ಶೃಂಗೇರಿಯಲ್ಲಿ ವೋಟ್ ಡಕಾಯಿತಿಯಾಗಿದೆ – ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ

ಶೃಂಗೇರಿಯಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲೂ ಅವರ ಸರ್ಕಾರ ಇತ್ತು. ಅವರು ಹೇಳುವ ಪ್ರಕಾರ ಡಬಲ್ ಎಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಸಂಚು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಮಾತನಾಡಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜೇಗೌಡ ಅವರು ಕಳೆದ ಚುನಾವಣೆಯಲ್ಲಿ 201 ಮತಗಳ ಅಂತರದಲ್ಲಿ ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಅವರ ಎದುರಾಳಿ ಬಿಜೆಪಿಯ ಜೀವರಾಜ್ ಅವರಿಗೆ 58,970 ಮತಗಳು ಬಂದಿದ್ದವು.
ಇವಿಎಂನಲ್ಲಿ ರಾಜೇಗೌಡರಿಗೆ 58,602 ಮತಗಳು ಬಂದಿದ್ದವು. ಅಂಚೆಯಲ್ಲಿ 569 ಮತಗಳು ಬಂದಿದ್ದವು. ಜೀವರಾಜ್ ಅವರಿಗೆ ಇವಿಎಂನಲ್ಲಿ 58,278 ಮತಗಳು ಬಂದಿದ್ದವು. ಅಂಚೆಯಲ್ಲಿ 692 ಮತಗಳು ಬಂದಿದ್ದವು. ಇವೆಲ್ಲವೂ ಅರ್ಹ ಮತಗಳೆಂದು ಚುನಾವಣಾಧಿಕಾರಿಗಳು, ಏಜೆಂಟ್ಗಳು ಸಹಿ ಮಾಡಿ ಫಲಿತಾಂಶ ಘೋಷಿಸಿದ್ದರು.
ಘೋಷಣೆ ಆದ ಬಳಿಕ ಜೀವರಾಜ್ ಅವರು ಅಕ್ರಮ ಆಗಿದೆ ಎಂದು ರಾಜ್ಯ ಹೈಕೋರ್ಟ್ನಲ್ಲಿ ಮರು ಎಣಿಕೆಗೆ ದಾವೆ ಹೂಡಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ, 6-03-2026ರಲ್ಲಿ ಮರು ಎಣಿಕೆಗೆ ನಿರ್ದೇಶನ ನೀಡಿತ್ತು. ಮರು ಎಣಿಕೆಯಲ್ಲಿ ರಾಜೇಗೌಡರಿಗೆ 314 ಮತಗಳು ಮಾತ್ರ ಅರ್ಹ ಎಂದು ಆಗುತ್ತದೆ. 255 ಮತಗಳು ಅನರ್ಹ ಎಂದು ಆಗುತ್ತದೆ. ಜೀವರಾಜ್ ಅವರಿಗೆ ಮರು ಎಣಿಕೆಯಲ್ಲಿ 690 ಮತಗಳು ಲಭಿಸಿವೆ. ಬಿಜೆಪಿಯವರು ಕ್ರಿಮಿನಲ್ ಸಂಚು ಮಾಡಿ, ವೋಟ್ ಚೋರಿ ಮಾಡಿರುವುದು ಬಹಳ ಸ್ಪಷ್ಟವಾಗುತ್ತದೆ. ರಾಜೇಗೌಡರಿಗೆ ಬಿದ್ದಿದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿಯಾಗಿದೆ ಎಂದು ಆರೋಪಿಸಿದ್ದಾರೆ.
ಎಣಿಕೆ ಮಾಡಿದ ಬಳಿಕ ಎಲ್ಲಾ ದಾಖಲಾತಿಗಳನ್ನು ಟ್ರಂಕ್ನಲ್ಲಿಡಲಾಗುತ್ತದೆ. ಮತ ಎಣಿಕೆಯಾಗುವಾಗ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲೂ ಅವರ ಸರ್ಕಾರ ಇತ್ತು. ಅವರು ಹೇಳುವ ಪ್ರಕಾರ ಡಬಲ್ ಎಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ಮತಪತ್ರಗಳನ್ನು ತಿದ್ದಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಸಂಚು. ರಾಜೇಗೌಡರಿಗೆ ಮೂರನೇ ಸುತ್ತಿನಲ್ಲಿ ಲಭಿಸಿದ್ದ ಎಲ್ಲಾ 170 ಅಂಚೆ ಮತಗಳು ಈಗ ಅನರ್ಹವಾಗಿವೆ. ಅವು ಹಿಂದೆ ಮತ ಎಣಿಕೆ ಮಾಡಿದಾಗ ಅರ್ಹವಾಗಿ ಪರಿಗಣಿಸಲಾಗಿತ್ತು.
ನಮ್ಮ ಪಕ್ಷದಿಂದ ಸುಧೀರ್ ಕುಮಾರ್ ಮುರೊಳ್ಳಿ ಅವರು ಏಜೆಂಟ್ ಆಗಿದ್ದರು. ಎಲ್ಲಾ ಏಜೆಂಟರು 2023ರಲ್ಲಿ ಸಹಿ ಹಾಕಿದ ದಾಖಲೆಯಿದೆ. ಮತಗಳು ಅನರ್ಹವಾಗಿದ್ದರೆ ಆಗಲೇ ಎಲ್ಲರೂ ಆಕ್ಷೇಪ ಎತ್ತಬಹುದಾಗಿತ್ತು. ಆಗ ಯಾರೂ ಆಕ್ಷೇಪ ಎತ್ತಲಿಲ್ಲ ಯಾಕೆ?

ನೋಡಿರಿ

