ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ – ಆ.8ರಿಂದ 14 ರವರೆಗೆ ವಿಜೃಂಭಣೆಯ ಕಾರ್ಯಕ್ರಮ

ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ – ಆ.8ರಿಂದ 14 ರವರೆಗೆ ವಿಜೃಂಭಣೆಯ ಕಾರ್ಯಕ್ರಮ

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ, ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವ ಕಾರ್ಯಕ್ರಮವು  ಆ.8ರಿಂದ 14 ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದ ಸಂಪ್ರದಾಯದಂತೆ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿನಿತ್ಯ ಶ್ರೀರಾಯರಿಗೆ ವಿಶೇಷ ಪೂಜಾರಾಧನೆಗಳು, ಪ್ರಾಕಾರದಲ್ಲಿ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ದಾಸವಾಣಿ, ಸಂಗೀತ, ನೃತ್ಯ, ವಾದ್ಯಸಂಗೀತ, ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ ಶ್ರೀಮಠದ ಪ್ರಾಕಾರದ ವೇದಿಕೆಯಲ್ಲಿ ವಿದ್ವಾಂಸರಿಂದ ಶ್ರೀ ರಾಘವೇಂದ್ರಸ್ವಾಮಿಗಳ ಮಹಿಮೆ, ಅವರ ಗ್ರಂಥಗಳ ವೈಶಿಷ್ಟ್ಯ ಮುಂತಾದ ವಿಷಯಗಳ ಬಗ್ಗೆ ಪ್ರವಚನ ನಡೆಯಲಿವೆ. ಶ್ರೀರಾಯರ ಸಮಗ್ರ ಗ್ರಂಥಗಳ ಪಾರಾಯಣ, ವಿದ್ವಾಂಸರ ಪ್ರವಚನ, ಸಾಮೂಹಿಕ ಭಜನೆ, ಗ್ರಂಥಗಳ ಪ್ರಕಾಶನ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀರಾಯರ ಮೂಲಬೃಂದಾವನಕ್ಕೆ ಶ್ರೀ ಶ್ರೀನಿವಾಸದೇವರ ಶೇಷವಸ್ತ್ರವನ್ನು ಆ.8ರಂದು ಸಮರ್ಪಿಸಲಾಗುತ್ತದೆ, ಆ.10ರಂದು ಪೂರ್ವಾರಾಧನೆ ದಿನದಂದು ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀಮಠದ ಪ್ರತಿಷ್ಠಿತ ಪ್ರಶಸ್ತಿ ʼಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿʼ ʼಗುರು ಅನುಗ್ರಹ ಪ್ರಶಸ್ತಿʼ ಪ್ರದಾನ ಸಮಾರಂಭವು ನಡೆಯಲಿದೆ. ಆ.12ರಂದು ಉತ್ತರ ಆರಾಧನೆಯ ದಿನದಂದು ಬೆಳಗ್ಗೆ 10ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವವು ನಡೆಯಲಿದೆ.

ಇತ್ತೀಚಿನ ದಿನಗಳಲ್ಲಿ ಶ್ರೀರಾಯರ ದರ್ಶನಾನುಗ್ರಹಮ ಶ್ರೀಶ್ರೀಪಾದಂಗಳವರ ಆಶೀರ್ವಾದ ಪಡೆಯಲು ಮಂತ್ರಾಲಯ ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಅನೂಹ್ಯವಾಗಿ ಹೆಚ್ಚುತ್ತಿದ್ದು, ಬರುವ ಭಕ್ತರ ಯಾವುದೇ ತೊಂದರೆಯಿಲ್ಲದಂತೆ ದರ್ಶನವನ್ನು ಕಲ್ಪಿಸಲು ಉತ್ತಮವಾದ ಸರದಿಸಾಲಿನ ವ್ಯವಸ್ಥೆ, ಕಂಪಾರ್ಟ್ಮೆಂಟ್‌ಗಳು, ಮೇಲ್ಸೇತುವೆ ಇತ್ಯಾದಿಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಭಕ್ತರಿಗೆ ಅನುಕೂಲಕರವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಆರಾಧನಾ ಸಪ್ತರಾತ್ರೋತ್ಸವದ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ಡಾರ್ಮಿಟರಿ ಹಾಲ್‌, ಲಾಕರ್‌ ಸದುಪಾಯಗಳನ್ನು ಉದ್ಘಾಟಿಸಲಾಗುವುದು. ಅದೇ ರೀತಿ ಶ್ರೀಮಠದ ಸಮೀಪದಲ್ಲೇ ನಿರ್ಮಿಸಿರುವ ಪುಷ್ಕರಣಿ, ಶ್ರೀರಾಯರ ಮೂಲಬೃಂದಾವನದ ಮುಂದಿನ ಶಿಲಾಸ್ತಂಭಗಳಿಗೆ ಸುವರ್ಣಲೇಪಿತ ಕವಚಗಳನ್ನು ತೊಡಿಸುವಿಕೆ, ಶಿಲಾಮಂಟಪದ ದಕ್ಷಿಣ ಭಾಗಕ್ಕೆ ಸುವರ್ಣಕವಚ ಅಳವಡಿಸುವಿಕೆ ಮುಂತಾದವುಗಳ ಲೋಕಾರ್ಪಣೆ ನಡೆಯಲಿದೆ.

 

Kishor KV