ಶಾರುಖ್ ಖಾನ್ ಮನೆಯಲ್ಲಿ 8 ಗಂಟೆ ಅವಿತಿದ್ದ ಆಗಂತುಕರು!

ಶಾರುಖ್ ಖಾನ್ ಮನೆಯಲ್ಲಿ 8 ಗಂಟೆ ಅವಿತಿದ್ದ ಆಗಂತುಕರು!

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಂಗಲೆಗೆ ಆಗಂತುಕರಿಬ್ಬರು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅಲ್ಲದೇ ನಟನ ಮೇಕಪ್ ರೂಮ್ ನಲ್ಲಿ ಸುಮಾರು 8 ಗಂಟೆಗಳ ಕಾಲ ಅವಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮನ್ನತ್ ಬಂಗಲೆಗೆ ಇಬ್ಬರು ಅಪರಿಚಿತರು ಅಕ್ರಮವಾಗಿ ಪ್ರವೇಶಿಸಿದ್ದರು. ಆರೋಪಿಗಳಿಬ್ಬರೂ ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಅವರ ಬಂಗಲೆಗೆ ರಹಸ್ಯವಾಗಿ ಪ್ರವೇಶಿಸಿದ್ದರು ಅಂತಾ ಶಾರುಖ್ ಖಾನ್ ಅವರ ಮ್ಯಾನೇಜರ್ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಸಿಗರೇಟ್ ಹಚ್ಚಿದ ಯುವತಿ – ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು

ಮೂಲಗಳ ಪ್ರಕಾರ ಸುಮಾರು 8 ಗಂಟೆಗಳ ಕಾಲ ಶಾರುಖ್ ಖಾನ್ ಅವರ ಪರ್ಸನಲ್ ಮೇಕಪ್ ರೂಂನಲ್ಲಿ ಅವಿತಿದ್ದರು. ವಿಚಾರ ಬಹಿರಂಗವಾದ ಕೂಡಲೇ ಇಬ್ಬರನ್ನೂ ಮುಂಬೈನ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಶಾರುಖ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬಂಗಲೆಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ ಕರೆ ಮಾಡಿ ಇಬ್ಬರು ಅಪರಿಚಿತರು ಬಂಗಲೆಗೆ ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ಶಾರುಖ್ ಅವರ ಬಂಗಲೆಯ ಮೂರನೇ ಮಹಡಿಯಲ್ಲಿರುವ ಮೇಕಪ್ ಕೋಣೆಯಲ್ಲಿಅವಿತಿದ್ದರು. ರಾತ್ರಿ 3 ರಿಂದ ಬೆಳಿಗ್ಗೆ 10:30 ರವರೆಗೆ ಶಾರುಖ್ ಖಾನ್ ಗಾಗಿ ಕಾಯುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ಎಫ್‌ಐಆರ್ ಪ್ರಕಾರ, ಮನ್ನತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸತೀಶ್ ಎಂಬಾತ ಶಾರುಖ್ ಖಾನ್ ಅವರ ಮೇಕಪ್ ರೂಂ ಅನ್ನು ಸ್ವಚ್ಛಗೊಳಿಸಲು ಬಂದಿದ್ದಾರೆ. ಈ ವೇಳೆ ಆಗಂತುಕರಿಬ್ಬರು ಅಡಗಿಕೊಂಡಿದ್ದನ್ನು ನೋಡಿದ್ದಾರೆ. ಅದರ ನಂತರ ಸತೀಶ್ ಅವರಿಬ್ಬರನ್ನೂ ಹಿಡಿದು ಅಲ್ಲಿಂದ ಮನೆಯ ಲಾಬಿಗೆ ಕರೆದೊಯ್ದಿದ್ದಾರೆ. ಆಗ ಶಾರುಖ್ ಖಾನ್ ಈ ಇಬ್ಬರನ್ನು ನೋಡಿ ಇದ್ದಕ್ಕಿದ್ದಂತೆ ಆಘಾತಕ್ಕೊಳಗಾದರು. ಇದಾದ ನಂತರ ಮನ್ನತ್ ನ ಸಿಬ್ಬಂದಿ ಬಂದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.

ಬಂಧಿತ ಆರೋಪಿಗಳಿಬ್ಬರು ಗುಜರಾತ್‌ನ ಭರೂಚ್‌ ನಿವಾಸಿಗಳು ಎಂದು ತಿಳಿದುಬಂದಿದೆ.  ಹೆಸರು ಪಠಾಣ್ ಸಾಹಿಲ್ ಸಲೀಂ ಖಾನ್ ಮತ್ತು ರಾಮ್ ಸರಾಫ್ ಕುಶ್ವಾಹ ಎಂದು ತಿಳಿದುಬಂದಿದೆ. ಇಬ್ಬರಲ್ಲಿಯೂ ಯಾವುದೇ ಅನುಮಾನಾಸ್ಪದ ವಿಚಾರ ಪತ್ತೆಯಾಗಿಲ್ಲ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದ್ದು, ಬಳಿಕ ಇಬ್ಬರ ಕುಟುಂಬಸ್ಥರು ಬಂದು ಜಾಮೀನು ನೀಡಿ ಬಿಡಿಸಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ಇಬ್ಬರೂ ಮನ್ನತ್‌ನಲ್ಲಿ ಗೋಡೆ ಹಾರಿ ಒಳಗೆ ಹೋಗುತ್ತಿದ್ದಾಗ ಒಬ್ಬ ಆರೋಪಿಯ  ಮೂಗಿಗೆ ಗಾಯವಾಗಿದೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಸಿಬ್ಬಂದಿ ಆತನನ್ನು ಠಾಣೆಗೆ ಕರೆತಂದರು ಎಂದು ಪೋಲಿಸರು ತಿಳಿಸಿದ್ದಾರೆ.

suddiyaana