ಬೌದ್ಧ ಧರ್ಮದ ವಿಧಿ ವಿಧಾನದಂತೆ ಸಂಸದ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ

ಬೌದ್ಧ ಧರ್ಮದ ವಿಧಿ ವಿಧಾನದಂತೆ ಸಂಸದ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ

ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು  ಅಸ್ತಂಗತರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ  ಸಂಸದ ಭಾನುವಾರ ತಡರಾತ್ರಿ ಮೃತಪಟ್ಟಿದ್ದರು. ಮಂಗಳವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ಅಶೋಕಪುರಂನ ಡಾ.ಬಿ.ಆರ್ ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಬೌದ್ಧ ಧರ್ಮದ ವಿದಿ-ವಿಧಾನದಂತೆ ನೆರವೇರಿತು.

ಇದನ್ನೂ ಓದಿ: ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ವಿಧಿವಶ

ಅಂತ್ಯಕ್ರಿಯೆಗೂ ಮುನ್ನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಮೃತರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಈ ವೇಳೆ ಸಾವಿರಾರು ಜನ ಸೇರಿದ್ದು, ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ ಸಚಿವ ಮಹದೇವಪ್ಪ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈಸೂರು – ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ವಡೆಯರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆದಿದೆ.

ಅಂತ್ಯಕ್ರಿಯೆಯ ವೇಳೆ ಬೆಂಗಳೂರಿನ ಮಹಾಬೋಧಿಯ ಆನಂದ ಬಂತೇಜಿ, ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ ನೇತೃತ್ವದಲ್ಲಿ ವಿಧಿ-ವಿಧಾನಗಳು ನೆರವೇರಿತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಬೌದ್ಧ ಬಂತೇಜಿಗಳಿಗೆ ವಸ್ತ್ರದಾನ, ಹಣ್ಣುಗಳ ಅರ್ಪಣೆ, ಪುಣ್ಯಾನುಮೋದನೆ ಬಳಿಕ ಕುಟುಂಬಸ್ಥರು ಗೌರವ ಸಲ್ಲಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೈಸೂರಿನ ಅಶೋಕಪುರಂನ ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಮ್ಮೆ ಸಚಿವರಾಗಿ ಕೆಲಸ ಮಾಡಿ ಕಳೆದ ತಿಂಗಳು ರಾಜಕೀಯ ನಿವೃತ್ತಿ ಪಡೆದು ವಿಶ್ರಾಂತಿ ಜೀವನ ಆರಂಭಿಸಿದ್ದರು. ಶ್ರೀನಿವಾಸ್ ಪ್ರಸಾದ್ ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ.

Shwetha M

Leave a Reply

Your email address will not be published. Required fields are marked *