ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿರ್ಬಂಧ – ಕಾರಣವೇನು ಗೊತ್ತಾ?

ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿರ್ಬಂಧ – ಕಾರಣವೇನು ಗೊತ್ತಾ?

ನಮ್ಮ ರಾಜ್ಯದಲ್ಲಿರೋ ಉಡುಪಿ ಸಾಕಷ್ಟು ಪ್ರವಾಸಿ ತಾಣಗಳಿಗೆ ಹೆಸರಾಗಿದೆ. ಇಲ್ಲಿನ ಸುಂದರ ಸಮುದ್ರ ತೀರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇದೀಗ ಉಡುಪಿಗೆ ಪ್ರವಾಸಕ್ಕೆಂದು ಹೊರಟವರಿಗೆ ಕಹಿ ಸುದ್ದಿಯಿದೆ. ಪ್ರವಾಸಿಗರ ಆಕರ್ಷಣೀಯ ಸ್ಥಳವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಕೋಟಿ ವೀರರ IPL ಫ್ಲಾಪ್ ಶೋ – RCB ಪಾಲಿಗೂ ಇವರೇ VILLAINS

ಇನ್ನೇನು ಮಳೆಗಾಲ ಆರಂಭವಾಗಲಿದೆ. ಕರಾವಳಿ ಅಲೆಗಳ ಅಬ್ಬರ ಜೋರಾಗಿರಲಿದೆ. ಅರಬ್ಬಿ ಸಮುದ್ರದ ಅಬ್ಬರ ಹೆಚ್ಚಾಗುತ್ತಿದ್ದಂತೆ ಉಡುಪಿ ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಮುಂದಿನ 4 ತಿಂಗಳು ಯಾವುದೇ ಬೋಟುಗಳು, ದೋಣಿಗಳು ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಸಮುದ್ರದ ಅಲೆಗಳ ಜೊತೆಗೆ ಆಟವಾಡುವ ದ್ವೀಪದ ವಿಹಾರ ಮಾಡುವ ಆಸೆಗಳನ್ನು ಹೊತ್ತು ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ.

ಸೇಂಟ್ ಮೇರಿಸ್ ದ್ವೀಪ ವಿಭಿನ್ನ ಆಕಾರದ ಬಂಡೆಗಳಿಗೆ ಫೇಮಸ್. ಬಂಡೆಗಳ ಜೊತೆ ಫೋಟೋಶೂಟ್ ಮಾಡಲೆಂದೇ ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಉಡುಪಿಗೆ ಬಂದು ದ್ವೀಪದ ಕಡೆ ಯಾನ ಮಾಡುತ್ತಾರೆ. ಮಳೆಗಾಲದಲ್ಲಿ ಪಾಚಿ ಕಟ್ಟಿದ ಬಂಡೆಗಳು ಅಪಾಯಕಾರಿ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸವನ್ನು ನಿರ್ಬಂಧ ಮಾಡಲಾಗುತ್ತದೆ. ಸಮುದ್ರದ ಅಬ್ಬರ ಅಲೆಗಳ ಹೊಡೆತ ಹೆಚ್ಚಾಗಿರುವ ಕಾರಣ ಪ್ರವಾಸಿ ಬೋಟ್ ಗಳು ಸಮುದ್ರಕ್ಕೆ ಇಳಿಯುವುದು ಅಪಾಯಕಾರಿಯಾಗಿದೆ.

ದ್ವೀಪದಲ್ಲಿ ವಿವಿಧ ಬಗೆಯ ಮನರಂಜನಾ ಕ್ರೀಡೆಗಳನ್ನು ಕೂಡ ನಿಷೇಧ ಮಾಡಲಾಗಿದೆ. ಸೇಂಟ್‍ಮೇರಿಸ್ ಪಿಕ್ ಪಾಯಿಂಟ್‍ನಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ತಬ್ಧ ಆಗಿದೆ. ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾದ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ತರಹದ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಕರಾವಳಿ ಪ್ರವಾಸಕ್ಕೆ ಬರುವವರು ತೀರದಿಂದಲೇ ಸಮುದ್ರ ನೋಡಿ ವಾಪಸ್ಸಾಗುತ್ತಿದ್ದಾರೆ.

Shwetha M