ಈ ದೇವಾಲಯ ದಿನದಲ್ಲಿ ಎರಡು ಬಾರಿ ಮಾಯವಾಗುತ್ತದೆ – ಸ್ತಂಭೇಶ್ವರ ದೇಗುಲದಲ್ಲಿ ಇಂದಿಗೂ ನಡೆಯುತ್ತದೆ ವಿಸ್ಮಯ..!

ಈ ದೇವಾಲಯ ದಿನದಲ್ಲಿ ಎರಡು ಬಾರಿ ಮಾಯವಾಗುತ್ತದೆ – ಸ್ತಂಭೇಶ್ವರ ದೇಗುಲದಲ್ಲಿ ಇಂದಿಗೂ ನಡೆಯುತ್ತದೆ ವಿಸ್ಮಯ..!

ಈ ಸ್ಟೋರಿಯಲ್ಲಿ ಭಕ್ತಿಯಿದೆ.. ಅಚ್ಚರಿಯಿದೆ.. ವಿಸ್ಮಯವಿದೆ. ಇದು ಶಿವನ ಮಹಿಮೆಯೋ.. ಸಾಗರದ ಮಾಯೆಯೋ.. ಅಂದಿಗೂ ಇಂದಿಗೂ ಎಂದೆಂದಿಗೂ ಇದು ವಿಸ್ಮಯದ ತಾಣ.. ಭಕ್ತಿಯ ಕೇಂದ್ರ.. ಇಲ್ಲಿನ ಸ್ಥಳಮಹಿಮೆಗೆ ಪರವಶವಾಗದೆ ಇದ್ದವರಿಲ್ಲ.. ಇಲ್ಲಿನ ಶಿವಲೀಲೆಗೆ ಮನಸೋಲದೇ ಹೋದವರಿಲ್ಲ.. ಇದು ಪರಶಿವನ ಭಕ್ತಿಯ ಜೊತೆ ಪ್ರಕೃತಿಯ ಕೌತುಕವೂ ಸೇರಿರೋ ಅಪರೂಪದಲ್ಲಿ ಅಪರೂಪವಾಗಿರೋ ದೇವಾಲಯ. ಇದುವೇ ಸ್ತಂಭೇಶ್ವರ ದೇಗುಲ… ಇಂದಿಗೂ ಈ ದೇವಾಲಯ ದಿನದಲ್ಲಿ ಎರಡು ಬಾರಿ ಮಾಯವಾಗುತ್ತದೆ. ನಿಮ್ಮ ಕಣ್ಣಿಗೆ ಈ ದೇಗುಲ ಕಾಣಿಸುವುದೇ ಇಲ್ಲ.. ಮಾಯವಾಗಿ ಕೆಲ ಹೊತ್ತಿನ ಬಳಿಕ ಮತ್ತೆ ದೇಗುಲ ಪ್ರತ್ಯಕ್ಷವಾಗುತ್ತದೆ. ಅಚ್ಚರಿಯಾದರೂ ಇದು ಸತ್ಯ.

ಇದನ್ನೂ ಓದಿ: ಯುಗದ ಅಂತ್ಯವನ್ನೇ ಸೂಚಿಸುವ ಮಾತಂಗೇಶ್ವರ ದೇವಾಲಯ – ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

ಗುಜರಾತ್ ರಾಜ್ಯದ ವಡೋದರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಬರುಚ್ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿರುವ ಈ ಶಿವಾಲಯ ಎಲ್ಲಾ ದೇವಾಲಯಗಳಂತಲ್ಲ.. ಈ ಸ್ತಂಭೇಶ್ವರ ನೆಲೆಯಾಗಿರೋದು ಸಮುದ್ರದ ತಟದಲ್ಲಿ. ಇಲ್ಲಿ ಭಕ್ತರು ಯಾವ ಸಮಯದಲ್ಲಿ ಬೇಕಾದರೂ ಹೋಗಬಹುದು. ತಮ್ಮ ಪ್ರೀತಿಯ ಶಿವನನ್ನ ಆರಾಧಿಸಬಹುದು.. ಆದರೆ, ನೀವು ನೋಡು ನೋಡುತ್ತಿದ್ದಂತೆ ಈ ದೇಗುಲ ದಿಢೀರ್ ಮಾಯವಾಗುತ್ತದೆ. ಅದು ದಿನಕ್ಕೆ ಎರಡು ಬಾರಿ ಈ ದೇವಾಲಯದ ಅರ್ಧಭಾಗ ನಿಮಗೆ ಕಾಣಿಸುವುದೇ ಇಲ್ಲ. ಹಾಗಂತಾ ದಿನವಿಡೀ ಈ ದೇಗುಲ ಕಣ್ಮರೆಯಾಗುವುದಿಲ್ಲ. ಮಾಯವಾದ ಕೆಲಹೊತ್ತಲ್ಲೇ ಮತ್ತೆ ಭಕ್ತರಿಗೆ ದರ್ಶನ ಕೊಡಲು ಯಥಾಸ್ಥಿತಿಗೆ ಬರುತ್ತದೆ.

ಹೌದು.. ಸಮುದ್ರತಟದಲ್ಲಿರುವ ಈ ದೇವಾಲಯ ದಿನಕ್ಕೆರಡು ಬಾರಿ ಸಮುದ್ರದ ನೀರಿನಲ್ಲಿ ಮುಳುಗುತ್ತದೆ. ಸಮುದ್ರರಾಜನೇ ಬಂದು ಶಿವನ ಅಭಿಷೇಕ ಮಾಡುತ್ತಾನೆ. ಹೀಗಾಗಿಯೇ ಸಮುದ್ರದ ನೀರಲ್ಲಿ ಶಿವಲಿಂಗ ಮುಳುಗುತ್ತದೆ. ಇಲ್ಲಿ ಸಮುದ್ರದ ಅಲೆಗಳಲ್ಲಿ ನಡೆಯುವ ವಿಪರೀತ ಉಬ್ಬರವೇ ದೇಗುಲ ಮುಳುಗಲು ಕಾರಣ ಎನ್ನಲಾಗ್ತಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಶಿವದೇವಾಲಯ ಮುಳುಗುತ್ತದೆ. ಪ್ರಕೃತಿಯ ಈ ಸೋಜಿಗವನ್ನ ಅದೆಷ್ಟೋ ಭಕ್ತರು ಇಂದಿಗೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಶಿವಲಿಂಗದ ಅಭಿಷೇಕ ಸ್ವತಃ ಸಮುದ್ರದೇವತೆಯಿಂದಲೇ ನೆರವೇರುತ್ತದೆ ಅನ್ನೋದು ಭಕ್ತರ ನಂಬಿಕೆಯೂ ಹೌದು.

200 ವರ್ಷಗಳ ಹಿಂದೆ ಈ ದೇವಾಸ್ಥಾನದ ಉತ್ಖನನ ನಡೆದಿದ್ದಂತೆ. ಇನ್ನು ಸ್ಕಂದ ಪುರಾಣದಲ್ಲಿ ಈ ದೇಗುಲದ ಬಗ್ಗೆ ಒಂದು ಕಥೆಯೂ ಬರುತ್ತದೆ. ತಂಡಕಾಸುರ ಅನ್ನೋ ಅಸುರ ಶಿವನ ಕುರಿತು ತಪಸ್ಸು ಮಾಡುತ್ತಿದ್ದ. ಈತನ ತಪಸ್ಸಿಗೆ ಒಲಿದ ಈಶ್ವರ ವರ ಕೇಳು ಎಂದು ಹೇಳಿದಾಗ, ತಂಡಕಾಸುರ ನನ್ನನ್ನ ಯಾರೂ ಕೊಲ್ಲಬಾರದು ಅನ್ನೋ ವರ ಕೇಳುತ್ತಾನೆ. ಈ ವರ ನೀಡಲು ಈಶ್ವರ ನಿರಾಕರಿಸಿದಾಗ, ಶಿವಪುತ್ರರನ್ನ ಬಿಟ್ಟು ಉಳಿದವರಾರು ನನ್ನ ಕೊಲ್ಲಬಾರದು ಅನ್ನೋ ವರ ಕೇಳುತ್ತಾನೆ. ಈಶ್ವರ ಕೂಡಾ ವರ ದಯಪಾಲಿಸುತ್ತಾನೆ. ತಂಡಕಾಸುರನ ಹಿಂಸೆ ಮಿತಿಮೀರತೊಡಗಿದಾಗ ಕೊನೆಗೂ ಕಾರ್ತಿಕೇಯ ಅಸುರನ ವಧೆ ಮಾಡುತ್ತಾನೆ. ಆದ್ರೆ, ಶಿವಭಕ್ತನನ್ನ ಕೊಂದಿದ್ದಕ್ಕೆ ಕಾರ್ತಿಕೇಯನ ಮನಸ್ಸು ನೊಂದುಕೊಳ್ಳುತ್ತದೆ. ಆಗ ತನ್ನಲ್ಲಾದ ತಳಮಳವನ್ನ ಕಾರ್ತಿಕೇಯ ಭಗವಾನ್ ವಿಷ್ಣುವಿನ ಬಳಿ ಹೇಳಿಕೊಳ್ಳುತ್ತಾನೆ. ಆಗ ವಿಷ್ಣು, ತಂಡಕಾಸುರನನ್ನ ಕೊಂದ ಸ್ಥಳದಲ್ಲಿ ಶಿವದೇಗುಲ ನಿರ್ಮಿಸಲು ಸೂಚಿಸುತ್ತಾನೆ. ಹೀಗಾಗಿಯೇ ಕಾರ್ತಿಕೇಯ ಸಿಂಧೂಸಾಗರದ ಸಂಗಮ ಸ್ಥಳದಲ್ಲಿ ಈ ದೇಗುಲ ಕಟ್ಟುತ್ತಾನೆ ಅನ್ನೋದನ್ನ ಪುರಾಣದಲ್ಲಿ ಹೇಳಲಾಗುತ್ತಿದೆ.

ಇನ್ನು ಪ್ರತಿದಿನ ದೇವಾಲಯ ಮುಳುಗುವ ಸಮಯ ಹೊರತು ಪಡಿಸಿ ಬೇರೆ ಸಮಯದಲ್ಲಿ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಶಿವನನ್ನ ಆರಾಧಿಸುತ್ತಾರೆ. ಸಮುದ್ರದ ಅಲೆಗಳು ಕಡಿಮೆಯಿದ್ದಾಗ ಶ್ವೇತವರ್ಣದಲ್ಲಿ ಗೋಚರಿಸೋ ಶಿವಲಿಂಗವನ್ನ ನೋಡೋದೇ ಭಕ್ತರ ಆನಂದಕ್ಕೂ ಕಾರಣವಾಗಿದೆ.

ಇತ್ತೀಚೆಗಷ್ಟೇ ಈ ದೇವಾಲಯಕ್ಕೆ ಹೊಸ ರೂಪ ಕೂಡಾ ನೀಡಲಾಗಿದೆ. ಸಮುದ್ರದ ಉಬ್ಬರ ಇಳಿತದ ಸಮಯ ನೋಡಿ ಇಲ್ಲಿ ದಿನನಿತ್ಯ ಪೂಜೆ ನಿಗದಿಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

 

Sulekha