಹೊರಗೆ ಇಣುಕು ಹಾಕುವ ಪ್ರವೃತ್ತಿ ತಡೆಯಲು ದಂಡ ವಿಧಿಸುವ ಕುರಿತಾದ ನಿರ್ದಿಷ್ಟ ಕಾನೂನು ಮೋಟಾರು ವಾಹನ ಕಾಯ್ದೆಯಲ್ಲಿ ಇಲ್ಲ. ಆದರೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177ರ ಪ್ರಕಾರ ದಂಡ ವಿಧಿಸಬಹುದಾಗಿದೆ ಎಂದು ಹೇಳಿದ್ದಾರೆ.
ಸನ್ ರೂಫ್ ತೆರೆದು ಹೊರಗೆ ನಿಲ್ಲೊದು ಅಪಾಯಕಾರಿ ಸ್ಟಂಟ್ ಆಗಿದೆ. ಬಹುತೇಕ ಸಂದರ್ಭಗಳಲ್ಲಿ ಯುವಕರು ಹಾಗೂ ಮಕ್ಕಳು ಈ ರೀತಿಯ ಕೃತ್ಯ ಎಸಗೋದನ್ನು ನೋಡಿದ್ದೇವೆ. ಈ ರೀತಿ ಸನ್ ರೂಫ್ ತೆರೆದು ನಿಂತಾಗ ಅವರು ಅಪಾಯ ಆಹ್ವಾನಿಸಿದಂತಾಗುತ್ತದೆ. ಜೊತೆಯಲ್ಲೇ ಇತರ ವಾಹನ ಚಾಲಕರಿಗೂ ಕಷ್ಟವಾಗುತ್ತದೆ. ಸನ್ ರೂಫ್‌ನಿಂದ ತಲೆಯನ್ನು ಹೊರಗೆ ತಂದಾಗ ಗಾಳಿಯಲ್ಲಿ ಹಾರಿ ಬರುವ ವಸ್ತುಗಳು ಮುಖಕ್ಕೆ ಬಡಿದು ಹಾನಿ ಮಾಡಬಹುದಾಗಿದೆ. ವಾಹನ ಚಾಲಕ ಬ್ರೇಕ್ ಹಾಕಿದಾಗ ಸನ್ ರೂಫ್‌ನಲ್ಲಿ ನಿಂತಿದ್ದವರು ತಮ್ಮ ಮುಖ ಹಾಗೂ ದೇಹಕ್ಕೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇನ್ನು ವಾಹನ ವೇಗವಾಗಿ ಸಾಗುವಾಗ ಸನ್ ರೂಫ್ ತೆರೆಯಲೇ ಬಾರದು. ಏಕೆಂದರೆ ತೆರೆದ ಸನ್ ರೂಫ್ ಗಾಳಿಯ ಬೀಸುವಿಕೆಗೆ ಅಡ್ಡಿಯಾಗುವ ಮೂಲಕ ಅಪಘಾತಗಳಿಗೂ ಕಾರಣವಾಗಬಹುದು ಎಂದು ಹೇಳಿದ್ದಾರೆ.